ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಮೈಸೂರು-ಚನ್ನರಾಯಪಟ್ಟಣ ಪಟ್ಟಣ ರಾಜ್ಯ ಹೆದ್ದಾರಿಯಲ್ಲಿ ಸಂಚಾರಿ ಒತ್ತಡವಿದೆ. ಪಟ್ಟಣದ ಎಪಿಎಂಸಿ ಮಾರುಕಟ್ಟೆ, ಎಲ್ಐಸಿ ಕಟ್ಟಡ, ಖಾಸಗಿ ಆಸ್ಪತ್ರೆ, ಚಿತ್ರಮಂದಿರ, ದಲಿತ ವಿದ್ಯಾರ್ಥಿ ನಿಲಯ, ಪ್ರವಾಸಿ ಮಂದಿರ, ಸರ್ಕಾರಿ ಕಚೇರಿಗಳು, ಶಾಲೆಗಳು, ಕಾಲೇಜು ಸೇರಿದಂತೆ ಹಲವು ಸಾರ್ವಜನಿಕ ಸಂಪರ್ಕ ಕೇಂದ್ರಗಳು ಮತ್ತು ಪ್ರಮುಖ ವ್ಯಾಪಾರ ಕೇಂದ್ರಗಳು ಈ ರಸ್ತೆಯ ಎರಡೂ ಬದಿಗಳಲ್ಲಿವೆ.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ, ಕಾಲೇಜುಗಳು, ಪೊಲೀಸ್ ಠಾಣೆ ಸೇರಿದಂತೆ ಹತ್ತು ಹಲವು ಕಡೆ ಹೋಗಬೇಕಾದ ಸಾವಿರಾರು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಇಲ್ಲಿನ ಪ್ರವಾಸಿ ಮಂದಿರ ವೃತ್ತದ ಮೂಲಕವೇ ಹಾದುಹೋಗಬೇಕು. ಸದರಿ ರಸ್ತೆಯ ಮೇಲಿನ ಸಂಚಾರ ದಟ್ಟಣೆ ಕಡಿಮೆ ಮಾಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಸದುದ್ದೇಶದಿಂದ ರಾಜ್ಯ ಸರ್ಕಾರ ಸದರಿ ರಸ್ತೆಯನ್ನು ಅಗಲೀಕರಣ ಮಾಡಿ ರಸ್ತೆ ಎರಡೂ ಬದಿಯಲ್ಲಿಯೂ ಪಾದಚಾರಿಗಳ ಸುಗಮ ಸಂಚಾರಕ್ಕೆ ಫುಟ್ ಪಾತ್ ನಿರ್ಮಿಸಿ ಡಿವೈಡರ್ ನಿರ್ಮಿಸುವಂತೆ ರಸ್ತೆ ಅಭಿವೃದ್ಧಿ ಪಡಿಸಲು 4.5 ಕೋಟಿ ರು. ಅನುದಾನ ನೀಡಿದೆ.ಈ ಅನುದಾನವನ್ನು ಬಳಕೆ ಮಾಡಿ ಪಟ್ಟಣದ ಹೊರವಲಯದ ಕಾಗುಂಡಿ ಹಳ್ಳದಿಂದ ನ್ಯಾಯಾಲಯ ಸಂಕೀರ್ಣದವರೆಗೆ ಒಟ್ಟು 4 ಕಿ.ಮೀ ರಸ್ತೆ ಅಭಿವೃದ್ಧಿ ಮಾಡಬೇಕು. ಈ ಕಾಮಗಾರಿಯನ್ನು ಶಾಸಕ ಎಚ್.ಟಿ.ಮಂಜು ಉದ್ಘಾಟನೆ ಮಾಡಿದ್ದು, ನಾಗಮಂಗಲ ಮೂಲದ ಗುತ್ತಿಗೆದಾರ ಸದರಿ ಕಾಮಗಾರಿಯನ್ನು ನಿರ್ವಹಿಸುತ್ತಿದ್ದಾನೆ.
ರಸ್ತೆಯ ಎರಡೂ ಬದಿಗಳಲ್ಲಿ ಪಾದಚಾರಿ ರಸ್ತೆ ನಿರ್ಮಿಸುವ ಬದಲು ಬೀದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ಜಾಗಬಿಟ್ಟು ರಸ್ತೆ ಎರಡೂ ಬದಿಗಳಲ್ಲಿಯೂ ಕಟ್ಟೆ ಕಟ್ಟಿದ್ದಾನೆ. ಇದರ ಲಾಭ ಪಡೆದ ಫುಟ್ ಪಾತ್ ವ್ಯಾಪಾರಿಗಳು ತಮ್ಮ ವ್ಯಾಪಾರದ ಅಂಗಡಿಗಳನ್ನು ಹೊಸದಾಗಿ ನಿರ್ಮಿಸಿರುವ ಫುಟ್ ಪಾತ್ ಗೂ ವಿಸ್ತರಿಸಿಕೊಂಡಿದೆ.
ಪಟ್ಟಣದ ಎಲ್ಲಾ ಪ್ರಮುಖ ರಸ್ತೆಗಳು ಫುಟ್ ಪಾತ್ ವ್ಯಾಪಾರಿಗಳಿಂದ ತುಂಬಿ ತುಳುಕುತ್ತಿದೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಕ್ರಮ ವಹಿಸುತ್ತಿಲ್ಲ. ಸಾವಿರಾರು ಜನರು, ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಸಂಚರಿಸಬೇಕಾಗಿದೆ. ನಿತ್ಯ ಅಲಲ್ಲಿ ಒಂದಲ್ಲ ಒಂದು ಅವಘಡಗಳು ಉಂಟಾಗುತ್ತಿವೆ. ಅವೈಜ್ಞಾನಿಕ ರಸ್ತೆ ಅಭಿವೃದ್ದಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರನ ವಿರುದ್ದ ಕ್ರಮ ಜರುಗಿಸಿ ನಿಯಮಾನುಸಾರ ರಸ್ತೆ ಅಭಿವೃದ್ಧಿ ಪಡಿಸುವಂತೆ ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಆಗ್ರಹಿಸಿದ್ದಾರೆ.