ಕನ್ನಡಪ್ರಭ ವಾರ್ತೆ ಮೈಸೂರು

ಕರ್ನಾಟಕ ರಾಜ್ಯ ಪೊಲೀಸ್ ರನ್- 2026 ಅಂಗವಾಗಿ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್ ಸಂಯುಕ್ತವಾಗಿ ಭಾನುವಾರ ಆಯೋಜಿಸಿದ್ದ ಸೇಫ್‌ ಮೈಸೂರು ಮ್ಯಾರಾಥಾನ್ ಓಟದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು.

ಡ್ರಗ್‌ ಮುಕ್ತ ಕರ್ನಾಟಕ, ದೈಹಿಕ ಸಾಮರ್ಥ್ಯ ವೃದ್ಧಿ ಹಾಗೂ ಸೈಬರ್‌ ಪ್ರಕರಣಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಮ್ಯಾರಾಥಾನ್ ನಲ್ಲಿ ಪೊಲೀಸರು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸಾವಿರಾರು ಸ್ಪರ್ಧಿಗಳು ಪಾಲ್ಗೊಂಡು ಯಶಸ್ವಿಗೊಳಿಸಿದರು.

ನಮ್ಮ ಪೊಲೀಸ್ ನಮ್ಮ ಹೆಮ್ಮೆ ಧ್ಯೇಯ ವಾಕ್ಯದೊಂದಿಗೆ ನಡೆದ ಸೇಫ್ ಮೈಸೂರು ಮ್ಯಾರಾಥಾನ್ ಗೆ ಮೈಸೂರು ಅರಮನೆ ಆವರಣದಲ್ಲಿ ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಚಾಲನೆ ನೀಡಿದರು.

5 ಕಿ.ಮೀ ಮತ್ತು 10 ಕಿ.ಮೀ ವಿಭಾಗದಲ್ಲಿ ನಡೆದ ಮ್ಯಾರಾಥಾನ್ ಗೆ ಚಲನಚಿತ್ರ ನಟ ವಿನಯ್ ರಾಜಕುಮಾರ್, ನಟಿಯರಾದ ಅಮೃತಾ ಅಯ್ಯಂಗಾರ್, ಬೃಂದಾ ಆಚಾರ್ ಅವರು ಮ್ಯಾರಾಥಾನ್ ಗೆ ತಾರಾಮೆರೆಗು ಹೆಚ್ಚಿಸಿದರು.


ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗದಿಂದ 5 ಕಿ.ಮೀ ಹಾಗೂ 10 ಕಿ.ಮೀ ಓಟವು ಆರಂಭವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಆರಂಭಿಕ ಸ್ಥಳದಲ್ಲೇ ಅಂತ್ಯವಾಯಿತು.

ಈ ವೇಳೆ ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್. ಯುಕೇಶ್ ಕುಮಾರ್, ದಕ್ಷಿಣ ವಲಯ ಐಜಿಪಿ ಡಾ.ಎಂ.ಬಿ. ಬೋರಲಿಂಗಯ್ಯ, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿಸಿಪಿ ಕೆ.ಎಸ್. ಸುಂದರ್ ರಾಜ್, ಡಿಸಿಎಫ್ ಪರಮೇಶ್ ಮೊದಲಾದವರು ಇದ್ದರು.

----

ಬಾಕ್ಸ್...

ಮ್ಯಾರಾಥಾನ್ ವಿಜೇತರು

ಜಿಲ್ಲಾ ಮತ್ತು ನಗರ ಪೊಲೀಸ್‌ ಭಾನುವಾರ ಆಯೋಜಿಸಿದ್ದ ಸೇಫ್ ಮೈಸೂರು ಮ್ಯಾರಾಥಾನ್ ಓಟದ ಸ್ಪರ್ಧೆಯಲ್ಲಿ ಈ ಕೆಳಕಂಡವರು ಬಹುಮಾನ ಪಡೆದರು.

10 ಕಿ.ಮೀ ಓಟ ಪುರುಷರ ವಿಭಾಗ– ಆರ್‌. ಪುರುಷೋತ್ತಮ (ಪ್ರಥಮ), ಜೆ.ಆರ್. ಕರಣ್‌ (ದ್ವಿತೀಯ), ಮಹೇಶ್‌ (ತೃತೀಯ), ಕೆ.ವಿ. ಓಂಕಾರ್‌ (4ನೇ ಬಹುಮಾನ). ಮಹಿಳಾ ವಿಭಾಗ– ಅಶ್ವಿನಿ (ಪ್ರಥಮ), ಅರ್ಥಿಕಾ (ದ್ವಿತೀಯ) ಮತ್ತು ಪ್ರಿಯಾಂಕಾ (ತೃತೀಯ) ಸ್ಥಾನ ಪಡೆದರು. ಪೊಲೀಸರು ವಿಭಾಗದಲ್ಲಿ ಪುರುಷರು– ಎಚ್‌.ಕೆ. ಮೇಘರಾಜ್‌ (ಪ್ರಥಮ), ಎಚ್‌. ವಿಠಲ್‌ (ದ್ವಿತೀಯ), ಮಹೇಶ್‌ ರಾಜ್‌ ಪಾಟೀಲ್‌ (ತೃತೀಯ), ಎ.ಎಂ. ಮಲ್ಲೇಶ್‌ (4ನೇ ಬಹುಮಾನ). ಮಹಿಳಾ ವಿಭಾಗದಲ್ಲಿ ಮಾಲಶ್ರೀ ಜಾದವ್‌ (ಪ್ರಥಮ) ಸ್ಥಾನ ಪಡೆದರು.

5 ಕಿ.ಮೀ. ಓಟ- ಸಾರ್ವಜನಿಕರು, ಪುರುಷರು– ಎಂ. ನಿತಿನ್‌(ಪ್ರಥಮ), ರೋಹನ್‌ ಬೇಕಲ್ (ದ್ವಿತೀಯ), ಎನ್‌. ದೊರೆಸ್ವಾಮಿ (ತೃತೀಯ), ಎನ್‌.ಪಿ. ಆದಿತ್ಯ (4ನೇ). ಮಹಿಳೆಯರು– ವಿದ್ಯಾ (ಪ್ರಥಮ), ವರ್ಷಿತಾ (ದ್ವಿತೀಯ), ಪ್ರಕೃತಿ (ತೃತೀಯ), ಭಾನುಪ್ರಿಯಾ (4ನೇ). ಪೊಲೀಸರ ವಿಭಾಗದಲ್ಲಿ ಪುರುಷರು– ವಿನೋದ್‌ (ಪ್ರಥಮ), ಪ್ರಭು ಜಮಖಂಡಿ (ದ್ವಿತೀಯ), ರಘುನಂದನ್‌ (ತೃತೀಯ), ಮಂಜುನಾಥ್‌ ಗಂಜಿಹಾಳ್‌ (4ನೇ). ಮಹಿಳೆಯರು– ಭುವನೇಶ್ವರಿ (ಪ್ರಥಮ), ಭಾಗ್ಯ (ದ್ವಿತೀಯ), ಅನುಷಾ (ತೃತೀಯ) ಸ್ಥಾನ ಪಡೆದರು.

-----

ಕೋಟ್...

ಕರ್ನಾಟಕ ಪೊಲೀಸ್ ಕಾರ್ಯದಕ್ಷತೆ ನಾವೆಲ್ಲಾ ಹೆಮ್ಮೆ ಪಡುವಂತೆ ಮಾಡಿದೆ. ಇಲಾಖೆಯ ಕೆಲಸ ಕಠಿಣವಾಗಿದ್ದು, ಮೈಯೆಲ್ಲಾ ಕಣ್ಣಾಗಿರಬೇಕು. ಜನರಲ್ಲಿ ಮಾಹಿತಿ, ಶಿಕ್ಷಣ, ಸಂವಹನದ ಮೂಲಕ ಜಾಗೃತಿ ಮೂಡಿಸಿ ಉತ್ತಮ ಸಮಾಜ ಕಟ್ಟುತ್ತಿರುವುದು ಮಾದರಿ ಕಾರ್ಯ.

- ಡಾ.ಎಚ್.ಸಿ. ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

----

ಕೋಟ್...

ಯುದ್ದ ಆರಂಭ ಆಗಿರೋದು ದುರದೃಷ್ಟಕರ. ಇಲ್ಲಿನ ಪರಿಸ್ಥಿತಿ ಶಾಂತವಾಗಿದ್ದು ನಾವೆಲ್ಲರೂ ನೆಮ್ಮದಿಯಿಂದ ಇದ್ದೇವೆ. ಇದಕ್ಕೆ ನಮ್ಮ ಪೊಲೀಸ್ ವ್ಯವಸ್ಥೆ ಕಾರಣ. ಇತ್ತೀಚಿನ ದಿನಗಳಲ್ಲಿ ಯುವಕರು ಡ್ರಗ್ಸ್ ಗೆ ಆಕರ್ಷಿತರಾಗುತ್ತಿದ್ದಾರೆ. ಈ ಬಗ್ಗೆ ಯುವಕರು ಎಚ್ಚರಿಕೆಯಿಂದ ಇರಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣದತ್ತ ಗಮನ ಹರಿಸಬೇಕು. ಈ ನಿಟ್ಟಿನಲ್ಲಿ ಮಕ್ಕಳ ಪೋಷಕರು ನಿಗಾ ವಹಿಸಬೇಕು.

- ವಿನಯ್ ರಾಜಕುಮಾರ್, ಚಲನಚಿತ್ರ ನಟ