ಶಿರಸಿ: ಅರಣ್ಯ, ಸರ್ಕಾರಿ ಹಾಗೂ ಇತರ ಸಾರ್ವಜನಿಕ ಭೂಮಿಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ಕುಟುಂಬಗಳ ಮನೆ ನಂಬರ್‌ಗಳನ್ನು ಪಂಚತಂತ್ರ 2.0 ತಂತ್ರಾಂಶದಿಂದ ಕೈಬಿಡುವ ಮಾರ್ಗಸೂಚಿಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿ ಶಿರಸಿ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುತ್ತಿರುವ “ನಮ್ಮ ಮನೆ–ನಮ್ಮ ಹಕ್ಕು” ಜನಾಂದೋಲನ ಪ್ರತಿಭಟನಾ ಸಭೆ ಗುರುವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಇಂದು ದೊಡ್ನಳ್ಳಿ, ಕಾನಗೋಡ, ಕುಳವೆ, ಯಡಳ್ಳಿ, ಸದಾಶಿವಳ್ಳಿ, ಇಟಗುಳಿ, ಶಿವಳ್ಳಿ , ಬಂಡಲ,ಹುಲೇಕಲ್ ಹಾಗೂ ಸೋಂದಾ ಗ್ರಾಮ ಪಂಚಾಯತ್‌ಗಳಲ್ಲಿ ಪ್ರತಿಭಟನಾ ಸಭೆ ನಡೆಯಿತು. ಮಹಿಳೆಯರು, ಹಿರಿಯ ನಾಗರಿಕರು, ಕಾರ್ಮಿಕರು, ರೈತರು ಹಾಗೂ ಅತಿಕ್ರಮಣ ಪ್ರದೇಶಗಳಲ್ಲಿ ಹಲವು ದಶಕಗಳಿಂದ ವಾಸಿಸುತ್ತಿರುವ ಕುಟುಂಬಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಸರ್ಕಾರದ ಜನವಿರೋಧಿ ಮಾರ್ಗಸೂಚಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ವರ್ಷಗಳಿಂದ ಗ್ರಾಮ ಪಂಚಾಯಿತಿಗೆ ತೆರಿಗೆ ಪಾವತಿಸುತ್ತಾ, ಮನೆ ನಂಬರ್ ಪಡೆದು ಬದುಕು ಕಟ್ಟಿಕೊಂಡಿರುವ ಬಡ ಕುಟುಂಬಗಳನ್ನು ಏಕಾಏಕಿ ತಂತ್ರಾಂಶದಿಂದ ಕೈಬಿಡುವುದು ಕೇವಲ ದಾಖಲೆಯೊಂದನ್ನು ಅಳಿಸುವ ಕ್ರಮವಲ್ಲ; ಅದು ಸಾವಿರಾರು ಕುಟುಂಬಗಳ ಅಸ್ತಿತ್ವ, ಭದ್ರತೆ ಮತ್ತು ಬದುಕಿನ ಹಕ್ಕನ್ನೇ ಕಸಿದುಕೊಳ್ಳುವ ಅಮಾನವೀಯ ಕ್ರಮವಾಗಿದೆ” ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಮಾತನಾಡಿ ಮನೆ ನಂಬರ್‌ಗಳನ್ನು ಪಂಚತಂತ್ರ 2.0 ತಂತ್ರಾಂಶದಿಂದ ಕೈಬಿಡುವ ನಿರ್ಧಾರವು ಸಾವಿರಾರು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಬದುಕು ಅತಂತ್ರವಾಗಲಿದೆ ಎಂದು ಸಮಸ್ಯೆಯ ಗಂಭೀರತೆಯನ್ನು ವಿವರಿಸಿದರು.
ಸರ್ಕಾರ ಕೂಡಲೇ ಸ್ಪಂದಿಸಿ ನ್ಯಾಯ ಒದಗಿಸದಿದ್ದರೆ, ಪ್ರಸ್ತುತ ಶಿರಸಿ ತಾಲೂಕಿನಾದ್ಯಂತ ಬಿರುಸಿನಿಂದ ಸಾಗುತ್ತಿರುವ ಈ ಜನಾಂದೋಲನವನ್ನು ಮುಂದಿನ ಹಂತದಲ್ಲಿ ಜಿಲ್ಲಾಮಟ್ಟಕ್ಕೆ ವಿಸ್ತರಿಸಿ, ಬಳಿಕ ರಾಜ್ಯಾದ್ಯಂತ ಬೃಹತ್ ಜನಹೋರಾಟವಾಗಿ ರೂಪಿಸಲಾಗುವುದು ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.