ಮೈಸೂರು ಈಗ ಸಿಗ್ನಲ್ ಲೈಟುಗಳ ನಗರಿಯಾಗುತ್ತಿದೆ!

KannadaprabhaNewsNetwork |  
Published : Apr 03, 2026, 01:15 AM IST
37 | Kannada Prabha

ಸಾರಾಂಶ

ಉದ್ಯಾನ ನಗರಿ, ಅರಮನೆಗಳ ನಗರಿ, ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ, ನಂಬರ್ ಒನ್‌ ಸ್ವಚ್ಛ ನಗರಿ ಎಂದು ಬೀಗುತ್ತಿರುವ ಮೈಸೂರು ಈಗ ಸಿಗ್ನಲ್ ಲೈಟುಗಳ ನಗರಿಯಾಗುತ್ತಿದೆ.ನಾಲ್ಕು ರಸ್ತೆಗಳು ಕೂಡುವ ಕಡೆಗಳಲ್ಲೆಲ್ಲಾ ಸಿಗ್ನಲ್ ಲೈಟುಗಳು ತಲೆಯೆತ್ತುತ್ತಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಉದ್ಯಾನ ನಗರಿ, ಅರಮನೆಗಳ ನಗರಿ, ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ, ನಂಬರ್ ಒನ್‌ ಸ್ವಚ್ಛ ನಗರಿ ಎಂದು ಬೀಗುತ್ತಿರುವ ಮೈಸೂರು ಈಗ ಸಿಗ್ನಲ್ ಲೈಟುಗಳ ನಗರಿಯಾಗುತ್ತಿದೆ.ನಾಲ್ಕು ರಸ್ತೆಗಳು ಕೂಡುವ ಕಡೆಗಳಲ್ಲೆಲ್ಲಾ ಸಿಗ್ನಲ್ ಲೈಟುಗಳು ತಲೆಯೆತ್ತುತ್ತಿವೆ.

ವಾಹನಗಳ ಸಂಚಾರ ಹೆಚ್ಚಾಗಿ ಇಲ್ಲದ ಕಡೆಯೂ ಸಹ ಸಾಲಾಗಿ ಸಿಗ್ನಲ್ ಲೈಟುಗಳನ್ನು ಅಳವಡಿಸಿರುವುದರಿಂದ ಎ ಟಿ ಜೆ ( ಆರ್ಟಿಫಿಷಿಯಲ್ ಟ್ರಾಫಿಕ್ ಜಾಮ್) ನಿರ್ಮಾಣವಾಗಿದೆ. ಇಂತಹ ಅವೈಜ್ಞಾನಿಕ, ಅನಧಿಕೃತ, ಕೃತಕ ಬುದ್ದಿಮತ್ತೆಯ ಸಿಗ್ನಲ್ ಲೈಟುಗಳ ಕೃಪೆಯಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ದಾರಿದೀಪವಾಗಬೇಕಾದ ಸಿಗ್ನಲ್ ಲೈಟುಗಳು ದಾರಿಮುಳ್ಳಾಗಿವೆ.

ಮೈಸೂರು ನಗರದ ಹಲವೆಡೆ ಸಿಗ್ನಲ್ ಲೈಟುಗಳು ಕುಲಗೆಟ್ಟು ನೇತಾಡುತ್ತಿವೆ. ಆ ಲೈಟುಗಳನ್ನು ಹೊತ್ತ ಕಂಬಗಳು ನಿರ್ನಾಮವಾಗುತ್ತಿವೆ,ವೃತ್ತಗಳಲ್ಲಿ ಇರುವ ಕಂಬಗಳು ಕುಲಗೆಟ್ಟಿವೆ.ಈ ವಿಚಾರವನ್ನು ಪಾಲಿಕೆ,ಪ್ರಾಧಿಕಾರ,ಪೊಲೀಸ್ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದರೂ ಸಹ ಅವರಿಗೆ ಜ್ಞಾನೋದಯವಾಗಿಲ್ಲ.

ಪೊಲೀಸ್ ಆಯುಕ್ತರು, ಪಾಲಿಕೆ ಆಯುಕ್ತರು, ಎಂಡಿಎ ಆಯುಕ್ತರು, ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳು ಕೆ.ಜಿ. ಕೊಪ್ಪಲ್ ಅಂಡರ್ ಬ್ರಿಡ್ಜ್ ಬಳಿ ಇರುವ ಸಿಗ್ನಲ್ ಲೈಟುಗಳನ್ನು ದಾಟಿ ಸೇತುವೆಯ ಕೆಳಗೆ ಪ್ರವೇಶಿಸಿದರೆ ಅವರಿಗೆ ಸತ್ಯದರ್ಶನವಾದೀತು!

ಅಂತೆಯೇ ನಗರದ ರಸ್ತೆಗಳು ಗುಂಡಿ ಬಿದ್ದು ಕುಲಗೆಟ್ಟಿದ್ದರೂ ಸಹ ಇವರು ಎಚ್ಚರಗೊಂಡಿಲ್ಲ. ಪಾದಚಾರಿ ಮಾರ್ಗಗಳನ್ನೆಲ್ಲಾ ಅಕ್ರಮಾದಿತ್ತರು ಅತಿಕ್ರಮಿಸಿಕೊಂಡಿದ್ದರೂ ಇವರ ನಿದ್ರೆಗೆ ಭಂಗವಾಗಿಲ್ಲ.

ಇದಕ್ಕೆ ಕಾರಣವೇನು?

ಕಾರಣ ಇಷ್ಟೇ.., ಕೆಟ್ಟು ಹೋದ ಸಿಗ್ನಲ್ಲೈಟುಗಳು ಹಾಗೂ ಕಂಬಗಳನ್ನು ದುರಸ್ತಿ ಮಾಡಿದರೆ ಯಾವುದೇ ಲಾಭವಿಲ್ಲ. ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿ ಮಾಡಿದರೆ ಅವರಿಗೇನೂ ಪ್ರಯೋಜನವಿಲ್ಲ. ತೇಪೆ ಕಾಮಗಾರಿ ಹಾಗೂ ಸಣ್ಣ ಪುಟ್ಟ ದುರಸ್ತಿ ಕಾರ್ಯ ಮಾಡದಿರಲು ಇದೇ ಕಾರಣ.

ಲಾಭವಿಲ್ಲದ ತೇಪೆ ಕಾಮಗಾರಿ ಕೈಗೆತ್ತಿಕೊಳ್ಳಲು ಹಿಂದೇಟು ಹಾಕುವ ಈ ಮಹಾನುಭಾವರು ಹೊಸ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. ಇದಕ್ಕೆ ಈ ಸಿಗ್ನಲ್ ಲೈಟುಗಳೇ ಸಾಕ್ಷಿ.

ಕುವೆಂಪುನಗರ ಹಾಗೂ ಸುತ್ತಮುತ್ತ ಹತ್ತಾರು ಕಡೆ ಸಿಗ್ನಲ್ ಲೈಟುಗಳಿವೆ. ಈ ಸಿಗ್ನಲ್ ಲೈಟುಗಳ ಅಷ್ಟದಿಕ್ಕುಗಳಲ್ಲೂ ಪಾದಚಾರಿ ಮಾರ್ಗ ಅತಿಕ್ರಮಣವಾಗಿದೆ. ರಸ್ತೆಯ ಎಲ್ಲ ಬದಿಗಳಲ್ಲಿಯೂ ಕಾರುಗಳು ನಿಂತಿರುತ್ತವೆ. ಸಿಗ್ನಲ್ ಲೈಟುಗಳ ಕಂಬದ ಬಳಿಯೇ ಅಪಾಯಕಾರಿ ಗುಂಡಿಗಳಿವೆ. ಇವಾವುದರ ಪರಿವೆಯೇ ಇಲ್ಲದೆ ಸಿಗ್ನಲ್ ಲೈಟುಗಳು ಮಿಂಚುತ್ತಿರುತ್ತವೆ.

ರೇಲ್ವೆ ನಿಲ್ದಾಣದಿಂದ ನಂಜನಗೂಡು ರಸ್ತೆಯತ್ತ ಸಾಗುವ ಝಾನ್ಸಿ ಲಕ್ಷ್ಮೀ ಬಾಯಿ ರಸ್ತೆಯುದ್ದಕ್ಕೂ ಹತ್ತು ಭಾಗದಲ್ಲಿ ಸಿಗ್ನಲ್ ಲೈಟುಗಳಿವೆ. ಈ ಸಿಗ್ನಲ್ ಲೈಟುಗಳಿಂದಾಗಿಯೇ ಸಂಚಾರ ವ್ಯವಸ್ಥೆ ಕುಲಗೆಟ್ಟು ಹೋಗಿದೆ.

ಸುಗಮವಾಗಿ ಸಂಚರಿಸುವ ವಾಹನಗಳನ್ನು ಈ ಸಿಗ್ನಲ್ ಲೈಟುಗಳೇ ತಡೆ ಹಿಡಿದು ನಿಲ್ಲಿಸಿ ಕೃತಕ ಕಾಟಗಳನ್ನು ನೀಡುತ್ತವೆ. ಕೃತಕ ಬುದ್ದಿಮತ್ತೆಯ ಅಧಿಕಾರಿಗಳು ಹಾಗೂ ಮಂತ್ರಿಗಳಿಗೆ ಈ ಸಹಜ ಸತ್ಯ ತಿಳಿಯುವುದಿಲ್ಲ.

ಹವಾ ನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆಡಳಿತ ನಡೆಸುವ ಅಧಿಕಾರಿಗಳು ಹಾಗೂ ಝೀರೋ ಟ್ರಾಫಿಕ್ ಸೌಲಭ್ಯದೊಂದಿಗೆ ಬೆಂಗಾವಲು ವಾಹನದೊಂದಿಗೆ ಸರಾಗವಾಗಿ ಸಂಚರಿಸುವ ಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಮಂತ್ರಿಗಳಿಗೆ ಈ ಸಂಕಷ್ಟದ ಅರಿವಾಗಲು ಹೇಗೆ ಸಾಧ್ಯ?

ಕಮಿಷನಾಸಕ್ತ ಕಾಮಗಾರಿಗಳಿಗೂ ಬ್ರೇಕ್ ಬೀಳಬಹುದು

ಮೈಸೂರಿನಲ್ಲಿ ಸಂಚರಿಸುವ ಮುಖ್ಯಮಂತ್ರಿ ಹಾಗೂ ಉಸ್ತುವಾರಿ ಸಚಿವರು ಕನಿಷ್ಠ ಒಂದು ಬಾರಿಯಾದರೂ ತಮ್ಮ ಹಿಂಬಾಲಕರು, ಮುಂಬಾಲಕರು, ಬೆಂಗಾವಲು ಪಡೆ ಹಾಗೂ ಝೀರೋ ಟ್ರಾಫಿಕ್ ಸೌಲಭ್ಯಗಳನ್ನು ಬದಿಗಿಟ್ಟು ಈ ಸಿಗ್ನಲ್ ಲೈಟುಗಳ ಚಕ್ರವ್ಯೂಹವನ್ನು ಬೇಧಿಸಿ ತಮ್ಮ ಗುರಿ ಮುಟ್ಟಲು ಪ್ರಯತ್ನಿಸಿದರೆ ಅವರಿಗೂ ಈ ಸಂಕಷ್ಟದ ಅರಿವಾಗಬಹುದು. ಇದರಿಂದ ಇಂತಹ ಕಮಿಷನಾಸಕ್ತ ಕಾಮಗಾರಿಗಳಿಗೂ ಬ್ರೇಕ್ ಬೀಳಬಹುದು.

-ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಳ್ಳಕೆರೆ ಅದ್ಧೂರಿ ಲಕ್ಷ್ಮೀರಂಗನಾಥ ಸ್ವಾಮಿ ರಥೋತ್ಸವ
ವಚನಕಾರ ಕ್ಷಿತಿಜದ ಉಜ್ವಲ ನಕ್ಷತ್ರ ಅಕ್ಕ: ಪ್ರಾಧ್ಯಾಪಕಿ ಡಾ.ಗಾಯತ್ರಿ