ಗ್ರೇಟರ್ ಮೈಸೂರು ರಚನೆ ಅಧ್ಯಯನ ನಡೆಸಲು ಸಿಎಂ ಸಮ್ಮತಿ

KannadaprabhaNewsNetwork |  
Published : May 16, 2025, 02:20 AM ISTUpdated : May 16, 2025, 01:04 PM IST
11 | Kannada Prabha

ಸಾರಾಂಶ

ನರಸಿಂಹರಾಜ, ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಿಗೆ ಹೋಲಿಸಿದರೆ ಚಾಮುಂಡೇಶ್ವರಿ ಕ್ಷೇತ್ರ ದೊಡ್ಡದು. ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆ, 17 ಗ್ರಾಪಂಗಳಿವೆ

 ಮೈಸೂರು:  ನಗರದ ನಾಲ್ಕು ದಿಕ್ಕುಗಳಲ್ಲಿ ಇರುವ ಬಡಾವಣೆಗಳನ್ನು ಸೇರಿಸಿಕೊಂಡು ಗ್ರೇಟರ್ ಮೈಸೂರು ರಚನೆಗೆ ಅಧ್ಯಯನ ನಡೆಸಲು ಮುಖ್ಯಮಂತ್ರಿ ಸಮ್ಮತಿಸಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. 

ಮೈಸೂರು ಮಹಾ ನಗರ ಪಾಲಿಕೆಯ ವಲಯ 3 ಕಚೇರಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ವಾರ್ಡ್ ಗಳ ಫಲಾನುಭವಿಗಳಿಗೆ ಬಿ- ಖಾತೆಗಳ ಪತ್ರ, ಫಲಾನುಭವಿ ಮಹಿಳೆಯರಿಗೆ ಹೊಲಿಗೆ ಯಂತ್ರವನ್ನು ವಿತರಿಸಿ ಮಾತನಾಡಿದ ಅವರು, ನರಸಿಂಹರಾಜ, ಚಾಮರಾಜ, ಕೃಷ್ಣರಾಜ ಕ್ಷೇತ್ರಗಳಿಗೆ ಹೋಲಿಸಿದರೆ ಚಾಮುಂಡೇಶ್ವರಿ ಕ್ಷೇತ್ರ ದೊಡ್ಡದು. ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆ, 17 ಗ್ರಾಪಂಗಳಿವೆ. 

ಹೀಗಾಗಿ, ಗ್ರೇಟರ್ ಮೈಸೂರು ರಚನೆ ಮಾಡುವಂತೆ ಒತ್ತಡ ಹೇರುತ್ತಿದ್ದೇನೆ. ಕೆಲವರು ವಿರೋಧ ಮಾಡಿರುವುದರಿಂದ ಸಿಎಂ ಅಧ್ಯಯನ ನಡೆಸಿ ತೀರ್ಮಾನ ಮಾಡಲು ಒಪ್ಪಿದ್ದಾರೆ ಎಂದರು.ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ 5 ವಾರ್ಡುಗಳಿಗೆ ಸರ್ಕಾರ, ನಗರ ಪಾಲಿಕೆ, ಮುಡಾದಿಂದ ಅನುದಾನ ಕೊಡಿಸಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಸಮಸ್ಯೆಗಳು ದೊಡ್ಡದಷ್ಟಿದ್ದರೂ ಹಂತ ಹಂತವಾಗಿ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.

ಪಾಲಿಕೆ ವಲಯ 3ರ ಕಚೇರಿ ವ್ಯಾಪ್ತಿಯಿಂದ ಅತಿ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಶೇ.5 ರಷ್ಟು ತೆರಿಗೆ ವಿನಾಯಿತಿ ನೀಡಿ ಪಾವತಿಸಲು ಜೂ.30 ರವರೆಗೆ ಅವಕಾಶ ಕೊಡಲಾಗಿದೆ. ಅದೇ ರೀತಿ ಬಿ-ಖಾತಾ ಮಾಡಿಕೊಡಲು ಗಡುವು ವಿಸ್ತರಿಸಲಾಗಿದೆ. ಇದರಿಂದ ಬಿ-ಖಾತೆ ಮಾಡಿಸಿಕೊಳ್ಳದ ಮಾಲೀಕರು ಆಸ್ತಿ ನೋಂದಣಿ ಮಾಡಿಸಿಕೊಂಡು ಖಾತೆ ಹೊಂದಬೇಕು ಎಂದು ಅವರು ತಿಳಿಸಿದರು.

ಪಾಲಿಕೆಯ ಶೇ.22.45 ಅನುದಾನದಡಿ 85 ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.ಪಾಲಿಕೆಯ ಉಪ ಆಯುಕ್ತ ಜಿ.ಎಸ್. ಸೋಮಶೇಖರ್, ವಲಯ 3ರ ಆಯುಕ್ತ ಸತ್ಯಮೂರ್ತಿ, ಕಂದಾಯಾಧಿಕಾರಿ ಬಸವಣ್ಣ, ಪಾಲಿಕೆ ಮಾಜಿ ಸದಸ್ಯೆ ಸವಿತಾ ಸುರೇಶ್ ಮೊದಲಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ