ಪುತ್ತೂರು: ನಾಡಪ್ರಭು ಕೆಂಪೇಗೌಡ ಪ್ರತಿಷ್ಠಾನದ ''''''''ನಾಡಪ್ರಭು ಕೆಂಪೇಗೌಡ ರಾಜ್ಯ ಪ್ರಶಸ್ತಿ'''''''' ಪುರಸ್ಕೃತ ಎಸ್.ಆರ್.ಕೆ. ಲ್ಯಾಡರ್ಸ್‌ನ ಮಾಲಕ ಕೇಶವ ಅಮೈ ಅವರಿಗೆ ಪುತ್ತೂರಿನಲ್ಲಿ ಅದ್ದೂರಿ ಮೆರವಣಿಗೆ ಮೂಲಕ ಸ್ವಾಗತ ನೀಡಿ, ಮುಕ್ರಂಪಾಡಿಯ ಎಸ್.ಆರ್.ಕೆ. ಲ್ಯಾಡರ್ಸ್ ಸಂಸ್ಥೆಯಲ್ಲಿ ಸನ್ಮಾನಿಸಲಾಯಿತು. ದರ್ಬೆ ವೃತ್ತದಿಂದ ತೆರೆದ ವಾಹನದಲ್ಲಿ ಕಲಶ, ಚೆಂಡೆ ವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಸಂಸ್ಥೆಯ ಮಹಿಳಾ ಸಿಬ್ಬಂದಿ ಆರತಿ ಬೆಳಗಿ, ತಿಲಕ ಹಚ್ಚಿ ಬರಮಾಡಿಕೊಂಡರು. ಕೇಶವ ಅಮೈ ಅವರು ಪ್ರಶಸ್ತಿಯ ಶಾಲು, ಫಲಕ ಹಾಗೂ 100 ಗ್ರಾಂ ಬೆಳ್ಳಿಯ ಪದಕದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು, ಪತ್ನಿ ಮಾಲತಿ, ಪುತ್ರ ಗಗನ್ ಹಾಗೂ ಹಿರಿಯ ಗುರು ಶಿವರಾಮ್ ಏನೆಕಲ್ ಜೊತೆಗಿದ್ದರು.ಸತೀಶ್ ಭಟ್ ಮಾತನಾಡಿ, ಈ ಪ್ರಶಸ್ತಿ ಕೇಶವ ಅಮೈ ಅವರ ನೌಕರರ ಪ್ರೀತಿ, ವಿಶ್ವಾಸ ಹಾಗೂ ತಂಡದ ಪರಿಶ್ರಮಕ್ಕೆ ಸಂದ ಗೌರವವಾಗಿದ್ದು, ಮುಂದಿನ ಸಾಧನೆಗೆ ಪ್ರೇರಣೆಯಾಗಲಿದೆ ಎಂದರು.
ಶೇಷಪ್ಪ ರೈ ಮಾತನಾಡಿ, ಕೇಶವ ಅಮೈ ಅವರು ಮನೆಗಿಂತ ಸಿಬ್ಬಂದಿಗೆ ಹೆಚ್ಚಿನ ಆದ್ಯತೆ ನೀಡುವ ವ್ಯಕ್ತಿತ್ವ ಹೊಂದಿದ್ದು, ಪುತ್ತೂರಿನ ಹೆಸರನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವ ಸಾಧಕರಾಗಿದ್ದಾರೆ ಎಂದು ಹೇಳಿದರು.
ಕೆಂಪೇಗೌಡ ಪ್ರತಿಷ್ಠಾನದ ಸಮಿತಿ ಸದಸ್ಯ ಯತೀಶ್ ಆರುವಾರ ಮಾತನಾಡಿ, ಸಮಾಜಕ್ಕೆ ಪ್ರೇರಣೆಯಾಗುವ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಕೇಶವ ಅಮೈ ಅವರ ಆಯ್ಕೆ ಯುವಜನತೆಗೆ ಸ್ಪೂರ್ತಿದಾಯಕ ಎಂದರು.ಉದ್ಯಮಿ ಆರ್.ಕೆ. ಭಟ್ ಮಾತನಾಡಿ, ಕೇಶವ ಅಮೈ ಸ್ವಾರ್ಥರಹಿತ ವ್ಯಕ್ತಿತ್ವ ಹೊಂದಿದ್ದು, ಅವರಿಗೆ ಈ ಪ್ರಶಸ್ತಿ ನ್ಯಾಯಯುತವಾಗಿ ಲಭಿಸಿದೆ ಎಂದು ಹೇಳಿದರು.
ಸನ್ಮಾನ ಸ್ವೀಕರಿಸಿದ ಕೇಶವ ಅಮೈ, ಈ ಪ್ರಶಸ್ತಿಯನ್ನು ತಮ್ಮ ಎಸ್.ಆರ್.ಕೆ. ತಂಡಕ್ಕೆ ಅರ್ಪಿಸುವುದಾಗಿ ತಿಳಿಸಿದರು. ದೃಷ್ಟಿಹೀನರಾಗಿದ್ದರೂ ತಂಡದ ಸಹಕಾರದಿಂದ ಸಾಧನೆ ಸಾಧ್ಯವಾಗಿದ್ದು, ಮುಂದೆಯೂ ಕೃಷಿಕರಿಗಾಗಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಸಮಾಜಕ್ಕೆ ಸೇವೆ ಸಲ್ಲಿಸುವ ಸಂಕಲ್ಪ ವ್ಯಕ್ತಪಡಿಸಿದರು.ಸಂಸ್ಥೆಯ ಸಿಬ್ಬಂದಿ ದಿನೇಶ್ ವಂದಿಸಿದರು.