ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್, ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣಾ ಸಮಿತಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 516ನೇ ಜನ್ಮ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ, ವ್ಯಾಪಾರ, ವ್ಯವಹಾರಗಳ ವೃದ್ಧಿಗೆ ಸಾಕಷ್ಟು ಕೊಡುಗೆಯನ್ನು ನೀಡಿದ್ದಾರೆ. ಎಲ್ಲಾ ವರ್ಗದ ಜನರ ಅಭಿವೃದ್ಧಿಗೆ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಯ ಬೀಜ ನೆಟ್ಟವರು ಕೆಂಪೇಗೌಡರು, ಇಂದು ಅವರು ನೆಟ್ಟ ಬೀಜ ಹೆಮ್ಮರವಾಗಿ ಬೆಳೆದು ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದೆ ಎಂದರು.ನಾಡಪ್ರಭು ಕೆಂಪೇಗೌಡರು ಒಳ್ಳೆಯ ಆಡಳಿತಗಾರರಷ್ಟೇ ಅಲ್ಲ, ಸಮಾಜ ಸುಧಾರಕರು ಹೌದು. ಅಂದಿನ ಕಾಲದಲ್ಲಿದ್ದ ಮೂಢನಂಬಿಕೆಗಳ ವಿರುದ್ಧ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. 1532ರಲ್ಲಿ ನಗರ ನಿರ್ಮಾಣಕ್ಕೆ ಅನುಮತಿ ಸಿಕ್ಕ ನಂತರ ಎಲ್ಲಾ ಕಾಯಕ ಸಮುದಾಯಗಳನ್ನು ಗಮನದಲ್ಲಿಟ್ಟುಕೊಂಡು ಬಳೆಪೇಟೆ, ತರಗುಪೇಟೆ, ಅಕ್ಕಿಪೇಟೆ ಹೀಗೆ ವಿಂಗಡಿಸಿ, ಅವರ ವ್ಯಾಪಾರ ವ್ಯವಹಾರಕ್ಕೆ ಪ್ರತ್ಯೇಕ ಜಾಗಗಳನ್ನು ಗುರುತಿಸಿದ್ದರು ಎಂದರು.
ಕೌಶಲ್ಯಾಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ಕರ್ನಾಟಕ ಆಡಳಿತ, ಆರ್ಥಿಕತೆ, ಆರೋಗ್ಯ, ವಾಸ್ತುಶಿಲ್ಪ, ಶಿಕ್ಷಣ ಕ್ಷೇತ್ರಕ್ಕೆ ಕೆಂಪೇಗೌಡರ ಕೊಡುಗೆ ಅಮೂಲ್ಯ. ತುಮಕೂರು ನಗರದ ಬಿ.ಜಿ.ಎಸ್ ವೃತ್ತದಲ್ಲಿದ್ದ ನಾಮಫಲಕ ತೆಗೆಯಲಾಗಿದೆ. ಹೊಸದಾಗಿ ನಾಮಫಲಕ ಹಾಕುವುದರ ಜೊತೆಗೆ, ಪ್ರತಿಮೆ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಹಾಗೆಯೆ ಕೆಂಪೇಗೌಡರ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ನೀಡಲು ತುಮಕೂರು ವಿವಿಯಲ್ಲಿ ಕೆಂಪೇಗೌಡರ ಹೆಸರಿನ ಅಧ್ಯಯನ ಪೀಠ ತೆರೆಯಬೇಕು. ಹಾಗೆಯೇ ನಾಡಪ್ರಭು ಕೆಂಪೇಗೌಡರು ಹಾಗೂ ಶ್ರೀಬಾಲಗಂಗಾಧರನಾಥ ಸ್ವಾಮೀಜಿಗಳ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ಒಳಗೊಂಡ ಕೈಪಿಡಿಯನ್ನು ಎಲ್ಲಾ ಶಾಲಾ, ಕಾಲೇಜುಗಳ ಮಕ್ಕಳಿಗೂ ದೊರೆಯುವಂತೆ ಮಾಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಎಚ್,ನಿಂಗಪ್ಪ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಜನಸಮುದಾಯದ ಒಳಿತಿಗಾಗಿ ನೂರಾರು ಕೆರೆ ಕಟ್ಟೆಗಳನ್ನು ಕಟ್ಟಿದವರು, ಐದುನೂರು ವರ್ಷಗಳ ಹಿಂದೆ ಪ್ರತಿಯೊಂದು ಜಾತಿ, ಸಮುದಾಯಕ್ಕೂ ಸಮಾನ ಅವಕಾಶಗಳನ್ನು ನೀಡಿ ಜಾತ್ಯಾತೀತರಾಗಿದ್ದರು. ಆದರೆ ಇಂದು ಚುನಾವಣೆಗಳಲ್ಲಿ ಜಾತಿ ತಾಂಡವವಾಡುತ್ತಿದೆ. ಕೆಂಪೇಗೌಡರ ಬಗ್ಗೆ ಸಮುದಾಯದ ಯುವಕರಲ್ಲಿ ನಿರ್ಲಕ್ಷ್ಯ ಕಾಣುತ್ತಿದೆ. ಸರಕಾರ ಸಹ ಎಲ್ಲಾ ವರ್ಗದ ಮಹನೀಯರ ಜಯಂತಿಯನ್ನು ಎಲ್ಲಾ ಸಮುದಾಯದ ಜನರು ಸೇರಿ ಆಚರಿಸುವಂತಹ ವಾತಾವರಣ ಸೃಷ್ಟಿಸಬೇಕು. ಒಬೊಬ್ಬ ನಾಯಕರನ್ನು ಒಂದೊಂದು ಜಾತಿಗೆ ಸೀಮಿತ ಮಾಡಬಾರದು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದ ಸಿಇಒ ಪ್ರಭು.ಜಿ.ಅವರನ್ನು ಅಭಿನಂದಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ನಗರ ಬಿ.ಜಿ.ಎಸ್ ವೃತ್ತದಿಂದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗೆ ಜಾನಪದ ಕಲಾತಂಡಗಳ ಪ್ರದರ್ಶನದೊಂದಿಗೆ ಕೆಂಪೇಗೌಡರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಗೆಗೆ ಶಾಸಕ ಜಿ.ಬಿ.ಜ್ಯೋತಿ ಗಣೇಶ್,ಎಡೀಸಿ ಡಾ.ಎನ್.ತಿಪ್ಪೇಸ್ವಾಮಿ ಚಾಲನೆ ನೀಡಿದರು.
ವೇದಿಕೆಯಲ್ಲಿ ತುಮಕೂರು ಉಪವಿಭಾಗಾಧಿಕಾರಿ ನಾಹಿದಾ ಜಮ್ಹ್ ಜಮ್ಹ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುರೇಶ ಕುಮಾರ್, ಭೈರವೇಶ್ವರ ಬ್ಯಾಂಕಿನ ಚಿಕ್ಕರಂಗಣ್ಣ, ಕೆಂಪೇಗೌಡ ಬ್ಯಾಂಕಿನ ಲಿಂಗಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ, ಪಾಲಿಕೆ ಮಾಜಿ ಸದಸ್ಯರಾದ ಟಿ.ಆರ್.ನಾಗರಾಜು, ಧರಣೇಂದ್ರಕುಮಾರ್, ಮನೋಹರಗೌಡ, ದೊಡ್ಡಲಿಂಗಪ್ಪ ಸೇರಿ ಸಮುದಾಯದ ಹಿರಿಯರು ಪಾಲ್ಗೊಂಡಿದ್ದರು.--------
ಬಾಕ್ಸ್.....ಕೆಂಪೇಗೌಡರ ಬಗ್ಗೆ ನಿರ್ಲಕ್ಷ್ಯ ಸಲ್ಲದು
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಒಕ್ಕಲಿಗರ ಸಂಘದ ಸಹ ಕಾರ್ಯದರ್ಶಿ ಹನುಮಂತರಾಯಪ್ಪ, ಇದು ಸರ್ಕಾರದ ಕಾರ್ಯಕ್ರಮ.ಇಂತಹ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳೇ ಗೈರು ಹಾಜರಾಗಿರುವುದು ಬೇಸರ ಮೂಡಿಸಿದೆ.ಈ ಹಿಂದೆ ನಡೆದ ಪೂರ್ವಭಾವಿ ಸಭೆಗೂ ಗೈರು ಹಾಜರಾಗಿದ್ದರು. ಯಾವುದೇ ಜಾತಿ, ಮತ, ಪಂಥದ ಭೇದವಿಲ್ಲದೆ ಬೆಂಗಳೂರು ನಗರವನ್ನು ಕಟ್ಟಿದ ಕೆಂಪೇಗೌಡರ ಬಗ್ಗೆ ನಿರ್ಲಕ್ಷ್ಯ ಸಲ್ಲದು. ವಿಜಯನಗರ ಸಾಮ್ರಾಟರ ಸಾಮಂತರಾಗಿ ಬೆಂಗಳೂರು ನಗರವನ್ನು ಕಟ್ಟಿ, ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದಾರೆ. ಅದೇ ರೀತಿ ಎಸ್.ಎಂ.ಕೃಷ್ಣ ಐಟಿ, ಬಿಟಿ ನಗರವಾಗಿ, ಕೆಂಗಲ ಹನುಮಂತಯ್ಯ ಅವರು ವಿಧಾನಸೌಧವನ್ನು, ಎಸ್.ಎಂ.ಕೃಷ್ಣ ಅವರು ವಿಕಾಸಸೌಧವನ್ನು, ದೇವೇಗೌಡರು ನೀರಾವರಿಗಾಗಿ ಕೆಲಸ ಮಾಡಿದ್ದಾರೆ. ತುಮಕೂರು ನಗರದಲ್ಲಿ ಕೆಂಪೇಗೌಡರ ಪುತ್ಥಳಿ ಅನಾವರಣಕ್ಕೆ ಜಾಗ ನೀಡದರೆ ಸಂಘವೇ ಎಲ್ಲವನ್ನು ಭರಿಸಲಿದೆ ಎಂದರು.