ಎಚ್.ಎನ್. ಪ್ರಸಾದ್
ಮಳವಳ್ಳಿ ತಾಲೂಕಿನ ಡಿ.ಹಲಸಹಳ್ಳಿಯಲ್ಲಿ ಮೇ 1ರಂದು ನಡೆಯುವ ಶ್ರೀಷಡಕ್ಷರಿ ಮಠ, ದಾಸೋಹ ಮಠ, ಮಹಾಕವಿ ಶ್ರೀಷಡಕ್ಷರದೇವ ಮಂಗಳ ಮಂಟಪದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ರಾಜಗೋಪುರ ಮತ್ತು ಬಸವ ಮಹಾದ್ವಾರ ಲೋಕಾರ್ಪಣೆಗೆ ಸಕಲ ಸಿದ್ಧತೆಗಳು ನಡೆಯುತ್ತಿವೆ.
ಹಲಗೂರಿನಿಂದ ಬಾಣಸಮುದ್ರ ಮಾರ್ಗವಾಗಿ ಗವಿಮಠಕ್ಕೆ 6 ಕಿಲೋಮೀಟರ್ ದೂರವಿದ್ದು, ಮಳವಳ್ಳಿ ಮಾರ್ಗವಾಗಿ ಬಂದು ಹಲಸಹಳ್ಳಿ ಗ್ರಾಮದ ಗವಿಮಠಕ್ಕೆ 15 ಕಿಲೋ ಮೀಟರ್ ಆಗಲಿದೆ. ಈ ಪುಣ್ಯಕ್ಷೇತ್ರದಲ್ಲಿ ಮಹಾಕವಿ ಷಡಕ್ಷರದೇವ 17ನೇ ಶತಮಾನದಲ್ಲಿ ಜೀವಿಸಿದ್ದು ,ಇವರು ಚಿಕ್ಕ ವಯಸ್ಸಿನಲ್ಲಿಯೇ ಉನ್ನತ ಜ್ಞಾನ ಪಡೆದು ಹಲವು ಕೃತಿಗಳನ್ನು ರಚಿಸಿ ಶ್ರೀಕ್ಷೇತ್ರದ ಹಿರಿಮೆ ಹೆಚ್ಚಿಸಿದ್ದಾರೆ. ಹಲವು ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ.ಭಕ್ತರ ಪಾಲಿಗೆ ನಂಬಿಕೆಯ ದೇಗುಲ:
ಈ ಸ್ಥಳದಲ್ಲಿ ನೂರೊಂದು ಋಷಿ ಮುನಿಗಳು ಲಿಂಗೈಕ್ಯರಾಗಿರುವ ಕುರುವುಗಳು ಲಿಂಗದ ರೂಪದಲ್ಲಿ ಇವೆ. ತುಂಬಾ ಪವಿತ್ರವಾದ ಏಕದಳಬಿಲ್ವ ಪತ್ರೆ ಮರ ಮಠದ ಆವರಣದಲ್ಲಿದ್ದು ಈಶ್ವರನ ಹಣೆ ಮೇಲಿರುವ ಮೂರನೇ ಕಣ್ಣು ತೆರೆದಾಗ ಲೋಕವೇ ಅಲ್ಲೋಲ ಕಲ್ಲೋಲ ವಾಗುವಂತಹ ಶಕ್ತಿ ಹೇಗಿರುತ್ತದೆಯೋ ಈ ಬಿಲ್ಪತ್ರೆಗೂ ಸಹ ಅಷ್ಟೇ ಶಕ್ತಿ ಇದೆ. ಇದಕ್ಕೆ ದಿನನಿತ್ಯ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಮಕ್ಕಳಿಲ್ಲದವರು 9 ದಿನಗಳ ಕಾಲ ಬೆಳಗಿನ ವೇಳೆ ಪೂಜೆ ಸಲ್ಲಿಸಿದರೆ ಸಂತಾನ ಪ್ರಾಪ್ತಿಯಾಗುತ್ತದೆ ಎಂಬ ಪದ್ಧತಿ ಇಂದಿಗೂ ನಡೆಯುತ್ತಿದೆ.
ಇತಿಹಾಸವಿರುವ ಗವಿಮಠಕ್ಕೆ 1993ರಲ್ಲಿ ಪಟ್ಟಾಧ್ಯಕ್ಷರಾಗಿ ಆಯ್ಕೆಯಾದ ಶ್ರೀಷಡಕ್ಷರ ಸ್ವಾಮೀಜಿ ಹಿರಿಯರ ಸಲಹೆ ಸೂಚನೆಗಳು ಹಾಗೂ ಅವರಿಂದ ಸಿಗುವ ಸಹಾಯ ಹಾಗೂ ದೇಣಿಗೆ ಪಡೆದು ಮಠಕ್ಕೆ ಹೊಸ ರೂಪ ನೀಡಿದ್ದಾರೆ. ಗವಿಮಠದಲ್ಲಿ ದಿನನಿತ್ಯ ಬಸವೇಶ್ವರನಿಗೆ ಪೂಜಾ ಪುನಸ್ಕಾರಗಳು ನಡೆಯುತ್ತದೆ ಮತ್ತು ಹಬ್ಬ ಹರಿದಿನಗಳನ್ನು ವಿಶೇಷ ಪೂಜೆಗಳು ಜರುಗುತ್ತವೆ. ಆಯುಧ ಪೂಜೆ ದಿನ ಬನ್ನಿ ಮರಕ್ಕೆ ಪೂಜೆ ಹಾಗೂ ದೇವರ ತೆಪ್ಪೋತ್ಸವ ಸಹ ವಿವಿಧ ಮಠಾಧೀಶರ ಸಮ್ಮುಖದಲ್ಲಿ ನಡೆಯುತ್ತದೆ. ತುಮಕೂರು, ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಅಪಾರ ಭಕ್ತಾದಿಗಳನ್ನು ಒಳಗೊಂಡಿದ್ದು ಭಕ್ತರು ದೇವಸ್ಥಾನಕ್ಕೆ ಬಂದು ತಮ್ಮ ತನು ಮನವನ್ನು ಅರ್ಪಿಸಿ ಮಠದ ಅಭಿವೃದ್ದಿಗೆ ಸಹಕಾರಿಯಾಗಿದ್ದಾರೆ.
- ಮಹದೇವಸ್ವಾಮಿ, ಮಠದ ಭಕ್ತರು
ಗವಿಮಠದ ಬಸವೇಶ್ವರ ದೇವರನ್ನು ನಂಬಿ ಪೂಜೆ ಪುನಸ್ಕಾರಗಳನ್ನು ಭಕ್ತರು ಮಾಡುತ್ತಿದ್ದಾರೆ. ಈ ಸ್ಥಳವನ್ನು ಬೆಂಗಳೂರಯ್ಯ ಎಂದು ಸಹ ಕರೆಯುತ್ತಾರೆ. ಈಗಿನ ಷಡಕ್ಷರ ಸ್ವಾಮೀಜಿ ಮಠವನ್ನು ಅಭಿವೃದ್ಧಿಪಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ಧಿಗೆ ಭಕ್ತರ ಸಹಕಾರ ಮುಖ್ಯ.
ಇಂದಿನಿಂದ ಪೂಜೆ ಪುನಸ್ಕಾರಗಳು ಆರಂಭ, ಮೇ 1 ರಂದು ಉದ್ಘಾಟನೆ
ಶ್ರೀಷಡಕ್ಷರಿ ಮಠ, ದಾಸೋಹ ಮಠ, ಮಹಾಕವಿ ಶ್ರೀಷಡಕ್ಷರದೇವ ಮಂಗಳ ಮಂಟಪದ ನೂತನ ಕಟ್ಟಡಗಳ ಉದ್ಘಾಟನೆ ಹಾಗೂ ರಾಜಗೋಪುರ ಮತ್ತು ಬಸವ ಮಹಾದ್ವಾರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಕನಕಪುರ ಶ್ರೀದೇಗುಲ ಮಠಾಧ್ಯಕ್ಷ ಶ್ರೀ.ಡಾ.ಮುಮ್ಮಡಿನಿರ್ವಾಣ ಸ್ವಾಮೀಜಿ ಹಾಗೂ ಶ್ರೀಡಾ.ಚನ್ನಬಸವ ಸ್ವಾಮೀಜಿ ನೇತೃತ್ವದಲ್ಲಿ 29ರವರೆಗೆ ಮಠದಲ್ಲಿ ಧಾರ್ಮಿಕ ಪೂಜಾ ವಿಧಿ ವಿದಾನಗಳು ನಡೆಯಲಿವೆ. ಏ.29ರಂದು ವಿಮಾನಗೋಪುರ ಕಳಶಾರೋಹಣ ಹಾಗೂ ಕುಂಭಾಭಿಷೇಕ ನಡೆಯಲಿದೆ.
ಮೇ 1ರಂದು ಧಾರ್ಮಿಕರ ಕಾರ್ಯಕ್ರಮ ನಡೆಯಲಿದೆ. ವಿವಿಧ ಮಠಗಳ ಶ್ರೀಗಳು, ಮಾಜಿ ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ ಸೇರಿದಂತೆ ಸಚಿವರು, ಶಾಸಕರು, ರಾಜಕೀಯ ಮುಖಂಡರು ಉದ್ಯಮಗಳು ಭಾಗವಹಿಸಲಿದ್ದಾರೆ. ಜೊತೆಗೆ ಹಲವು ಮಠಗಳ ಸ್ವಾಮೀಜಿಗಳ ಜೊತೆಗೆ 40 ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದ್ದು ಎಲ್ಲರಿಗೂ ದಾಸೋಹದ ವ್ಯವಸ್ಥೆ ಮಾಡಲಾಗಿದೆ.