3400 ಕೋಟಿ ಟಿಡಿಆರ್‌ಗೆ ರಾಜಮನೆತನವೇ ‘ಒಡೆಯ’ರ್‌

ಬೆಂಗಳೂರು ಅರಮನೆ ಮೈದಾನದ ಭೂಮಿಯ ಬಳಕೆಗೆ ಸಂಬಂಧಿಸಿದಂತೆ 3,400 ಕೋಟಿ ರು.ಗಳ ಟಿಡಿಆರ್‌ ಹಣವನ್ನು ಮೈಸೂರು ರಾಜಮನೆತನಕ್ಕೆ ನೀಡಲು ಆದೇಶಿಸಿದೆ.

Follow Us

 ದೆಹಲಿ : ರಾಜ್ಯ ಸರ್ಕಾರಕ್ಕೆ ಬಿಗ್‌ ಶಾಕ್‌ ನೀಡಿರುವ ಸುಪ್ರೀಂಕೋರ್ಟ್‌, ಬೆಂಗಳೂರು ಅರಮನೆ ಮೈದಾನದ ಭೂಮಿಯ ಬಳಕೆಗೆ ಸಂಬಂಧಿಸಿದಂತೆ 3,400 ಕೋಟಿ ರು.ಗಳ ಟಿಡಿಆರ್‌ ಹಣವನ್ನು ಮೈಸೂರು ರಾಜಮನೆತನಕ್ಕೆ ನೀಡಲು ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾ.ಅರವಿಂದ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ, ಈ ಆದೇಶ ಹೊರಡಿಸಿದೆ. ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್‌ ರಸ್ತೆಗಳ ವಿಸ್ತರಣೆಗಾಗಿ ರಾಜ್ಯ ಸರ್ಕಾರ ವಶಪಡಿಸಿಕೊಂಡ 15 ಎಕರೆ 75 ಸೆಂಟ್ ಜಾಗಕ್ಕೆ ಈ ಟಿಡಿಆರ್‌ ಹಣ ನೀಡಬೇಕು ಎಂದು ತೀರ್ಪು ನೀಡಿದೆ.

ಇದರಿಂದಾಗಿ ಬೆಂಗಳೂರು ಅರಮನೆ ಮೈದಾನದ ಭೂಮಿಯ ವಿಷಯವಾಗಿ ರಾಜ್ಯ ಸರ್ಕಾರ ಮತ್ತು ಮೈಸೂರು ರಾಜಮನೆತನದ ನಡುವೆ ನಡೆಯುತ್ತಿರುವ ಕಾನೂನು ಸಮರದಲ್ಲಿ ಮೈಸೂರು ರಾಜವಂಶಸ್ಥರು ಮೇಲುಗೈ ಸಾಧಿಸಿದ್ದು, ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾಗಿದೆ. 3,400 ಕೋಟಿ ಟಿಡಿಆರ್‌ (ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು)ನ್ನು ರಾಜ್ಯ ಸರ್ಕಾರ ಠೇವಣಿ ಇಟ್ಟಿತ್ತು. ಸುಪ್ರೀಂಕೋರ್ಟ್‌ನ ರಿಜಿಸ್ಟ್ರಾರ್‌ನಲ್ಲಿ ಟಿಡಿಆರ್‌ ಇಡಲಾಗಿತ್ತು. ಅದನ್ನು ರಾಜವಂಶಸ್ಥರಿಗೆ ಹಸ್ತಾಂತರಿಸಬಾರದು ಎಂದು ಮಧ್ಯಂತರ ಅರ್ಜಿಯಲ್ಲಿ ಮನವಿ ಮಾಡಿತ್ತು.

ರಾಜವಂಶಸ್ಥರ ಪರ ವಕೀಲರು ಇದನ್ನು ವಿರೋಧಿಸಿದ್ದರು. ಈ ಪ್ರಕರಣದಲ್ಲಿ ಕರ್ನಾಟಕ ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸುತ್ತಿತ್ತು. ಈಗ ಈ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ತೀರ್ಪು ರಾಜವಂಶಸ್ಥರ ಪರ ಹೊರಬಿದ್ದಿದೆ.

1993ರಲ್ಲಿ ದಾಖಲಿಸಲಾಗಿರುವ ಈ ಪ್ರಕರಣದ ಮುಖ್ಯ ಅರ್ಜಿಯ ವಿಚಾರಣೆ ಸುಪ್ರೀಂಕೋರ್ಟ್ ನಲ್ಲಿ ಇನ್ನೂ ಬಾಕಿ ಇದೆ.

ಸರ್ಕಾರಕ್ಕೆ ಭಾರೀ ಹಿನ್ನಡೆ

ರಸ್ತೆ ಅಗಲಿಕರಣಕ್ಕೆ ಬೆಂಗಳೂರಲ್ಲಿ ಮೈಸೂರು ಅರಸರಿಗೆ ಸೇರಿದ ಜಾಗ ವಶಪಡಿಸಿಕೊಂಡಿದ್ದ ಸರ್ಕಾರ

ಈ ಜಾಗಕ್ಕೆ 3400 ಕೋಟಿ ರು. ಟಿಡಿಆರ್‌ ನೀಡುವಂತೆ ಈ ಹಿಂದೆ ಸರ್ಕಾರಕ್ಕೆ ಸೂಚಿಸಿದ್ದ ಸುಪ್ರೀಂಕೋರ್ಟ್‌

3400 ಕೋಟಿ ರು.ಮೊತ್ತದ ಠೇವಣಿ ಇಟ್ಟು, ಕೇಸ್‌ ಇತ್ಯರ್ಥದವರೆಗೂ ಬಳಕೆಗೆ ಷರತ್ತು ಹಾಕಿದ್ದ ಸರ್ಕಾರ

ಇದೀಗ ಷರತ್ತು ನಿಯಮ ಕೈಬಿಟ್ಟು 3400 ಕೋಟಿ ಮೊತ್ತಕ್ಕೆ ಸಮನಾದ ಟಿಡಿಆರ್‌ ಪತ್ರ ವರ್ಗಕ್ಕೆ ಆದೇಶ

Read more Articles on