ಹೈದರಾಬಾದ್‌ಗೇ ತೆರಳಿ ನಾಗೇಂದ್ರ ಆಪ್ತರ ಧಮಕಿ

KannadaprabhaNewsNetwork |  
Published : Jun 27, 2024, 01:04 AM ISTUpdated : Jun 27, 2024, 05:38 AM IST
MLA Nagendra

ಸಾರಾಂಶ

ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರು. ಅಕ್ರಮ ವರ್ಗಾವಣೆ ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಇದೀಗ ಹೈದರಾಬಾದ್‌ ಮೂಲದವನಾದ ಪ್ರಕರಣದ ಆರೋಪಿಯೊಬ್ಬನಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. 

 ಬೆಂಗಳೂರು :  ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ 187 ಕೋಟಿ ರು. ಅಕ್ರಮ ವರ್ಗಾವಣೆ ಹಗರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಬಿ.ನಾಗೇಂದ್ರ ವಿರುದ್ಧ ಇದೀಗ ಹೈದರಾಬಾದ್‌ ಮೂಲದವನಾದ ಪ್ರಕರಣದ ಆರೋಪಿಯೊಬ್ಬನಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ತನ್ನ ಹೈದರಾಬಾದ್‌ ಮನೆಗೇ ಬಂದು ನಾಗೇಂದ್ರ ಕಡೆಯವರು ಹಗರಣದಲ್ಲಿ ಸಚಿವರ ಹೆಸರು ಹೊರಬಂದಂತೆ ನೋಡಿಕೊಳ್ಳಬೇಕು ಎಂದು ಬೆದರಿಸಿದ್ದರು ಎಂದು ಆರೋಪಿ ಸತ್ಯನಾರಾಯಣ ವರ್ಮಾ ಕೋರ್ಟ್ ಮುಂದೆ ಸ್ಫೋಟಕ ಹೇಳಿಕೆ ನೀಡಿದ್ದಾನೆ.

ಈ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ನಗರದ 3ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯವು, ‘ಪ್ರಕರಣದಲ್ಲಿ 13ನೇ ಆರೋಪಿಯಾಗಿರುವ ಹೈದರಾಬಾದಿನ ವರ್ಮಾನಿಗೆ, ನಾಗೇಂದ್ರ ಅವರಿಂದ ಜೀವ ಬೆದರಿಕೆ ಇರುವ ಆರೋಪ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ಹಲಸೂರು ಗೇಟ್‌ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿದೆ.

ಹಣ ವರ್ಗಾವಣೆಯಾಗುವುದಕ್ಕೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ ಆರೋಪ ಸತ್ಯನಾರಾಯಣ ವರ್ಮಾ ಮೇಲಿದೆ. ವರ್ಮಾ ಹೈದರಾಬಾದ್‌ ಬಂಜಾರ ಹಿಲ್ಸ್‌ನಲ್ಲಿ ರತ್ನಾಕರ ಬ್ಯಾಂಕಿನ ಶಾಖೆಯಲ್ಲಿ ನಕಲಿ ಕಂಪನಿಗಳ ಹೆಸರಿನಲ್ಲಿ ಖಾತೆ ಮಾಡಿಸಿದ್ದ. ಅವುಗಳಿಗೆ ಕರ್ನಾಟಕ ಮಹರ್ಷಿ ವಾಲ್ಮೀಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಿಂದ ಅನಧಿಕೃತವಾಗಿ ಕೋಟ್ಯಂತರ ಹಣ ವರ್ಗಾವಣೆಯಾಗಿತ್ತು. ನಂತರ ಆ ಹಣವನ್ನು ವರ್ಮಾ ವಿವಿಧ ಉದ್ದೇಶಗಳಿಗೆ ಬಳಸಿ ಲಾಭ ಮಾಡಿಕೊಂಡಿದ್ದಾನೆ ಎಂಬ ಆರೋಪವಿದೆ.

ಈ ಹಿನ್ನೆಲೆಯಲ್ಲಿ ವರ್ಮಾನ ಹೈದರಾಬಾದ್‌ ಮನೆ ಮೇಲೆ ಸಿಐಡಿ ಪೊಲೀಸರು ದಾಳಿ ನಡೆಸಿ, 8.21 ಕೋಟಿ ನಗದು ಮತ್ತು ಲಕ್ಷಾಂತರ ಬೆಲೆಬಾಳುವ ಚಿನ್ನಾಭರಣ ಜಪ್ತಿ ಮಾಡಿದ್ದರು. ನಂತರ ಹೈದರಬಾದ್‌ನಿಂದ ಆರೋಪಿಯನ್ನು ಕರೆತಂದು, ನಗರದ 3ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಆತನನ್ನು ನ್ಯಾಯಾಲಯವು ಪೊಲೀಸ್‌ ಕಸ್ಟಡಿಗೆ ನೀಡಿತ್ತು. ಪೊಲೀಸ್‌ ಕಸ್ಟಡಿ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಆರೋಪಿಯನ್ನು ಮತ್ತೆ ಕೋರ್ಟ್‌ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿ ಸತ್ಯನಾರಾಯಣ ವರ್ಮಾ, ಮಾಜಿ ಸಚಿವ ನಾಗೇಂದ್ರ ಮತ್ತವರ ಆಪ್ತರ ವಿರುದ್ಧ ಜೀವ ಬೆದರಿಕೆ ಹಾಕಿರುವ ಆರೋಪ ಮಾಡಿದ್ದಾನೆ.

‘ನಾನು ಬಂಧನಕ್ಕೆ ಒಳಗಾಗುವ ಮುನ್ನ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತರು ಹೈದರಾಬಾದ್‌ನ ನನ್ನ ಮನೆಗೆ ಬಂದಿದ್ದರು. ಹಗರಣದಲ್ಲಿ ಸಚಿವರ ಹೆಸರು ಹೊರಬಂದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿ ನನಗೆ ಹಾಗೂ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಿದರು. ಇದಾದ ನಂತರ ಪೊಲೀಸರು ನನ್ನನ್ನು ಬಂಧಿಸಿ ಕೋರ್ಟ್‌ ಮುಂದೆ ಹಾಜರುಪಡಿಸಿದಾಗ, ಕೋರ್ಟ್‌ ಬಳಿ ನಾಗೇಂದ್ರ ಅವರ ಆಪ್ತ ಸಹಾಯಕ ನೆಕ್ಕುಂಡಿ ನಾಗರಾಜ್ ಆಪ್ತರು ನನ್ನ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಹೀಗಾಗಿ, ನನ್ನ ಕುಟುಂಬದವರಿಗೆ ರಕ್ಷಣೆ ನೀಡಬೇಕು’ ಎಂದು ವರ್ಮಾ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾನೆ.

ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶ ಶ್ರೇಯಾಂಶ್‌ ದೊಡ್ಡಮನಿ ಅವರು, ಆರೋಪಿ ವರ್ಮಾಗೆ ಮಾಜಿ ಸಚಿವರಿಂದ ಜೀವ ಬೆದರಿಕೆಯಿದೆ. ಆ ಕುರಿತು ತನಿಖೆ ನಡೆಸಿ ಮುಂದಿನ ವಿಚಾರಣೆ ವೇಳೆ ವರದಿ ಸಲ್ಲಿಸಬೇಕು ಎಂದು ಹಲಸೂರು ಗೇಟ್‌ ಠಾಣಾ ಪೊಲೀಸರಿಗೆ ನಿರ್ದೇಶಿಸಿದ್ದಾರೆ.

ಇದೇ ವೇಳೆ ಆರೋಪಿ ಸತ್ಯನಾರಾಯಣ ವರ್ಮಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ