ದಸರಾ: ಡ್ರೋನ್‌ ಶೋನಿಂದ ಗಿನ್ನೆಸ್‌ ದಾಖಲೆ ಯತ್ನ

Published : Oct 10, 2026, 10:47 AM IST
dasara 2026

ಸಾರಾಂಶ

ದಸರಾ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಮೈಸೂರು ನಗರದ 199 ರಸ್ತೆಗಳು, 123 ವೃತ್ತಗಳು ಹಾಗೂ 80 ವಿವಿಧ ಪ್ರತಿಕೃತಿಗಳು ಸೇರಿ ಒಟ್ಟು 146 ಕಿ.ಮೀ. ವ್ಯಾಪ್ತಿಯಲ್ಲಿ ವಿಶೇಷ ವಿನ್ಯಾಸದ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ

ಬೆಂಗಳೂರು : ದಸರಾ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದಿಂದ ಮೈಸೂರು ನಗರದ 199 ರಸ್ತೆಗಳು, 123 ವೃತ್ತಗಳು ಹಾಗೂ 80 ವಿವಿಧ ಪ್ರತಿಕೃತಿಗಳು ಸೇರಿ ಒಟ್ಟು 146 ಕಿ.ಮೀ. ವ್ಯಾಪ್ತಿಯಲ್ಲಿ ವಿಶೇಷ ವಿನ್ಯಾಸದ ವಿದ್ಯುತ್ ದೀಪಾಲಂಕಾರ ಮಾಡಲಾಗುತ್ತಿದೆ. ಅ.11ರಿಂದ 31ರವರೆಗೆ ಒಟ್ಟು 21 ದಿನಗಳ ಕಾಲ ದೀಪಾಲಂಕಾರ ಕಂಗೊಳಿಸಲಿದೆ ಎಂದು ಪ್ರವಾಸೋದ್ಯಮ ಸಚಿವ ಜಾರ್ಜ್‌ ಇದೇ ವೇಳೆ ತಿಳಿಸಿದರು.

ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ದಸರಾಗೆ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ವಿವರ ಹಂಚಿಕೊಂಡರು. ತಾತ್ಕಾಲಿಕವಾಗಿ 3,106 ಕೆವಿಎ ವಿದ್ಯುತ್ ಭಾರ ವ್ಯವಸ್ಥೆ ಮಾಡಲಾಗಿದ್ದು, ಒಟ್ಟು 2,60,920 ಯೂನಿಟ್ ವಿದ್ಯುತ್ ಬಳಕೆ ಅಂದಾಜಿಸಲಾಗಿದೆ. ದೀಪಾಲಂಕಾರ ಕಾಮಗಾರಿಗೆ 2.50 ಕೋಟಿ ರು. ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ ಎಂದರು.

ಡ್ರೋನ್‌ ಶೋ: 3,500 ಎಲ್‌ಇಡಿ ಡ್ರೋನ್‌ಗಳನ್ನು ಬಳಸಿ ನಾಲ್ಕು ದಿನ ವಿಶೇಷ ಪ್ರದರ್ಶನ ಯೋಜಿಸಲಾಗಿದೆ. ಅ.17, 18, 20 ಮತ್ತು 21ರಂದು ರಾತ್ರಿ 8 ಗಂಟೆಗೆ ಡ್ರೋನ್ ಪ್ರದರ್ಶನ ನಡೆಯಲಿದೆ. ಇಷ್ಟೂ ಡ್ರೋನ್‌ಗಳನ್ನು ಏಕಕಾಲದಲ್ಲಿ ಬಳಸಿಕೊಂಡು ರಾಷ್ಟ್ರಪಕ್ಷಿ ನವಿಲಿನ ಬೃಹತ್ ಆಕೃತಿಯನ್ನು ಆಕಾಶದಲ್ಲಿ ಮೂಡಿಸಿ ಗಿನ್ನೆಸ್ ದಾಖಲೆಗೆ ಪ್ರಯತ್ನಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಜಾರ್ಜ್‌ ತಿಳಿಸಿದರು.

ದಸರಾ: ಕೆಎಸ್ಟಿಡಿಸಿ 7 ವಿಶೇಷ ಪ್ರವಾಸ ಪ್ಯಾಕೇಜ್‌

ವಿಶ್ವವಿಖ್ಯಾತ ಮೈಸೂರು ದಸರಾಕ್ಕೆ ಆಗಮಿಸುವ ಪ್ರವಾಸಿಗರಿಗಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಿಂದ (ಕೆಎಸ್‌ಟಿಡಿಸಿ) ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ ಎಂದು ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ಮೈಸೂರಿನ ಪ್ರಮುಖ ತಾಣಗಳು ಮತ್ತು ವಿದ್ಯುತ್ ದೀಪಾಲಂಕಾರವನ್ನು ವೀಕ್ಷಿಸಲು ಕೆಎಸ್‌ಟಿಡಿಸಿಯ ಜನಪ್ರಿಯ ‘ಅಂಬಾರಿ’ ಡಬಲ್ ಡೆಕ್ಕರ್ ಬಸ್ ಸೇವೆ ಇರಲಿದೆ. ಈ ಬಸ್ಸು ಹಗಲು ವೇಳೆಯಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ರತಿ ಗಂಟೆಗೊಮ್ಮೆ ಸಂಚರಿಸಲಿದೆ. ಹಗಲಿನ ಸವಾರಿಗೆ ಪ್ರತಿ ವ್ಯಕ್ತಿಗೆ ₹250 ದರ ನಿಗದಿಪಡಿಸಲಾಗಿದೆ. ಮೈಸೂರಿನ ದಸರಾಕ್ಕೆ 146 ಕಿ.ಮೀ. ವಿದ್ಯುತ್‌ ದೀಪಾಲಂಕಾರ ಇರಲಿದ್ದು, ಇದನ್ನು ವೀಕ್ಷಿಸಲು ಸಂಜೆ 6.30, ರಾತ್ರಿ 8 ಹಾಗೂ 9.30ಕ್ಕೆ ವಿಶೇಷ ಸವಾರಿಗಳು ಇರಲಿವೆ. ರಾತ್ರಿ ಸವಾರಿಯಲ್ಲಿ ಕೆಳಗಿನ ಡೆಕ್‌ಗೆ ₹250 ಹಾಗೂ ಮೇಲಿನ ಡೆಕ್‌ಗೆ ₹500 ದರ ನಿಗದಿಪಡಿಸಲಾಗಿದೆ ಎಂದರು.

7 ವಿಶೇಷ ಪ್ಯಾಕೇಜ್‌:

ಇದರ ಜೊತೆ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳನ್ನು ಪರಿಚಯಿಸುವ ಏಳು ವಿಶೇಷ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಲಾಗಿದೆ. ಊಟಿಯ ಎರಡು ದಿನಗಳ ಪ್ರವಾಸ, ಮೈಸೂರು ಸ್ಥಳೀಯ ಪ್ರವಾಸ, ಬೇಲೂರು–ಹಳೇಬೀಡು–ಶ್ರವಣಬೆಳಗೊಳ, ಕೊಡಗಿನ ಪ್ರಮುಖ ತಾಣಗಳು, ಶಿವನಸಮುದ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ನಂಜನಗೂಡು ಸೇರಿ ವಿವಿಧ ಧಾರ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ಪ್ರವಾಸಿ ತಾಣಗಳನ್ನು ಒಳಗೊಂಡ ಒಂದು ಹಾಗೂ ಎರಡು ದಿನಗಳ ಪ್ಯಾಕೇಜ್‌ಗಳು ಲಭ್ಯವಿವೆ ಎಂದು ಸಚಿವರು ವಿವರಿಸಿದರು.

ಪ್ರವಾಸ ಪ್ಯಾಕೇಜ್‌ಗಳು, ‘ಅಂಬಾರಿ’ ಬಸ್ ಸೇವೆ ಹಾಗೂ ಬುಕ್ಕಿಂಗ್ ಸಂಬಂಧಿತ ಮಾಹಿತಿಗಾಗಿ ಪ್ರವಾಸಿಗರು ಕೆಎಸ್‌ಟಿಡಿಸಿ ಸಹಾಯವಾಣಿ ಸಂಖ್ಯೆ 080-4334 4334/ 0821-2423652 ಅಥವಾ 8970656400 ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗೆ www.kstdc.co ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ info@kstdc.coಗೆ ಇ-ಮೇಲ್ ಮಾಡಬಹುದು.

PREV
Stay updated with the latest news from Mysore News (ಮೈಸೂರು ಸುದ್ದಿ) — including local governance, city/civic developments, tourism and heritage, culture and festivals, crime reports, environment, education, business and community events from Mysore district and city on Kannada Prabha News.
Read more Articles on

Recommended Stories

ಆದುನಿಕ ತಂತ್ರಜ್ಞಾನ ಬಳಸಿ ಕೊಳ್ಳಿ
ಹಳೆ ಮೈಸೂರು ಭಾಗಕ್ಕೆ ನಾಲ್ವಡಿ ಹೆಸರಿಡಿ