ಒಳಪಂಗಡಗಳು ಒಗ್ಗಟ್ಟಾದ್ರೆ ಮಾತ್ರ ಧರ್ಮ ಉಳಿವು

KannadaprabhaNewsNetwork | Published : Mar 26, 2025 1:33 AM

ಸಾರಾಂಶ

ನಾವೆಲ್ಲರೂ ವೀರಶೈವ ಧರ್ಮದವರು ಎನ್ನುವ ಮನೋಭಾವದೊಂದಿಗೆ ಎಲ್ಲ ಒಳಪಂಗಡಗಳು ಒಗ್ಗಟ್ಟಾದಾಗ ಮಾತ್ರ ವೀರಶೈವ ಧರ್ಮ ಉಳಿಸಿ, ಬೆಳೆಸಲು ಸಾಧ್ಯ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವ ಶಾಂತಿ ಎಂಬ ಸಂದೇಶಗಳನ್ನು ಜಗದ್ಗುರು ರೇಣುಕಾಚಾರ್ಯರು ಜಗತ್ತಿಗೆ ಸಾರಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು ಆ ಪಂಗಡ, ಈ ಪಂಡಗಡ ಎಂಬ ಭೇದ-ಭಾವ ತೊರೆದು ನಾವೆಲ್ಲರೂ ವೀರಶೈವ ಧರ್ಮದವರು ಎನ್ನುವ ಮನೋಭಾವದೊಂದಿಗೆ ಎಲ್ಲ ಒಳಪಂಗಡಗಳು ಒಗ್ಗಟ್ಟಾದಾಗ ಮಾತ್ರ ವೀರಶೈವ ಧರ್ಮ ಉಳಿಸಿ, ಬೆಳೆಸಲು ಸಾಧ್ಯ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ್‌ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ತಿಳಿಸಿದರು.

ಪಟ್ಟಣದ ಶ್ರೀ ರೇಣುಕಾಚಾರ್ಯ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಕಾರ್ಯಕ್ರಮದಲ್ಲಿ ರೇಣುಕಾಚಾರ್ಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿ ಅವರು ಮಾತನಾಡಿದರು.

ರೇಣುಕಾಚಾರ್ಯರು ಲಿಂಗವಂತರೆಲ್ಲರೂ ವೀರಶೈವರು ಎಂದು ನಮಗೆ ಬೋಧನೆ ಮಾಡಿದ್ದಾರೆ. ಅಲ್ಲದೇ ಲೋಕ ಕಲ್ಯಾಣಕ್ಕಾಗಿ ಪಂಚಪೀಠಗಳು ತೊಡಗಿಸಿಕೊಂಡು ಧರ್ಮ ಪ್ರಚಾರ, ಮಾನವೀಯತೆ, ಮಾನವೀಯ ಮೌಲ್ಯಗಳನ್ನು ತಿಳಿಸುತ್ತಲೇ ಬಂದಿವೆ ಜೊತೆಗೆ ಬಹಳ ಪುರಾತನ ಇತಿಹಾಸವನ್ನು ಹೊಂದಿದ ಏಕೈಕ ಪವಿತ್ರವಾಗಿರುವ ಧರ್ಮವಾಗಿದೆ. ಆದರೆ ಇಂದು ನಾವು ಜಾತಿ ಕಾಲಂ ನಲ್ಲಿ ಬರೀ ನಮ್ಮ ನಮ್ಮ ಉಪ ಜಾತಿಗಳನ್ನು ನಮೂದಿಸುತ್ತಿರುವುದರಿಂದ ವೀರಶೈವ ಜನಾಂಗದ ಸಂಖ್ಯೆ ದೇಶದಲ್ಲಿ ಮೂರನೇ ಸ್ಥಾನದಲ್ಲಿ ಬಂದು ಕುಳಿತಿದ್ದೇವೆ ಎಂದರು.

ಮಂದುವರಿದು ಮಾತನಾಡಿದ ಅವರು, ಅದರಲ್ಲೂ ಜಂಗಮ ಸಮಾಜ ತೀರಾ ಹಿಂದುಳಿದ ಜನಾಂಗವಾಗಿದೆ. ಇಂತಹ ಅನೇಕ ಉಪ ಜನಾಂಗವೂ ಸರ್ವತೋಮುಖ ಅಭಿವೃದ್ಧಿ ಆಗಬೇಕಾದರೇ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟ ಶಿಕ್ಷಣ ಕೊಡಿಸಿದಾಗ ಮಾತ್ರ ಅಭಿವೃದ್ಧಿಗೊಳ್ಳಲು ಸಾಧ್ಯ ಹಾಗೂ ಇತರೆ ಸಮುದಾಯದವರಿಗೆ ಮಾದರಿಯಾಗಲು ಸಾಧ್ಯ. ಕಾರಣ ನಾವು ಭಿನ್ನಾಭಿಪ್ರಾಯ, ವೈಮನಸ್ಸುಗಳು ಮರೆತು ಎಲ್ಲರೂ ಒಂದಾಗಿ ಒಗ್ಗಟ್ಟು ಪ್ರದರ್ಶಿಸುವಲ್ಲಿ ಮುಂದಾಗಬೇಕು ಎಂದ ಅವರು, ರೇಣುಕಾಚಾರ್ಯರು ವಿಶ್ವಕಂಡ ಮೇರು ವ್ಯಕ್ತಿತ್ವದ ದಾರ್ಶನಿಕರು. ಇಂತಹ ಮಹನೀಯರು ಸದಾ ಸ್ಮರಣೀಯರು. ದಾರ್ಶಿನಿಕರ ತತ್ವಾದರ್ಶ ಗುಣಗಳನ್ನು ಎಲ್ಲರೂ ಮೈಗೂಡಿಸಿಕೊಂಡಾಗ ಮಾತ್ರ ಅವರ ಜಯಂತಿ ಆಚರಣೆ ಮಾಡಿದ್ದಕ್ಕೆ ಸಾರ್ಥಕತೆ ಸಲ್ಲುತ್ತದೆ ಎಂದರು.

ಈ ವೇಳೆ ಬಿಲ್ಲ ಕೆರೂರ ಬಿಲ್ವಾಶ್ರಮ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ, ಹೊಸಮಠದ ಶ್ರೀ ಅಮರೇಶ್ವರ ದೇವರು ಸಾನ್ನಿಧ್ಯ ವಹಿಸಿದ್ದರು. ಸಮಾಜ ಸೇವಕ ಹಾಗೂ ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ (ನಡಹಳ್ಳಿ), ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯ ನಿರ್ದೇಶಕಿ ಬಸಂತಿ ಮಠ, ವಿಜಯಲಕ್ಷ್ಮೀ ಬೂದಿಹಾಳಮಠ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ತಾಲೂಕು ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಗಣ್ಯ ಉದ್ಯಮಿ ಸಂಗನಗೌಡ ಬಿರಾದಾರ (ಜಟಿಸಿ) ಜಂಗಮ ಸಮಾಜದ ಅಧ್ಯಕ್ಷ ದಾನಯ್ಯ ಹಿರೇಮಠ, ಹಿರಿಯ ಸಾಹಿತಿ ಬಿ.ಎಂ.ಹಿರೇಮಠ, ರಾಜಶೇಖರ ಕಲ್ಯಾಣಮಠ, ಗೌರಶಂಕರ ಕಲ್ಯಾಣಮಠ, ರಾಚಯ್ಯಾ ಹಿರೇಮಠ (ನಂದಿನಿ) ಮಹಾಂತೇಶ ಬೂದಿಹಾಳಮಠ ಸೇರಿದಂತೆ ಹಲವರು ಇದ್ದರು.

ರೇಣುಕಾಚಾರ್ಯ ದೇವಸ್ಥಾನ ನಿರ್ಮಾಣಕ್ಕೆ ₹25 ಲಕ್ಷ

ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರ ಉತ್ತಮ, ಜನಪರ ಆಡಳಿತ ನೀಡುತ್ತಿದೆ. ಅದರಂತೆ ಮುದ್ದೇಬಿಹಾಳ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಮುಂದಿನ ದಿನಗಳಲ್ಲಿ ಸಾಕಷ್ಟು ಅನುದಾನ ನೀಡಲಿದೆ. ಈ ವೇಳೆ ಸದ್ಯ ಅರ್ಧಕ್ಕೆ ನಿಂತಿರುವ ಶ್ರೀ ರೇಣುಕಾಚಾರ್ಯ ದೇವಸ್ಥಾನ ಹಾಗೂ ಸಮುದಾಯ ಭವನ ನಿರ್ಮಾಣಕ್ಕಾಗಿ ₹25 ಲಕ್ಷ ವಿಶೇಷ ಹಣ ನೀಡುವುದಾಗಿ ಶಾಸಕ ಸಿ.ಎಸ್.ನಾಡಗೌಡ ಘೋಷಣೆ ಮಾಡಿದರು.

ಈ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಮಾತನಾಡಿ, ಈ ಹಿಂದೆ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ ₹1 ಲಕ್ಷ ದೇಣಿಗೆ ನೀಡುವುದಾಗಿ ಜಂಗಮ ಸಮಾಜಕ್ಕೆ ಭರವಸೆ ನೀಡಿದ್ದೇ, ಅದರಂತೆ ಆ ದೇಣಿಗೆ ಹಣವನ್ನು ಆ ಸಮಾಜ ಬಾಂಧವರಿಗೆ ನೀಡುವ ಮೂಲಕ ಮುಂಬರುವ ದಿನಗಳಲ್ಲಿ ಜಂಗಮ ಸಮಾಜ ಉತ್ತಮ ಸಮಾಜ ಮುಖಿಯಾದ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮುನ್ನಡೆಯಲಿ ಎಂದರು.

Share this article