ಕನ್ನಡಪ್ರಭ ವಾರ್ತೆ ನಾಗಮಂಗಲ
ಬುಧವಾರ ಸಂಜೆ ಮೃತ ಕಿರಣ್ ಅವರ ಮನೆಗೆ ಭೇಟಿ ನೀಡಿ ಪತ್ನಿ ಸೌಮ್ಯ, ತಾಯಿ ಶಶಿ ಅವರಿಗೆ ಸಾಂತ್ವನ ಹೇಳಿದ ಸಚಿವರು, ಕೆಲವೊಮ್ಮೆ ನಿರಪರಾಧಿಗಳಿಗೆ ಶಿಕ್ಷೆ ಆಗುತ್ತದೆ. ಘಟನೆಯಿಂದ ನೊಂದಿರುವ ಸೌಮ್ಯ ಅವರ ಜೀವನ ನಿರ್ವಹಣೆಗೆ ಎಲ್ಲಾದರೂ ಒಂದು ಕೆಲಸ ಕೊಡಿಸುತ್ತೇನೆ ಎಂದು ಧೈರ್ಯ ತುಂಬಿದರು. ಇದೇ ವೇಳೆ ವೈಯಕ್ತಿಕವಾಗಿ 50 ಸಾವಿರ ರು. ಸಹಾಯಧನ ನೀಡಿದರು.
ನಂತರ ಸ್ಥಳೀಯರೊಂದಿಗೆ ಮಾತನಾಡಿದ ಸಚಿವರು, ಘಟನೆ ಹಿಂದೆ ಭದ್ರಿಕೊಪ್ಪಲು ಗ್ರಾಮದ ಯುವಕರು ಇಲ್ಲ ಎನ್ನುವ ಮಾಹಿತಿ ಇದೆ. ಗಲಾಟೆಗೆ ಬೇರೆಯವರ ಕುಮ್ಮಕ್ಕು ಕಾರಣ. ಇಂದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯ ಜೈಲಿನಲ್ಲಿರುವ ಮತ್ತು ಭಯದಿಂದ ಊರು ಬಿಟ್ಟಿರುವವರು ಭಯ ಪಡೆದೆ ವಾಪಸ್ ಬರುವಂತೆ ಮನವಿ ಮಾಡಿದರು.ಜೈಲಿನಲ್ಲಿರುವವರಿಗೆ ಜಾಮೀನು ಕೊಡಿಸಲು ನಮ್ಮ ಕಾರ್ಯಕರ್ತರು, ಲಾಯರ್‌ಗಳು ಓಡಾಡುತ್ತಿದ್ದಾರೆ. ಭಯದಿಂದ ಊರು ಬಿಟ್ಟಿರುವವರು ಧೈರ್ಯವಾಗಿ ಊರಿಗೆ ಬಂದು ಎಂದಿನಂತೆ ಇರಬಹುದು. ಯಾರನ್ನೂ ಅರೆಸ್ಟ್ ಮಾಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಸಚಿವರ ಭೇಟಿ ಹಿನ್ನೆಲೆಯಲ್ಲಿ ಭದ್ರಿಕೊಪ್ಪಲು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಾಗಮಂಗಲ ಕೋಮುಗಲಭೆಯಲ್ಲಿ ಭದ್ರಿಕೊಪ್ಪಲಿನ ಯುವಕರು ಇಲ್ಲ ಎಂಬ ಮಾಹಿತಿ ಇದೆ. ಯಾರದೋ ಕುಮ್ಮಕ್ಕಿನಿಂದ ಈ ಘಟನೆ ನಡೆದಿದೆ ಎಂದು ಸಚಿವ ಚಲುವರಾಯಸ್ವಾಮಿ ಅನುಮಾನ ವ್ಯಕ್ತಪಡಿಸಿದರು.
ನಾನು ರಾಜಕಾರಣ ಮಾಡಲು ಇಲ್ಲಿಗೆ ಬಂದಿಲ್ಲ. ನನ್ನ ಜೀವನದಲ್ಲಿ ಯಾರಿಗೂ ತೊಂದರೆ ಕೊಟ್ಟಿಲ್ಲ. ಘಟನೆ ನಡೆದ ಮರು ದಿನದಿಂದಲೇ ಹಿಂದು ಮುಸ್ಲಿಂ ಒಂದಾಗಿ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ರಾಜಕಾರಣಿಗಳು ಘಟನೆಯಿಂದ ನಮಗೇನಾದರೂ ಲಾಭ ಸಿಗಬಹುದೇನೋಎಂದು ಬಂದೂ ಬಂದು ಹೋಗುತ್ತಿದ್ದಾರೆ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.