;Resize=(412,232))
ಮೈಸೂರು: ಮಾಜಿ ಶಾಸಕ ಹಾಗೂ ಕೆಎಸ್‌ಆರ್‌ಟಿಸಿ ಮಾಜಿ ಅಧ್ಯಕ್ಷ ಆರ್.ವಿ. ದೇವರಾಜ್ (67) ಅವರು ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ. ಬುಧವಾರ ಜನ್ಮದಿನ ಇದ್ದ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನ ಪಡೆಯಲು ಮೈಸೂರಿಗೆ ಆಗಮಿಸಿದ್ದರು. ಈ ವೇಳೆ ಅವರಿಗೆ ಹೃದಯಾಘಾತವಾಗಿದೆ.
ಬೆಂಗಳೂರು : ಸೋಮವಾರ ರಾತ್ರಿ ಮೈಸೂರಿನಲ್ಲಿ ನಿಧನರಾದ ಕಾಂಗ್ರೆಸ್ ಮುಖಂಡ ಆರ್.ವಿ. ದೇವರಾಜ್ (67), ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ಜನಿಸಿ ಅಲ್ಲೇ ಜೀವನ ಕಟ್ಟಿಕೊಂಡು ಕೊನೆಯವರೆಗೂ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ನಾಯಕ. ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ.
1957 ರಲ್ಲಿ ಜನಿಸಿದ ಅವರು 3 ಬಾರಿ ಶಾಸಕ, ಒಂದು ಬಾರಿ ಪರಿಷತ್ ಸದಸ್ಯರಾಗಿದ್ದರು. 2004ರಲ್ಲಿ ಅವರು ಚಾಮರಾಜಪೇಟೆ ಕ್ಷೇತ್ರವನ್ನು ಎಸ್.ಎಂ. ಕೃಷ್ಣ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ಸುದ್ದಿ ಮಾಡಿದ್ದರು.
1989ರಲ್ಲಿ ಮೊದಲ ಬಾರಿಗೆ ಶಾಸಕರಾದ ಅವರು 2 ಬಾರಿ ಕೆಎಸ್ಆರ್ಟಿಸಿ ಅಧ್ಯಕ್ಷ ಹಾಗೂ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. ಆದರೆ ಕೊನೆಯವರೆಗೆ ಸಚಿವ ಸ್ಥಾನ ಒಲಿದಿರಲಿಲ್ಲ.
ಕಾಂಗ್ರೆಸ್‌ನಿಂದ ರಾಜಕೀಯ ಜೀವನ:
ಆರ್.ವಿ. ದೇವರಾಜ್ ಅವರ ತಂದೆ ರೊನೂರ್ ವೆಂಕಟೇಶಪ್ಪನವರು ಬೆಂಗಳೂರಿನ ಸಿಟಿ ಮಾರ್ಕೆಟ್‌ನಲ್ಲಿ ತರಕಾರಿ ವ್ಯಾಪಾರಿಯಾಗಿದ್ದರು. ಯುವ ಕಾಂಗ್ರೆಸ್ ಸದಸ್ಯರಾಗಿ, ಪದಾಧಿಕಾರಿಯಾಗಿ, ಬೆಂಗಳೂರು ನಗರ ಸೇವಾದಳದ ಅಧ್ಯಕ್ಷರಾಗಿ ಹಂತ ಹಂತವಾಗಿ ಬೆಳೆದು ಎಐಸಿಸಿ ಸದಸ್ಯ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಆದವರು.
ರಾಜಕೀಯ ಏಳುಬೀಳು:
1989ರಲ್ಲಿ ಚಾಮರಾಜಪೇಟೆಯಲ್ಲಿ ಮೊದಲ ಬಾರಿಗೆ ಶಾಸಕರಾದ ಅವರು 1994 ರಲ್ಲಿ ಪ್ರಮೀಳಾ ನೇಸರ್ಗಿ ವಿರುದ್ಧ ಸೋತಿದ್ದರು. 1999 ರಲ್ಲಿ ಪ್ರಮೀಳಾ ನೇಸರ್ಗಿ ವಿರುದ್ಧ ಗೆದ್ದು ಸೋಲಿನ ಸೇಡು ತೀರಿಸಿಕೊಂಡಿದ್ದರು.
2004 ರಲ್ಲಿ ಗೆಲ್ಲುವ ಎಲ್ಲಾ ಅವಕಾಶಗಳಿದ್ದರೂ ಎಸ್.ಎಂ. ಕೃಷ್ಣ ಅವರಿಗಾಗಿ ಚಾಮರಾಜಪೇಟೆ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆಗ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಚಂದ್ರು ವಿರುದ್ಧ ಗೆದ್ದಿದ್ದರು.
ಬಳಿಕ ಕೃಷ್ಣ ಮಹಾರಾಷ್ಟ್ರ ರಾಜ್ಯಪಾಲರಾಗಿ ತೆರಳಿ ರಾಜೀನಾಮೆ ನೀಡಿದರೂ ಉಪ ಚುನಾವಣೆಯಲ್ಲಿ ದೇವರಾಜ್ ಸ್ಪರ್ಧಿಸಲಿಲ್ಲ.
ಬದಲಿಗೆ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಚಿಕ್ಕಪೇಟೆಯಿಂದ ಸ್ಪರ್ಧಿಸಿದ್ದರು. 2008 ರಲ್ಲಿ ಚಿಕ್ಕಪೇಟೆಯಿಂದ ಸ್ಪರ್ಧಿಸಿದ್ದ ಅವರು ಡಾ. ಹೇಮಚಂದ್ರ ಸಾಗರ್ ವಿರುದ್ಧ ಸೋತಿದ್ದರು. 2013ರಲ್ಲಿ ಬಿಜೆಪಿಯ ಉದಯ್ ಗರುಡಾಚಾರ್ ವಿರುದ್ಧ ಗೆದ್ದು 2016 ರಲ್ಲಿ ಕೊಳಚೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದರು. ಆದರೆ, 2018 ಹಾಗೂ 2023ರ ಚುನಾವಣೆಯಲ್ಲಿ ಉದಯ್ ಗರುಡಾಚಾರ್ ವಿರುದ್ಧ ಸೋತಿದ್ದರು. ಅಂದಿನಿಂದ ಅಷ್ಟಾಗಿ ರಾಜ್ಯದ ಮುಖ್ಯವಾಹಿನಿ ರಾಜಕಾರಣದಲ್ಲಿ ಕಾಣಿಸಿಕೊಂಡಿರಲಿಲ್ಲ.