ಮಹಿಳೆಯರು ಸಂಘಟಿತರಾಗುವ ಅಗತ್ಯವಿದೆ: ನ್ಯಾಯಾಧೀಶೆ ಟಿ.ಅಕ್ಷತಾ

KannadaprabhaNewsNetwork | Published : Mar 26, 2025 1:33 AM

ಸಾರಾಂಶ

ಸಮಾಜದಲ್ಲಿ ಮಹಿಳೆಯರು ಸಮಾನತೆ ಹಕ್ಕಿಗಾಗಿ ನಿತ್ಯ ಹೋರಾಟ ನಡೆಯುತ್ತಿದೆ. ಆದರಿಂದ ಕೇವಲ ಮಾ. 8 ರಂದು ಮಾತ್ರ ಮಹಿಳಾ ದಿನಾಚರಣೆ ಸೀಮಿತವಾಗಬಾರದು.

ವಿಶ್ವ ಮಹಿಳಾ ದಿನಾಚರಣೆಗೆ ಚಾಲನೆಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಸಮಾಜದಲ್ಲಿ ಮಹಿಳೆಯರು ಸಮಾನತೆ ಹಕ್ಕಿಗಾಗಿ ನಿತ್ಯ ಹೋರಾಟ ನಡೆಯುತ್ತಿದೆ. ಆದರಿಂದ ಕೇವಲ ಮಾ. 8 ರಂದು ಮಾತ್ರ ಮಹಿಳಾ ದಿನಾಚರಣೆ ಸೀಮಿತವಾಗಬಾರದು, ನಿತ್ಯವೂ ಮಹಿಳೆಯರ ದಿನವಾಗಬೇಕಿದೆ ಎಂದು ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಟಿ.ಅಕ್ಷತಾ ಹೇಳಿದರು.

ಇಲ್ಲಿನ ತಾಪಂ ರಾಜೀವಗಾಂಧಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಾಲೂಕ ಕಾನೂನು ಸೇವೆಗಳ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.

ಮಹಿಳೆ ಪ್ರತಿ ರಂಗದಲ್ಲೂ ಶೋಷಣೆಯ ನಡುವೆ ಸಾಮಾಜಿಕ, ರಾಜಕೀಯ, ಔದ್ಯೋಗಿಕ, ಶೈಕ್ಷಣಿಕ ಇತರೆ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾಳೆ. ಆದರೆ ಸಮಾನವಾಗಿ ಸಿಗಬೇಕಾದ ಹಕ್ಕುಗಳಿಂದ ವಂಚಿತವಾಗುತ್ತಿದ್ದಾಳೆ. ಆದ್ದರಿಂದ ಮಹಿಳೆಯರು ಸಂಘಟಿತರಾಗುವ ಅಗತ್ಯವಿದೆ. ತಮ್ಮ ಹಕ್ಕುಗಳನ್ನು ಪಡೆಯಲು ಮತ್ತು ತಮ್ಮ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು, ಇಂತಹ ದಿನಾಚರಣೆಗಳು ಮುಖ್ಯ ಪಾತ್ರ ವಹಿಸುತ್ತವೆ. ಪ್ರಮುಖವಾಗಿ ಸಮಾಜದಲ್ಲಿ ಮಹಿಳೆ ತನಗಿರುವ ಸೂಕ್ತ ಸ್ಥಾನಮಾನವನ್ನು ಪಡೆದುಕೊಳ್ಳಲು ಕಾನೂನು ತಿಳಿವಳಿಕೆಯ ಅಗತ್ಯವಿದೆ ಎಂದರು.

ಮಹಿಳೆ ಮಹಿಳೆಯರನ್ನು ಪ್ರೋತ್ಸಾಹಿಸುವಂತಾಗಬೇಕು. ಶೋಷಣೆ ವಿರುದ್ಧ ಕೈಜೋಡಿಸಬೇಕು. ನಮ್ಮ ಪ್ರಯತ್ನವೇ ಸಾಧನೆಯ ಮೆಟ್ಟಿಲು ಎಂದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ಜಿ.ವಸಂತಕುಮಾರ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಆರೋಗ್ಯಾಧಿಕಾರಿ ಸಪ್ನ ಕಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ರಾಮನಗೌಡ, ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಸಿದ್ದನಗೌಡ, ಖಜಾಂಚಿ ಎಂಪಿಎಂ ಪ್ರಸನ್ನಕುಮಾರ, ಅಟವಾಳಿಗಿ ಕೊಟ್ರೇಶ, ತಾಪಂ ಸಹಾಯಕ ನಿರ್ದೇಶಕ ಹೇಮಾದ್ರಿ ನಾಯ್ಕ, ಗಂಗಾಧರ, ಮಹಿಳಾ ಪ್ರತಿನಿಧಿ ಎಚ್.ಸುಜಾತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಲ್ಲ ಸಿಬ್ಬಂದಿ, ವಕೀಲರ ಸಂಘದ ಪದಾಧಿಕಾರಿಗಳು, ನ್ಯಾಯಾಲಯ, ತಾಪಂ ಸಿಬ್ಬಂದಿ ಭಾಗವಹಿಸಿದ್ದರು.

Share this article