ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ.ಬಿ. ಚಂದ್ರಶೇಖರ್ಕನ್ನಡಪ್ರಭ ವಾರ್ತೆ ಮೈಸೂರು
ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಣಮಟ್ಟದ ಶಿಕ್ಷಣ ನೀಡಿದರೆ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ ಎಂದು ಕಾಲೇಜು ಶಿಕ್ಷಣ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ.ಬಿ. ಚಂದ್ರಶೇಖರ್ ತಿಳಿಸಿದರು.ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿ (ಸಿಡಿಸಿ) ಮತ್ತು ಆಂತರಿಕ ಗುಣಮಟ್ಟ ಖಾತರಿ ಘಟಕ (ಐಕ್ಯೂಎಸಿ) ಸಂಯುಕ್ತವಾಗಿ ಮಂಗಳವಾರ ಆಯೋಜಿಸಿದ್ದ ನಿರ್ಫ್ ರ್ಯಾಂಕಿಂಗ್- ಸ್ವಯಂ ಮೌಲ್ಯಮಾಪನ ಮತ್ತು ಗುಣಮಟ್ಟದ ಸುಧಾರಣೆ ಕುರಿತ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಒಳ್ಳೆಯ ಹಾಗೂ ಗುಣಮಟ್ಟದ ಶಿಕ್ಷಕನಿಂದ ಮಾತ್ರ ವಿದ್ಯಾರ್ಥಿಗಳನ್ನು ಒಳ್ಳೆಯ ವೈದ್ಯ, ಆಡಳಿತಗಾರ, ರಾಜಕಾರಣಿಗಳನ್ನು ಹೀಗೆ ಏನು ಬೇಕಾದರೂ ಮಾಡಲು ಸಾಧ್ಯವಾಗುತ್ತದೆ. ಶಿಕ್ಷಣವೆಂದರೆ ಪಠ್ಯದಲ್ಲಿರುವುದನ್ನು ಮಾತ್ರ ಬೋಧಿಸಬಾರದು. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆ ಜತೆಯಲ್ಲಿ ಅವರಿಗೆ ಮುಂದೆ ಅವಶ್ಯಕತೆ ಇರುವಂತಹ ಕೌಶಲ್ಯಗಳನ್ನು ಕಲಿಸುವಂತಹ ಕೆಲಸವನ್ನು ಬೋಧಕರು ಮಾಡಬೇಕು ಎಂದು ಅವರು ಸಲಹೆ ನೀಡಿದರು.ಪ್ರಸ್ತುತ ಯಾರೂ ಅಂಕಪಟ್ಟಿಯಲ್ಲರುವ ಅಂಕಗಳನ್ನು ನೋಡುವುದಿಲ್ಲ. ಕೇವಲ ಕೌಶಲ್ಯವನ್ನು ನೋಡುತ್ತಿದ್ದಾರೆ. ಹೀಗಾಗಿ, ಬೋಧಕರು ಪಠ್ಯದಲ್ಲಿರುವ ಪಾಠಗಳನ್ನು ಮಾತ್ರ ಮಾಡದೆ, ವಿದ್ಯಾರ್ಥಿಗಳ ಜೀವನಕ್ಕೆ ಅಗತ್ಯವಾಗಿರುವ ಕೌಶಲ್ಯ ಕಡೆಗೂ ಗಮನ ಹರಿಸಬೇಕು ಎಂದರು.
ನ್ಯಾಕ್ ಗೆ ಸಮಾನವಾದ ಮಾನದಂಡಗಳನ್ನು ನಿರ್ಫ್ ಹೊಂದಿದೆ. ಹೀಗಾಗಿ, ಪ್ರಸ್ತುತ ಕಾಲೇಜುಗಳಲ್ಲಿ ಐಕ್ಯೂಎಸಿ ಸಂಯೋಜಕರನ್ನು ನೇಮಿಸಲಾಗುತ್ತಿದೆ. ಅದೇ ರೀತಿ ನಿರ್ಫ್ ಗೂ ಸಂಯೋಜಕರನ್ನು ಪ್ರಾಂಶುಪಾಲರು ನೇಮಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಈ ಕಾರ್ಯಾಗಾರದಲ್ಲಿ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಹಾಗೂ ಐಕ್ಯೂಎಸಿ ಸಂಯೋಜಕರು ಪಾಲ್ಗೊಂಡಿದ್ದರು.
ಹಿರಿಯ ಪ್ರಾಧ್ಯಾಪಕ ಡಾ.ಎನ್.ಎಸ್. ಹರಿನಾರಾಯಣ ಅವರು ಮುಖ್ಯ ಭಾಷಣ ಮಾಡಿದರು.ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಕುಲಸಚಿವೆ ಎಂ.ಕೆ. ಸವಿತಾ, ಪರೀಕ್ಷಾಂಗ ಕುಲಸಚಿವ ಪ್ರೊ.ಎನ್. ನಾಗರಾಜ, ಸಿಡಿಸಿ ನಿರ್ದೇಶಕ ಡಾ.ಕೆ. ಮಂಟೆಲಿಂಗು, ಐಕ್ಯೂಎಸಿ ನಿರ್ದೇಶಕ ಡಾ.ಕೆ.ಎನ್. ಅಮೃತೇಶ್, ಸಂಯೋಜಕರಾದ ಡಾ. ನವಿತಾ ತಿಮ್ಮಯ್ಯ, ಡಾ.ಜೆ. ಲೋಹಿತ್ ಇದ್ದರು.