ಅನಿಲ ಸೋರಿಕೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಗರದ ಯರಗನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೈಸೂರು : ಅನಿಲ ಸೋರಿಕೆಯಿಂದಾಗಿ ಒಂದೇ ಕುಟುಂಬದ ನಾಲ್ವರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ನಗರದ ಯರಗನಹಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಯರಗನಹಳ್ಳಿ ನಿವಾಸಿಗಳಾದ ಕುಮಾರಸ್ವಾಮಿ (45), ಪತ್ನಿ ಮಂಜುಳಾ (39), ಪುತ್ರಿಯರಾದ ಅರ್ಚನಾ (19) ಮತ್ತು ಸ್ವಾತಿ (17) ಮೃತಪಟ್ಟ ದುರ್ದೈವಿಗಳು.
ಮೃತರು ಮೂಲತಃ ಚಿಕ್ಕಮಗಳೂರಿನವರಾಗಿದ್ದು, 30 ವರ್ಷಗಳಿಂದ ಮೈಸೂರಿನಲ್ಲಿ ವಾಸಿಸುತ್ತಿದ್ದರು. ಸೋಮವಾರ ಕುಮಾರಸ್ವಾಮಿ ಕುಟುಂಬ ಸಂಬಂಧಿಕರ ಮದುವೆಗೆಂದು ಚಿಕ್ಕಮಗಳೂರಿಗೆ ಹೋಗಿ ಸಂಜೆ ಮನೆಗೆ ಹಿಂದಿರುಗಿದೆ. ಬಳಿಕ ಕುಮಾರಸ್ವಾಮಿಗೆ ಬಂಧುಗಳು ದೂರವಾಣಿ ಕರೆ ಮಾಡಿದ್ದು, ಯಾರೂ ಸ್ವೀಕರಿಸಿಲ್ಲ. ಈ ಹಿನ್ನೆಲೆಯಲ್ಲಿ ನೆರೆಹೊರೆಯವರಿಗೆ ಕರೆ ಮಾಡಿ ಕುಮಾರಸ್ವಾಮಿ ಬಗ್ಗೆ ವಿಚಾರಿಸಿದಾಗ ಅಕ್ಕಪಕ್ಕದವರು ಮನೆ ಬಾಗಿಲು ಬಡಿದಿದ್ದಾರೆ. ಬಾಗಿಲು ತೆಗೆಯದ ಕಾರಣ ಕಿಟಕಿ ಬಾಗಿಲು ತೆಗೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ನೇತೃತ್ವದ ತಂಡ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಕುಮಾರಸ್ವಾಮಿ ಕುಟುಂಬ ಬಟ್ಟೆ ಇಸ್ತ್ರಿ ಕೆಲಸ ಮಾಡುತ್ತಿದ್ದು, ಇಸ್ತ್ರಿಪೆಟ್ಟಿಗೆಗೆ ಗ್ಯಾಸ್ ಬಳಸುತ್ತಿದ್ದರು. ಸೋಮವಾರ ರಾತ್ರಿ ಮನೆಗೆ ಬಂದವರು ಕಿಟಕಿಗಳನ್ನು ಮುಚ್ಚಿ ಮಲಗಿದ್ದರು. ಆದರೆ, ಈ ವೇಳೆ ಅನಿಲ ಸೋರಿಕೆಯಾಗಿ ಎಲ್ಲರೂ ಮೃತಪಟ್ಟಿದ್ದಾರೆ. ಎಲ್ಲರ ಕಿವಿ ಮತ್ತು ಮೂಗು, ಬಾಯಲ್ಲಿ ರಕ್ತ ಸೋರಿಕೆಯಾಗಿದೆ. ಅಗ್ನಿಶಾಮಕ ದಳ, ಎಫ್ಎಸ್ಎಲ್ ತಂಡ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಅನಿಲ ಸೋರಿಕೆಯಾಗಿರುವುದು ತಿಳಿದುಬಂದಿದೆ.
ಮನೆಯಲ್ಲಿ ಮೂರು ಸಿಲಿಂಡರ್ ಇದ್ದು, ಒಂದು ಸಿಲಿಂಡರ್‌ನಲ್ಲಿ ಮಾತ್ರ ಅನಿಲ ಸೋರಿಕೆಯಾಗಿದೆ. ಉಳಿದೆರಡು ಸಿಲಿಂಡರ್ ಖಾಲಿ ಇತ್ತು ಎಂದು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದರು. ಈ ಸಂಬಂಧ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.