;Resize=(412,232))
ಹುಲಿ ಗಣತಿಗೆ ಕ್ಯಾಮೆರಾ ಟ್ರಾಪ್ ತಂತ್ರಜ್ಞಾನ ಅಳವಡಿಸಿಕೊಂಡಿರುವ ಇಲಾಖೆ, ಜೊತೆಗೆ ಗಸ್ತು ತಿರುಗಲು, ಕಾಡಿನೊಳಗಿನ ಗಿಡ, ಮರ, ವನ್ಯಜೀವಿಗಳನ್ನು ದಾಖಲು ಮಾಡಲು ಜಿಪಿಎಸ್ ಆಧರಿತ ಇ-ಗಸ್ತು ಆಪ್ ಬಳಸುತ್ತಿದೆ. ಕಾಡಿಗೆ ಬೆಂಕಿ ಬಿದ್ದಾಗ ಅತ್ಯಂತ ತ್ವರಿತ ಮಾಹಿತಿ ನೀಡಲು ಉಪಗ್ರಹ ನೆರವು, ಮಾನವ-ವನ್ಯಜೀವಿ ಸಂಘರ್ಷ ತಡೆಯಲು ತಂತ್ರಜ್ಞಾನದ ಅಳವಡಿಕೆ ಮತ್ತು ಪರಿಹಾರ ಸಮೀಕ್ಷೆ ಮತ್ತು ವಿತರಣೆಯಲ್ಲಿ ಹೈ ಟೆಕ್ ಸ್ಪರ್ಶ ನೀಡಲಾಗಿದೆ.
ಕಾಡಿನಲ್ಲಿ ಎಲ್ಲೋ ಕಾಣಿಸಿಕೊಳ್ಳುವ ಬೆಂಕಿ….ನೂರಾರು ಕಿಲೋ ಮೀಟರ್ ಉದ್ದದ ಅರಣ್ಯದೊಳಗಿನಿಂದ ಎಲ್ಲೋ ನುಗ್ಗಿ ಜಮೀನುಗಳಿಗೆ ಹೋಗುವ ಆನೆಗಳು…ಅತ್ಯಮೂಲ್ಯ ಕಾಡನ್ನು ಯಾರು ಯಾರೋ ಮಾಡಿಕೊಂಡಿರುವ ಒತ್ತುವರಿ… ಹೀಗೆ ಅರಣ್ಯ ಇಲಾಖೆಯ ಎಲ್ಲ ಕೆಲಸಗಳೂ ಅರಣ್ಯ ಮಾನವ ಸಂಪನ್ಮೂಲದಿಂದಲೇ ನಡೆಯುತ್ತವೆ. ಅಂದರೆ, ಕಾಡಿಗೆ ಬೆಂಕಿ ಬಿದ್ದರೂ ಸಿಬ್ಬಂದಿಯೇ ಪತ್ತೆ ಹಚ್ಚಬೇಕು. ಆನೆ ಕಾಡು ದಾಟದಂತೆ ನೋಡಿಕೊಳ್ಳುವ ಜೊತೆಗೆ ಅದು ಎಲ್ಲೆಲ್ಲಿಗೆ ಹೋಗುತ್ತದೆ ಅಂತಾ ಟ್ರ್ಯಾಕ್ ಮಾಡಬೇಕು.
ಗುಡ್ಡ, ಬೆಟ್ಟ ಒತ್ತುವರಿ ಆದರೆ, ಅದನ್ನು ಅಳೆದು ಒತ್ತುವರಿ ತೆರವಿಗೂ ಸಿಬ್ಬಂದಿಯೇ ದೈಹಿಕ ಶ್ರಮ ಹಾಕಬೇಕು. ಈ ಕೆಲಸಗಳಲ್ಲಿ ಸಮಯ ಮತ್ತು ಶ್ರಮ ಬಹಳ ವ್ಯಯವಾಗುತ್ತದೆ. ಆದ್ದರಿಂದಲೇ ಸಮಯ ಮತ್ತು ಶ್ರಮ ಉಳಿಸಲು ಅರಣ್ಯ ಇಲಾಖೆ ಇದೀಗ ಹೈ ಟೆಕ್ ಆಗುತ್ತಿದೆ. ಕರ್ನಾಟಕ ಅರಣ್ಯ ಇಲಾಖೆ ದೇಶದಲ್ಲೇ ಅತಿ ವಿನೂತನ ಎನಿಸುವ ಅನೇಕ ಹೊಸ ತಂತ್ರಜ್ಞಾನ ಆಧರಿತ ಯೋಜನೆಗಳನ್ನು ಜಾರಿಗೆ ತಂದಿದೆ. ಅತ್ಯಂತ ಪ್ರಬಲವಾದ 6 ಅಂಶಗಳ ಆಡಳಿತಾತ್ಮಕ ಮತ್ತು ತಂತ್ರಜ್ಞಾನ ಆಧಾರಿತ ಕಾರ್ಯಯೋಜನೆಗಳನ್ನು ಇಲಾಖೆ ಅಳವಡಿಸಿಕೊಂಡಿದೆ. ಅವುಗಳ ವಿವರ ಇಲ್ಲಿದೆ.
1. ಇಂಜಿನಿಯರಿಂಗ್ : 432 ಕಿಲೋ ಮೀಟರ್ ರೈಲ್ವೆ ಹಳಿಗಳ ಬೇಲಿ ಕಾಡಿಗೆ ಹಾಕಲಾಗಿದೆ. 2244 ಕಿಲೋಮೀಟರ್ ಉದ್ದದ ಆನೆ ಕಂದಕ ತೋಡಲಾಗಿದೆ. ಮತ್ತು 1529 ಕಿ. ಮೀ ಉದ್ದದ ಸೋಲಾರ್ ಟೆಂಟಕಲ್ ಬೇಲಿಯನ್ನು ಆನೆ ಸಂಘರ್ಷದ ಪ್ರದೇಶಗಳಲ್ಲಿ ಅಳವಡಿಸಲಾಗಿದೆ.
2. ತಂತ್ರಜ್ಞಾನ : ಎಐ ಕ್ಯಾಮೆರಾಗಳು, ರೇಡಿಯೋ ಕಾಲರ್, ಥರ್ಮಲ್ ಡ್ರೋನ್‌ಗಳು, ಇ-ನಿಗಾ ಮತ್ತು ಅಲರ್ಟ್ ಸಾಧನಗಳನ್ನು ಅಳವಡಿಸಿಕೊಳ್ಳಲಾಗಿದೆ.
3 ಆಡಳಿತ : ರಾಜ್ಯದ 11 ವಿಭಾಗಗಳಿಗೂ ಸಂಪರ್ಕ ಕಲ್ಪಿಸುವ ಅತ್ಯಾಧುನಿಕ ಸಮಗ್ರ ಕಮಾಂಡ್ ಕಂಟ್ರೋಲ್ ಸೆಂಟರ್ ಬೆಂಗಳೂರಿನಲ್ಲಿ ಸ್ಥಾಪನೆ
4 ತ್ವರಿತ ಪ್ರತಿಕ್ರಿಯೆ : ಆನೆ ಕಾರ್ಯಪಡೆ, ರಾಪಿಡ್ ರೆಸ್ಪಾನ್ಸ್ ತಂಡಗಳು, ಸಾಕಾನೆ ಮತ್ತು ನುರಿತ ತಂಡಗಳನ್ನು ಹೊಂದಿರುವ ಆನೆ ತಡೆ ಶಿಬಿರಗಳನ್ನು ಸ್ಥಾಪಿಸಲಾಗಿದೆ.
5 ಸಮುದಾಯ : ಆನೆ ಮಿತ್ರ/ಹುಲಿ ಮಿತ್ರ ಸ್ವಯಂ ಸೇವಕರು, ಎಸ್‌ಎಂಎಸ್ ಮತ್ತು ವಾಟ್ಸಾಪ್ ಅಲರ್ಟ್‌ಗಳು, ಗ್ರಾಮ ಪಂಚಾಯ್ತಿ, ಸ್ವಯಂ ಸೇವಾ ಸಂಸ್ಥೆಗಳು ಮತ್ತು ನಾಗರಿಕ ಸಂಘ ಸಂಸ್ಥೆಗಳನ್ನೊಳಗೊಂಡ ಸಮುದಾಯಗಳ ಸಂಪರ್ಕ ಸ್ಥಾಪಿಸಲಾಗಿದೆ.
6 ವಿಜ್ಞಾನ ಮತ್ತು ಪರಿಹಾರ : ಇ-ಪರಿಹಾರ ಮತ್ತು ಡಿಜಿಟಲ್ ಟ್ರಾನ್ಸಫರ್, ಕಾಡುಪ್ರಾಣಿಗಳನ್ನು ಹಿಡಿಯುವುದು ಮತ್ತು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳು ಮತ್ತು ಸಂಭವನೀಯ ಸಂಘರ್ಷವನ್ನು ಮುಂಚೆಯೇ ಗ್ರಹಿಸಿ ಎಚ್ಚರಿಕೆ ನೀಡುವ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ವನ್ಯಜೀವಿಯಿಂದ ಬೆಳೆ ನಾಶ ಅಥವಾ ಜೀವಹಾನಿ ಸಂಭವಿಸಿದಾಗ ಅದಕ್ಕೆ ಪರಿಹಾರ ವಿತರಿಸುವಷ್ಟರಲ್ಲಿ ಸಾಕು ಸಾಕಾಗಿ ಹೋಗುತ್ತಿತ್ತು. ಆಗ ಜಾರಿಗೆ ತಂದಿದ್ದೇ ಇ-ಪರಿಹಾರ. ತಂತ್ರಜ್ಞಾನ ಅಳವಡಿಸಿಕೊಂಡ ನಂತರ ಈಗ ಜನ ಮತ್ತು ಜಾನುವಾರ ಹಾನಿಗೆ ಪರಿಹಾರ ವಿತರಣೆ ಮಿಂಚಿನ ವೇಗದಲ್ಲಿ ನಡೆಯುತ್ತಿದೆ. ಅದನ್ನೂ ಸಹ ನೇರವಾಗಿ ಸಂತ್ರಸ್ತರ ಬ್ಯಾಂಕ್ ಖಾತೆಗೆ ಡಿಜಿಟಲ್ ಪಾವತಿ ಮೂಲಕ ಜಮಾ ಮಾಡಲಾಗುತ್ತದೆ.
ಇದರ ಜೊತೆಗೆ ಮತ್ತೊಂದು ವಿನೂತನ ಮಾದರಿಯನ್ನೂ ಇಲಾಖೆ ಅಳವಡಿಸಿಕೊಂಡಿದೆ. ಆನೆಗಳು ಕಾಡನ್ನು ದಾಟಿ ಬಂದರೆ ತಕ್ಷಣವೇ ಅಲರ್ಟ್ ಸಂದೇಶ ಬರುವಂತೆ ಅತಿ ಹೆಚ್ಚು ಸಂಘರ್ಷ ಇರುವ ಪ್ರದೇಶಗಳಲ್ಲಿ ಫೆನ್ಸ್ ವಾಚ್ ತಂತ್ರಜ್ಞಾನ ಅಳವಡಿಸಲಾಗಿದೆ. ಅದೇ ರೀತಿ ಪದೇ ಪದೇ ಸಮಸ್ಯೆ ಸೃಷ್ಟಿಸುವ ಆನೆಗಳಿಗೆ ರೇಡಿಯೋ ಕಾಲರ್ ಹಾಕಿ ಅವುಗಳ ಮೇಲೆ ನಿಗಾ ಇಡಲಾಗುತ್ತದೆ. ಗರುಡಾ ಎಐ ಕ್ಯಾಮೆರಾಗಳ ಮೂಲಕ ಹಗಲು ಮತ್ತು ರಾತ್ರಿ ಆನೆಗಳ ಓಡಾಟದ ದೃಶ್ಯಗಳನ್ನು ಸೆರೆ ಹಿಡಿದು ಕಮಾಂಡ್ ಸೆಂಟರ್‌ಗಳಿಗೆ ರವಾನೆ ಮಾಡಲಾಗುತ್ತದೆ. ಜಮೀನಿಗೆ ನುಗ್ಗುವ ಆನೆಗಳನ್ನು ಥರ್ಮಲ್ ಡ್ರೋಣ್‌ಗಳ ಮೂಲಕ ಪತ್ತೆ ಹಚ್ಚಿ ಬಳಿಕ ಸಾಕಾನೆ ಮೂಲಕ ಮರಳಿ ಕಾಡಿಗೆ ಓಡಸಲು ಡ್ರೋನ್‌ಗಳ ಸಹಕಾರ ಪಡೆಯಲಾಗುತ್ತದೆ.
ಹೀಗೆ, ಅತ್ಯಂತ ಸುಧಾರಿತ ತಂತ್ರಜ್ಞಾನ ಮತ್ತು ಕಾರ್ಯಾಚರಣೆ ವಿಧಾನಗಳನ್ನು ಕರ್ನಾಟಕ ಅರಣ್ಯ ಇಲಾಖೆ ಅಳವಡಿಸಿಕೊಂಡಿದೆ. ಇದರ ಜೊತೆಗೆ ನಾನಾ ಕ್ಷೇತ್ರಗಳಲ್ಲಿರುವ ಕೊರತೆಗಳ ಪಟ್ಟಿಯನ್ನೂ ಮಾಡಿದ್ದು, ಅವುಗಳನ್ನು ಪರಿಹರಿಸಲು ಐಡಿಯಾ ಕೊಡುವಂತೆ ಸ್ಟಾರ್ಟ್ ಅಪ್‌ಗಳು ಮತ್ತು ಇಂಜಿನಿಯರಿಂಗ್ ಪ್ರತಿಭೆಗಳಿಗೆ ಆಹ್ವಾನ ನೀಡಿದೆ.
ಅರಣ್ಯ ಇಲಾಖೆಯಲ್ಲಿರುವ ಸ್ಟಾರ್ಟ್ ಅಪ್ ಅವಕಾಶಗಳು
೧. ಆನೆಗಳಿಗೆ ಹಗುರ ಮತ್ತು ಸುದೀರ್ಘ ಬಾಳಿಕೆಯ ಕಾಲರ್
೨. ಇನ್ಫ್ರಾ ಸೌಂಡ್ ಮತ್ತು ಕಂಪನ ಆಧರಿಸಿ ಆನೆ ಕಾಣಿಸಿಕೊಳ್ಳುವ ಮುನ್ನವೇ ಅವುಗಳನ್ನು ಪತ್ತೆ ಹಚ್ಚುವುದು
೩. ಬೆಂಕಿ, ಬೇಟೆಗಾರರು ಮತ್ತು ಕಾಡುಪ್ರಾಣಿಗಳ ಓಡಾಟ ಪತ್ತೆ ಹಚ್ಚುವ ಡ್ರೋನ್ ಕ್ಯಾಮೆರಾಗಳು
೪. ಪ್ರಾಣಿಗಳಿಗೆ ಅರವಳಿಕೆ ನೀಡುವ ಎಐ ಆಧರಿತ ಕ್ಯಾಮೆರಾಗಳು
೫. ಪ್ರಾಣಿಗಳನ್ನು ದೂರ ಓಡಿಸುವ ಆದರೆ ಹಾನಿಯುಂಟು ಮಾಡದ ಸಿಗ್ನಲ್ ಹೊರಸೂಸುವ ಯಂತ್ರಗಳು
೬. ಜಿಪಿಎಸ್ ಸಂಪರ್ಕ ಹೊಂದಿರುವ ಅರವಳಿಕೆ ಇಂಜೆಕ್ಷನ್ ನೀಡುವ ಡ್ರೋನ್‌ಗಳು
೭. ಸೆನ್ಸಾರ್ ಆಧಾರಿತ ಆನೆ ತಡೆ ಶಿಬಿರಗಳು
೮. ಮಳೆ, ಬೆಳೆ ಮತ್ತು ಇನ್ನಿತರೆ ಅಗತ್ಯ ಪಾರಿಸಾರಿಕ ಮಾಹಿತಿ ನೀಡುವ ತಂತ್ರಜ್ಞಾನ
೯. ಶಾಲೆಗಳಲ್ಲಿ ಎಐ ತಂತ್ರಜ್ಞಾನ,. ವಾಯ್ಸ್ ಅಲರ್ಟ್, ಎಆರ್ ಆಧಾರಿತ ಪಠ್ಯಕ್ರಮ ಅಳವಡಿಕೆ
ಈ ವಿಷಯಗಳಲ್ಲಿ ನಾವೀನ್ಯತೆ ಸಾಧಿಸಿ ತಂತ್ರಜ್ಞಾನವನ್ನು ಸುಧಾರಿಸಿಕೊಡಿ, ಮಾನವ-ವನ್ಯಜೀವಿ ಸಂಘರ್ಷವನ್ನು ಕಡಿಮೆ ಮಾಡಲು ಇಲಾಖೆ ಜೊತೆ ಕೈ ಜೋಡಿಸಿ ಎಂದು ಯುವ ಪ್ರತಿಭೆಗಳಿಗೆ ಆಹ್ವಾನ ನೀಡಲಾಗಿದೆ. ಹೆಚ್ಚಿನ ತಂತ್ರಜ್ಞಾನ ಅಳವಡಿಕೆಯಿಂದ ಕಾರ್ಯಾಚರಣೆಗಳಲ್ಲಿ ತಪ್ಪುಗಳು ನುಸುಳದಂತೆ ತಡೆಯುವ ಜೊತೆಗೆ ಸಮಸ್ಯೆಗಳಿಗೆ ಶೀಘ್ರ ಪರಿಹಾರವೂ ಸಿಗುತ್ತದೆ.