ಮೀನುಗಾರಿಕೆ ಆಧುನಿಕರಣಗೊಂಡಂತೆ ಅದರ ವಿಸ್ತಾರ ಮತ್ತು ವ್ಯಾಪ್ತಿಯು ಅಗಾಧ
ಕನ್ನಡಪ್ರಭ ವಾರ್ತೆ ಮೈಸೂರು
ತಳ ಹಾಗೂ ವಂಚಿತ ಸಮುದಾಯಗಳಿಗೆ ಅಧಿಕಾರ ಸಿಕ್ಕಾಗ ಮಾತ್ರ ಸಂವಿಧಾನದ ಆಶಯಗಳು ಈಡೇರಲು ಸಾಧ್ಯ. ಹೀಗಾಗಿ, ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಬಲವರ್ಧನೆಗೆ ಕೇಂದ್ರ ಸರ್ಕಾರವು ರಾಷ್ಟ್ರೀಯ ಮೀನುಗಾರರ ನೀತಿಯನ್ನು ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್ ಕುಮಾರ್ ಆಗ್ರಹಿಸಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗವು ಶುಕ್ರವಾರ ಕಾಂಗ್ರೆಸ್ ಭವನದಲ್ಲಿ ಆಯೋಜಿಸಿದ್ದ ಜಿಲ್ಲಾ ಸಂವಾದ ಹಾಗೂ ಜಿಲ್ಲಾ ಪದಾಧಿಕಾರಿಗಳು ಹಾಗೂ ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲಾ ಕಾಂಗ್ರೆಸ್ ಸಮಿತಿ ಮೀನುಗಾರರ ವಿಭಾಗಕ್ಕೆ ವಿಶೇಷವಾದ ಮನ್ನಣೆ ನೀಡಿದ್ದು, ಜಿಲ್ಲೆಯಲ್ಲಿ ಮೀನುಗಾರರಿಗೆ ಹಲವಾರು ಸಂಕಷ್ಟಗಳಿವೆ. ಮೀನುಗಾರಿಕೆ ಆಧುನಿಕರಣಗೊಂಡಂತೆ ಅದರ ವಿಸ್ತಾರ ಮತ್ತು ವ್ಯಾಪ್ತಿಯು ಅಗಾಧವಾಗಿ ಬೆಳೆಯುತ್ತಿದ್ದು, ಇದರ ಉಪಯೋಗಗಳು ನಿಜವಾದ ಮೀನುಗಾರರು ಪಡೆದುಕೊಳ್ಳಬೇಕು ಎಂದರು.ಒಳನಾಡು ಮೀನುಗಾರರ ಸಂಘದ ಮಾಜಿ ಅಧ್ಯಕ್ಷ ಸಿದ್ದಲಿಂಗರಾಜು ಮಾತನಾಡಿ, ಮೀನುಗಾರರಿಗೆ ಹಲವಾರು ಸಮಸ್ಯೆಗಳಿದ್ದು, ಈ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಗಳು ಹೆಚ್ಚಿನ ಗಮನ ಹರಿಸಬೇಕು. ಮೀನುಗಾರಿಕೆ ಮಾಡಲು ಯಾವುದೇ ನಿರ್ದಿಷ್ಟ ಜಾತಿಯಲ್ಲಿ ಹುಟ್ಟಬೇಕಾಗಿಲ್ಲ. ಯಾರು ಬೇಕಾದರೂ ಇದನ್ನು ಮುಕ್ತವಾಗಿ ಮಾಡಬಹುದು ಎಂದು ಹೇಳಿದರು.ಬಂಡವಾಳಶಾಹಿಗಳ ಆರ್ಭಟದಿಂದ ಬಡ ಮೀನುಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಸರ್ಕಾರದ ಯೋಜನೆಗಳ ದುರುಪಯೋಗವಾಗುತ್ತಿದ್ದು, ಸಹಕಾರ ಸಂಘಗಳ ಅವ್ಯವಹಾರದಿಂದ ಒಬ್ಬರ ಹಿತಕ್ಕಾಗಿ ಎಲ್ಲರ ನಾಶವಾಗುತ್ತಿದ್ದರೆ. ಸರ್ಕಾರ ನೀಡುತ್ತಿರುವ ಬಲೆಗಳು, ದೋಣಿಗಳು ಉಳ್ಳವರ ಪಾಲಾಗುತ್ತಿವೆ. ಪ್ರಭಾವ ಬಳಸಿ ಬಡ ಮೀನುಗಾರರಿಗೆ ಮೋಸ ಮಾಡುತ್ತಿದ್ದು, ಒಳನಾಡು ಮೀನುಗಾರಿಕೆ ಬಹಳ ಕಷ್ಟವಾಗಿದ್ದು, ಸ್ಥಳೀಯ ಶಾಸಕರ ಈ ಸಂಬಂಧ ಹೆಚ್ಚಿನ ಗಮನಹರಿಸಬೇಕು ಎಂದು ಅವರು ಮನವಿ ಮಾಡಿದರು.ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷ ಮಂಜುನಾಥ್ ಬಿ. ಸುಣಗಾರ್ ಮಾತನಾಡಿ, ಮೀನುಗಾರರು ಆರ್ಥಿಕವಾಗಿ, ಸಾಮಾಜಿಕ ತುಳಿತಕ್ಕೆ ಒಳಗಾಗಿದ್ದು, ಇವರನ್ನು ಸಮಾಜದ ಮುನ್ನಡೆಗೆ ತರುವುದೇ ನಮ್ಮ ಈ ಘಟಕದ ಉದ್ದೇಶ. ಕರಾವಳಿ ಭಾಗದಲ್ಲಿ ಹೆಚ್ಚು ಮೀನುಗಾರಿಕೆ ನಡೆಯುವುದಕ್ಕಿಂತ ಒಳನಾಡು ಪ್ರದೇಶದಲ್ಲಿ ಹೆಚ್ಚು ವ್ಯವಹಾರ ನಡೆಯುತ್ತದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸರ್ಕಾರಕ್ಕೆ ಸರಿಯಾದ ಕೊಡುತ್ತಿಲ್ಲ ಎಂದರು.ಜಿಲ್ಲಾ ಮೀನುಗಾರರ ಘಟಕದ ಅಧ್ಯಕ್ಷ ಎಸ್. ಸಿದ್ದಯ್ಯ, ಡಿಸಿಸಿ ಉಪಾಧ್ಯಕ್ಷ ಹೆಡತಲೆ ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಎಂ. ಶಿವಪ್ರಸಾದ್, ಉತ್ತನಹಳ್ಳಿ ಶಿವಣ್ಣ, ಕಾರ್ಯದರ್ಶಿಗಳಾದ ಎನ್. ಲಕ್ಷ್ಮಣ್, ಎನ್.ಆರ್.ಎಂ. ಮಂಜು, ಸಾ.ಮಾ. ಯೋಗೇಶ್, ಜವರೇಗೌಡ, ಪ್ರವೀಣ್ ಸಿದ್ದಲಿಂಗಪುರ ಮೊದಲಾದವರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.