ಎಸ್ಸೆಸ್ಸೆಲ್ಸೀಲಿ ಹಳಗನ್ನಡ, ನಡುಗನ್ನಡ : ಮಕ್ಕಳು ಗಡಗಡ!

KannadaprabhaNewsNetwork |  
Published : Apr 28, 2026, 01:45 AM ISTUpdated : Apr 28, 2026, 11:07 AM IST
SSLC

ಸಾರಾಂಶ

ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ವ್ಯಾಕರಣಕ್ಕೆ ಸಂಬಂಧಿಸಿದ ಹೆಚ್ಚು ಅಧ್ಯಾಯಗಳ ಹೊರೆ, ಹಳಗನ್ನಡ, ನಡುಗನ್ನಡ ಪಾಠಗಳ ಕಠಿಣತೆಯೇ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳಲು ಪ್ರಮುಖ ಕಾರಣ ಎನ್ನುವುದು ಸ್ವತಃ ಪ್ರೌಢಶಾಲಾ ಕನ್ನಡ ಭಾಷಾ ಬೋಧಕ ಶಿಕ್ಷಕರ ಅಭಿಪ್ರಾಯ.

ಲಿಂಗರಾಜು ಕೋರಾ

 ಬೆಂಗಳೂರು :  ಎಸ್ಸೆಸ್ಸೆಲ್ಸಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ವ್ಯಾಕರಣಕ್ಕೆ ಸಂಬಂಧಿಸಿದ ಹೆಚ್ಚು ಅಧ್ಯಾಯಗಳ ಹೊರೆ, ಹಳಗನ್ನಡ, ನಡುಗನ್ನಡ ಪಾಠಗಳ ಕಠಿಣತೆಯೇ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳಲು ಪ್ರಮುಖ ಕಾರಣ ಎನ್ನುವುದು ಸ್ವತಃ ಪ್ರೌಢಶಾಲಾ ಕನ್ನಡ ಭಾಷಾ ಬೋಧಕ ಶಿಕ್ಷಕರ ಅಭಿಪ್ರಾಯ.

ಅಲ್ಲದೆ, ಶಾಲಾ ಹಂತದಲ್ಲಿ ಭಾಷೆಯನ್ನು ಭಾಷೆಯಾಗಿ ಕಲಿಸುವ ಪಠ್ಯ ವಿಷಯಗಳಿಗಿಂತ ದೀರ್ಘವಾದ ಸಾಹಿತ್ಯಕ ಗದ್ಯಗಳು, ಭಾಷಾ ವಿದ್ವತ್‌ಗೆ ಸಂಬಂಧಿಸಿದ ಅಂಶಗಳನ್ನು ಹೆಚ್ಚು ಅಡಕವಾಗಿಸಿರುವುದು ಕೂಡ ಮಕ್ಕಳಿಗೆ ಹೊರೆಯಾಗುತ್ತಿದೆ. ಜೊತೆಗೆ ಕಲಿಕೆ ಕಷ್ಟವಾಗುತ್ತಿದೆ ಎನ್ನುತ್ತಾರೆ ವಿಷಯ ತಜ್ಞರು.

ಸುಮಾರು 180 ಪುಠಗಳ ಕನ್ನಡ ಭಾಷಾ ಪಠ್ಯಪುಸ್ತಕದಲ್ಲಿ ಎಂಟು ಗದ್ಯ, ಎಂಟು ಪದ್ಯ, ಆರು ಪೂರಕ ಅಧ್ಯಯನ ಪಾಠಗಳಿವೆ. ಇವುಗಳಲ್ಲಿ ಹಳಗನ್ನಡ, ನಡುಗನ್ನಡಕ್ಕೆ ಸಂಬಂಧಿಸಿದ ಕೆಲ ಅಧ್ಯಾಯಗಳು ಕಠಿಣವಾಗಿವೆ ಎನ್ನುವುದು ಬಿಟ್ಟರೆ ಶಿಕ್ಷರ ಬೇರೆ ಆಕ್ಷೇಪವಿಲ್ಲ. ಆದರೆ, ಈ ಗದ್ಯ, ಪದ್ಯ ವಿಷಯಗಳಿಗಿಂತ ಸಂಧಿ, ಸಮಾಸ, ರಗಳೆ, ಛಂದಸ್ಸು, ಅಲಂಕಾರ, ಷಟ್ಪದಿ, ವಿಭಕ್ತಿ ಪ್ರತ್ಯಯ, ತತ್ಸಮ ತದ್ಭವ, ವೃತ್ತಗಳು, ತದ್ಧಿತಾಂತಗಳು, ವಾಕ್ಯಪ್ರಕಾರ ಹೀಗೆ ವ್ಯಾಕರಣಕ್ಕೆ ಸಂಬಂಧಿಸಿದ ವಿಷಯಗಳು ದೊಡ್ಡದಾಗಿವೆ. ಪ್ರೌಢ ಶಾಲೆಯಲ್ಲಿ 8, 9 ಮತ್ತು 10 ಈ ಮೂರೂ ತರಗತಿಯಲ್ಲಿ ನಿಯಮಿತವಾಗಿ ಕಲಿಸಬೇಕಾದ ಎಲ್ಲಾ ವ್ಯಾಕರಣಗಳನ್ನೂ ಒಟ್ಟಾಗಿ 10ನೇ ತರಗತಿಗೇ ತಂದಿಟ್ಟಿರುವುದು ಮಕ್ಕಳಿಗೆ ಬಹಳ ಕಷ್ಟವಾಗುತ್ತಿದೆ.

ಒಂದೊಂದೂ ವ್ಯಾಕರಣಗಳನ್ನು ಅರ್ಥ ಮಾಡಿಕೊಳ್ಳುವವರೆಗೆ ಬಹಳ ಕಷ್ಟದಾಯಕ. ಕೆಲವೊಂದು ವ್ಯಾಕರಣಗಳು ಶಿಕ್ಷಕರಿಗೇ ತಿಳಿದಿರುವುದಿಲ್ಲ. ಅವುಗಳನ್ನು ಮೊದಲು ತಾವು ಅರ್ಥಮಾಡಿಕೊಂಡು ಬೋಧಿಸುವುದು ಒಂದು ಸವಾಲಾದರೆ, ಮಕ್ಕಳಿಗೆ ಅರ್ಥವಾಗಿಸುವುದು, ಕಲಿಸುವುದು ಇನ್ನೂ ದೊಡ್ಡ ಸವಾಲಾಗಿದೆ. ವ್ಯಾಕರಣ ಭಾಗದಲ್ಲಿ ಅಭ್ಯಾಸಕ್ಕೆ ಅಗತ್ಯಕ್ಕಿಂತ ಹೆಚ್ಚು ಅಂಶಗಳನ್ನು ನೀಡಲಾಗಿದೆ ಎನ್ನುತ್ತಾರೆ ಚಿಕ್ಕಬಳ್ಳಾಪುರ ಶಾಲೆಯೊಂದರ ಹೆಸರೇಳಲಿಚ್ಛಿಸದ ಕನ್ನಡ ವಿಷಯ ಶಿಕ್ಷಕ.

ಕಠಿಣ ವ್ಯಾಕರಣಕ್ಕೆ 19 ಅಂಕ:

ಒಂದೆಡೆ 10ನೇ ತರಗತಿಯ ಕನ್ನಡ ಭಾಷಾ ಪಠ್ಯದಲ್ಲಿ ವ್ಯಾಕರಣಗಳನ್ನು ಅಗತ್ಯಕ್ಕಿಂತ ಹೆಚ್ಚು ಸೇರಿಸಲಾಗಿದೆ. ಗದ್ಯ, ಪದ್ಯ ವಿಷಯಗಳ ಅಧ್ಯಯನಕ್ಕಿಂತ ಹೆಚ್ಚು ಸಮಯವನ್ನು ಮಕ್ಕಳು ಈ ಹತ್ತಾರು ವ್ಯಾಕರಣಗಳನ್ನು ಓದಿ ಅರ್ಥಮಾಡಿಕೊಳ್ಳುವುದಕ್ಕೇ ಕಳೆಯುತ್ತಾರೆ. ಅದರಲ್ಲೂ ಕಲಿಕಾ ಮಟ್ಟ ಕಡಿಮೆ ಇರುವವರಿಗೆ ಅಥವಾ ಹಿಂದುಳಿದವರಿಗೆ ಇವುಗಳು ಅರ್ಥವಾಗುವುದೇ ಕಷ್ಟ. ಕೊನೆಗೆ ಇಷ್ಟೆಲ್ಲಾ ವ್ಯಾಕರಣ ಓದಿಕೊಂಡಿದ್ದಕ್ಕೆ ಪರೀಕ್ಷೆಯಲ್ಲಿ ಮಕ್ಕಳಿಗೆ ಕೇವಲ 19 ಅಂಕಗಳಿಗೆ ಮಾತ್ರ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಉಳಿದಂತೆ ಗದ್ಯ ಮತ್ತು ಪದ್ಯ ಪಾಠಗಳಿಗೆ ತಲಾ 28 ಅಂಕ, ಪೂರಕ ಅಧ್ಯಯನದ ಅಧ್ಯಾಯಗಳಿಗೆ 9 ಅಂಕ, ಅಪಠಿತ ಗದ್ಯಕ್ಕೆ 4, ಪತ್ರ ಬರವಣಿಗೆ, ಪ್ರಬಂಧ ರಚನೆಗೆ ತಲಾ 5 ಅಂಕ ಸೇರಿ ಅಧ್ಯಾಯವಾರು 100 ಅಂಕಗಳಿಗೆ ಪ್ರಶ್ನೆಗಳನ್ನು ನಿಗದಿಪಡಿಸಲಾಗಿದೆ.

ಇನ್ನು, ಮಕ್ಕಳು ಕನ್ನಡಲ್ಲಿ ಫೇಲಾಗುತ್ತಿರುವುದಕ್ಕೆ ಶಿಕ್ಷಕರು ನೀಡುವ ಇನ್ನಿತರೆ ಕಾರಣಗಳ ಪೈಕಿ ಹಿಂದಿ, ಇಂಗ್ಲೀಷ್‌ ಭಾಷಾ ವಿಷಯಗಳಿಗೆ ಹೋಲಿಸಿದರೆ ಕನ್ನಡ ಭಾಷೆಯ ಪಠ್ಯಪುಸ್ತಕ ಅಷ್ಟು ಸರಳವಾಗಿಲ್ಲದಿರುವುದು. ಘಟಕ ಪರೀಕ್ಷೆ ಬದಲಾಗಿ ಪಾಠ ಆಧಾರಿತ ಮೌಲ್ಯಾಂಕನ ಮಾಡುವುದು. ದೀರ್ಘವಾದ ಗದ್ಯಗಳು ಮತ್ತು ಪ್ರಶ್ನೋತ್ತರಗಳು, ಪಠ್ಯದ ಪುಟಗಳ ಸಂಖ್ಯೆಯೇ ದೊಡ್ಡದಿರುವುದು ಕೂಡ ಮಕ್ಕಳಿಗೆ ಓದಿನಲ್ಲಿ ನಿರಾಸಕ್ತಿ ಹುಟ್ಟಿಸುತ್ತಿದೆ ಎಂಬ ಅಭಿಪ್ರಾಯಗಳು ಸೇರಿವೆ. ಜೊತೆಗೆ ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಸರಿಯಾಗಿ ಕನ್ನಡ ಬೋಧನೆ ಆಗುತ್ತಿಲ್ಲ. ವಿಷಯ ಶಿಕ್ಷಕರ ಕೊರತೆಯೂ ಇದಕ್ಕೆ ಕಾರಣ ಎನ್ನುವುದು ಶಿಕ್ಷಕರ ಅಭಿಪ್ರಾಯ. 

ಪ್ರೌಢ ಶಾಲಾ ಹಂತದ ಕನ್ನಡ ಭಾಷಾ ಪಠ್ಯದಲ್ಲಿ ಪಠ್ಯಕ್ರಮ ಹೆಚ್ಚೇನೂ ಇಲ್ಲ. ಆದರೆ, ವಿಷಯಗಳಲ್ಲಿ ಕಠಿಣತೆಯ ಮಟ್ಟ ಜಾಸ್ತಿ ಇದೆ. ಹಳಗನ್ನಡ, ನಡುಗನ್ನಡವೇ ಶೇ.50ರಿಂದ 60ರಷ್ಟಿದೆ. ಹೊಸಗನ್ನಡ ಶೇ.20ರಿಂದ 30ಕ್ಕೆ ಸೀಮಿತ ಮಾಡಿದ್ದಾರೆ. ಸಾಹಿತ್ಯ ಸರಳವಾಗಿ ಹಾಗೂ ಹೊಸಗನ್ನಡದಲ್ಲಿ ಇದ್ದರೆ ಮಕ್ಕಳಿಗೆ ಕಲಿಯಲು ಸಾಧ್ಯವಾಗುತ್ತದೆ. ಆಡು ಭಾಷೆಗಿಂತ ಹೆಚ್ಚು ಕಠಿಣ ಭಾಷೆ ಇಟ್ಟಾಗ ಮಕ್ಕಳಿಗೆ ಕಷ್ಟವಾಗುತ್ತದೆ. ಕೆಲವು ವಿಷಯಗಳನ್ನು ಶಿಕ್ಷಕರೇ ಅಥೈಸಲಾಗದಷ್ಟು ಕಠಿಣವಾಗಿವೆ. ಹಾಗಾಗಿ ಕನ್ನಡದಲ್ಲಿ ಹೆಚ್ಚು ಮಕ್ಕಳು ಫೇಲಾಗುತ್ತಿದ್ದಾರೆ ಎನ್ನುವುದು ನನ್ನ ಭಾವನೆ.

- ಮಂಜುನಾಥ್‌, ಪ್ರೌಢ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಕನ್ನಡ ಭಾಷಾ ಶಿಕ್ಷಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಆರ್‌ಆರ್‌ ನಗರದ ಸುತ್ತ ಇಂದು ವಿದ್ಯುತ್‌ ವ್ಯತ್ಯಯ
ಬೆಂಗ್ಳೂರು-ಮುಂಬೈ ವಂದೇಭಾರತ್‌ ಸ್ಲೀಪರ್ ಸಿದ್ಧ!