ಕನ್ನಡಪ್ರಭ ವಾರ್ತೆ ಮೈಸೂರುನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ 2025-26ನೇ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಎಚ್.ಡಿ. ಕೋಟೆ ತಾಲೂಕಿನ ಅಂತರಸಂತೆಯಲ್ಲಿ ಹತ್ತಿ ಮತ್ತು ಮುಸುಕಿ ಜೋಳದ ಬೆಳೆಯಲ್ಲಿ ಸಮಗ್ರ ಬೇಸಾಯ ಕ್ರಮಗಳು ಹಾಗೂ ಮುಸುಕಿನ ಜೋಳದ ಬೆಳೆಯಲ್ಲಿ ಬೂಜು ರೋಗ ಮತ್ತು ಸೈನಿಕ ಹುಳುವಿನ ಬಾಧೆಗೆ ಹತೋಟಿ ಕ್ರಮಗಳು ಕುರಿತು ಸೋಮವಾರ ಒಂದು ದಿನದ ಹೊರಾಂಗಣ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕ ಡಾ.ಕೆ. ನಾಗರಾಜ್ ರೈತ ಮುಖಂಡರು, ಅಧಿಕಾರಿಗಳು ತರಬೇತಿ ಕಾರ್ಯಕ್ರಮ ಉದ್ಘಾಟಿಸಿದರು. ತರಬೇತಿ ಕೇಂದ್ರದಲ್ಲಿ ಆಯೋಜಿಸುತ್ತಿರುವ ವಿವಿಧ ಆನ್ ಲೈನ್ ಮತ್ತು ಸಾಂಸ್ಥಿಕ ತರಬೇತಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿ ಅದರ ಸದುಪಯೋಗ ಪಡೆಯುವಂತೆ ರೈತರಿಗೆ ತರಬೇತಿ ಸಂಯೋಜಕ ಎಚ್.ಆರ್. ರಾಜಶೇಖರ ಮನವಿ ಮಾಡಿದರು.ತರಬೇತಿಯ ಅಂಗವಾಗಿ ಈ ಭಾಗದ ಪ್ರಮುಖ ಬೆಳೆಗಳಾದ ಹತ್ತಿ ಮತ್ತು ಮುಸಕಿನಜೋಳ ಬೆಳೆಗಳಲ್ಲಿ ವಿವಿಧ ಕೀಟ, ರೋಗಗಳು ಹಾಗೂ ಅವುಗಳ ಹತೋಟಿ ಕ್ರಮಗಳ ಕುರಿತು ಸಸ್ಯರೋಗಶಾಸ್ತ್ರಜ್ಞೆ ಡಾ.ಆರ್.ಎನ್. ಪುಷ್ಪ, ಈಗಲೇ ಮುಸಿಕಿನ ಜೋಳದಲ್ಲಿ ಉದ್ಭವವಾಗಿದ್ದ ಬೂಜು, ಕೇದಿಗೆ ರೋಗ ಮುಂದಿನ ಬೆಳೆಗೂ ಬರುವ ಸಾಧ್ಯತೆ ಇರುವುದರಿಂದ ಮುಸುಕಿನಜೋಳ ಬಿತ್ತನೆಗೆ ಮೊದಲು ಪ್ರತಿ ಒಂದು ಕೆಜಿ ಬಿತ್ತನೆ ಬೀಜಕ್ಕೆ ಮೂರು ಗ್ರಾಂ ಮೆಟಲಾಕ್ಸಿಲ್ 8 ಡಬ್ಲುಪಿ + ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶೇ. 30 ರಿಂದ 40 ರಷ್ಟು ರೋಗ ನಿಯಂತ್ರಣವಾಗುತ್ತದೆ ಎಂದರು.ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಅಭಿವೃದ್ಧಿ ಪಡಿಸಿರುವ ಬೂಜು/ಕೇದಿಗೆ ರೋಗ ನಿರೋಧಕ ತಳಿಗಳಾದ ಎಂಎಎಚ್14-5, ಎಂಎಎಚ್-1137 (ಹೇಮ), ಎಂಎಎಚ್-2049 (ನಿತ್ಯಶ್ರೀ), ಎಂಎಎಚ್ -14-138, ಎಂಎಎಚ್ -15-84 ತಳಿಗಳನ್ನು ಬೆಳೆಯುವುದು ಸೂಕ್ತ ಎಂದು ತಿಳಿಸಿದರು.ರೈತರು ರೋಗ ಲಕ್ಷಣ ಕಂಡ ಕೂಡಲೆ ಮೆಟಲಾಕ್ಸಿಲ್ 8 ಡಬ್ಲುಪಿ + ಮ್ಯಾಂಕೊಜೆಬ್ 64 ಡಬ್ಲುಪಿ ಸಂಯುಕ್ತ ಶಿಲೀಂದ್ರನಾಶಕವನ್ನು ಪ್ರತೀ ಒಂದು ಲೀಟರ್ ನೀರಿಗೆ 2 ಗ್ರಾಂನಂತೆ (ಎಕರೆಗೆ 600 ಗ್ರಾಂ) ಮಿಶ್ರಣ ಮಾಡಿ ಗರಿಗಳ ತಳ ಭಾಗ ಹಾಗೂ ಮೇಲ್ಭಾಗಕ್ಕೂ ಸಿಂಪಡಿಸ ಬೇಕು ಎಂದು ತಿಳಿಸಿದರು.ಹತ್ತಿ ಬೆಳೆಯ ಬೇಸಾಯ ಕ್ರಮಗಳು ಕೀಟ ಹಾಗೂ ರೋಗಗಳ ನಿರ್ವಹಣೆ ಕುರಿತು ಬೇಸಾಯ ತಜ್ಞ ಶ್ರೀಧರ್ ಮಾಹಿತಿ ನೀಡಿದರು.ತರಬೇತಿ ಕಾರ್ಯಕ್ರಮದಲ್ಲಿ ಕಾಕನಕೋಟೆ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ದೇವದಾಸ್, ಸಲಹೆಗಾಗರಾದ ವಿಜಯ್ ಕುಮಾರ್, ನಿರ್ದೇಶಕರಾದ ಚಿನ್ನಸ್ವಾಮಿ, ಡಿಜಿಟಲ್ ಗ್ರೀನ್ ಸಂಸ್ಥೆಯ ಅಶೋಕ, ಸಹಾಯಕ ತಾಂತ್ರಿಕ ವ್ಯವಸ್ಥಾಪಕಿ ರಕ್ಷಿತ, ವಿನಯ್ ಅಸೋಡೆ ಹಾಗೂ ಸಿಬ್ಬಂದಿ ಇದ್ದರು. ರೈತ/ರೈತಮಹಿಳೆಯರು ಭಾಗವಹಿಸಿದ್ದರು.ತರಬೇತಿ ಸಂಯೋಜಕ ಹಾಗೂ ಕೃಷಿ ಅಧಿಕಾರಿ ಎಚ್.ಆರ್. ರಾಜಶೇಖರ ಕಾರ್ಯಕ್ರಮ ನಿರೂಪಿಸಿದರು.