ಶಿಗ್ಗಾಂವಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆಗಳು ಕನ್ನಡಿಗರಿಗೆ ಸ್ಫೂರ್ತಿಯಾಗಿದೆ ಎಂದು ಶಿಕ್ಷಕ ಹಾಗೂ ಉಪನ್ಯಾಸಕ ಎಂ.ಬಿ. ಹಳೆಮನಿ ಹೇಳಿದರು.
ಕಸಾಪ ತಾಲೂಕಾಧ್ಯಕ್ಷ ನಾಗಪ್ಪ ಬೆಂತೂರ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಭಾಷೆ, ನಾಡು ನುಡಿಗೆ ಸಂಬಂಧಿಸಿದಂತೆ ಮಹೋನ್ನತ ಕೊಡುಗೆ ನೀಡುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಕೀರ್ತಿ ನಾಲ್ವಡಿ ಶ್ರೀಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. ಅವರು ಸಾಹಿತ್ಯ, ಸಂಸ್ಕೃತಿ, ಸಂಗೀತ, ಶಿಕ್ಷಣ, ನೀರಾವರಿ, ಕೈಗಾರಿಕೆ, ಆರೋಗ್ಯ, ಬ್ಯಾಂಕ್, ಸಾರಿಗೆ ಹೀಗೆ ವಿವಿಧ ಕ್ಷೇತ್ರದಲ್ಲಿ ಗಣನೀಯವಾದ ಸೇವೆ ಮಾಡಿ ಕನ್ನಡಿಗರ ಮಹಾರಾಜರಾಗಿದ್ದರು. ಅವರ ಸಾರ್ವಜನಿಕ ಪರವಾದ ಉತ್ತಮ ಕೆಲಸಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿವೆ ಮತ್ತು ಸರ್ವಧರ್ಮ ಸಹಿಷ್ಣುತೆ ಪಾಲನೆ ಮಾಡುವ ಮೂಲಕ ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ ಕೀರ್ತಿ ಮಹಾರಾಜರದ್ದಾಗಿದೆ ಎಂದರು.
ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಸಿ.ಡಿ. ಯತ್ನಳ್ಳಿ ಮಾತನಾಡಿ, ಮಕ್ಕಳು ಪಠ್ಯಪುಸ್ತಕದ ಜತೆ ಜತೆಗೆ ಇತರ ಕಥೆ, ಕವನ, ನಾಟಕ, ಕಾದಂಬರಿಗಳನ್ನು ಓದುವ ಮೂಲಕ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಧನೆ ಮಾಡಲು ಪ್ರಯತ್ನಿಸಬೇಕು. ಕಸಾಪ ನಿಮಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದರು.ಕಸಾಪ ಶಹರ ಘಟಕದ ಅಧ್ಯಕ್ಷೆ ಲಲಿತಾ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ಗುರುಗಳು ಹೇಳಿದ ಪಾಠಗಳನ್ನು ಚೆನ್ನಾಗಿ ಅರ್ಥೈಸಿಕೊಂಡು ಉನ್ನತ ಹುದ್ದೆ ಅಲಂಕರಿಸಿ ಒಡೆಯರ್ ಅವರಂತೆ ಉತ್ತಮ ಕೆಲಸಗಳನ್ನು ಮಾಡಬೇಕು ಮತ್ತು ಸಾಹಿತ್ಯದ ಎಲ್ಲ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದರು.
ಶಂಭು ಕೇರಿ, ಆನಂದ ಕರಡಿ, ರವಿ ಕಡಕೋಳ, ಜಿ.ಜಿ. ಆಜೂರ, ಗಿರಿಜಾ ಪಾಟೀಲ, ಲಕ್ಷ್ಮಿ ಹೊಸಮನಿ, ದೀಪಾ ಅತಡಕರ, ತಟಗಾರ, ಅಂಗಡಿ ಹಾಗೂ ಸಾಹಿತ್ಯಾಭಿಮಾನಿಗಳು, ಶಾಲೆಯ ವಿದ್ಯಾರ್ಥಿಗಳು ಇದ್ದರು.