ಮಹಾಗಣಪತಿ, ಮಹಾಬಲೇಶ್ವರ ದೇವರ ದರ್ಶನಕ್ಕೆ ಬಂದು ದರ್ಶನ ಪಡೆದು ಹತ್ತಿರದ ವೈದಿಕರ ಮನೆಗೆ ತೆರಳಿದ್ದರು
ಗೋಕರ್ಣ: ದೇವರ ದರ್ಶನ ಹಾಗೂ ವೈದಿಕರ ಮನೆಯಲ್ಲಿ ಕಾರ್ಯಕ್ಕೆ ಬಂದಿದ್ದ ತೆಲಂಗಾಣದ ಭಕ್ತರಿಗೆ ನಿಮಗೆ ಗಂಡಾತರವಿದೆ ಪರಿಹಾರಕ್ಕಾಗಿ ಚಿನ್ನಾಭರಣ ನೀಡಬೇಕು ಎಂದು ಯಾಮಾರಿಸಿ ಎಂಟು ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದ ನಾಗಾಸಾಧುಗಳನ್ನು ಇಲ್ಲಿನ ಪೊಲೀಸರು ನಾಲ್ಕು ತಾಸಿನಲ್ಲಿ ಪತ್ತೆ ಮಾಡಿ ಆ ಚಿನ್ನಾಭರಣವನ್ನು ಮರಳಿಸಿದ ಘಟನೆ ಬುಧವಾರ ನಡೆದಿದೆ.
ಇಲ್ಲಿನ ಮಹಾಬಲೇಶ್ವರ ಮಂದಿರಕ್ಕೆ ತೆಲಂಗಾಣ ಮನೋಹರ ಕುಲಕರ್ಣಿ ಎಂಬುವವರು ತಮ್ಮ ಪತ್ನಿಯೊಂದಿಗೆ ಆಗಮಿಸಿದ್ದು, ಮಹಾಗಣಪತಿ, ಮಹಾಬಲೇಶ್ವರ ದೇವರ ದರ್ಶನಕ್ಕೆ ಬಂದು ದರ್ಶನ ಪಡೆದು ಹತ್ತಿರದ ವೈದಿಕರ ಮನೆಗೆ ತೆರಳಿದ್ದರು. ಅದೇ ವೇಳೆ ಇಲ್ಲಿಗೆ ಆಗಮಿಸಿದ ನಾಗಸಾಧುಗಳು ಭೇಟಿಯಾಗಿದ್ದು, ಮಾತುಕತೆ ನಡೆಸಿದ್ದಾರೆ. ವಯೋವೃದ್ದ ದಂಪತಿಗಳಿಂದ ನಾಗಾ ಸಾಧುಗಳು ಮನೆಯ ಸಮಸ್ಯೆ ಬಗ್ಗೆ ವಿವರ ಪಡೆದಿದ್ದು, ಪರಿಹಾರಕ್ಕಾಗಿ ಚಿನ್ನ ನೀಡಬೇಕೆಂದು ತಿಳಿಸಿದ್ದಾರೆ. ಈ ದಂಪತಿಗಳು ಮಾನಸಿಕವಾಗಿ ಕುಗ್ಗಿದ್ದರಿಂದ ನಾಗಾ ಸಾಧುಗಳ ಭಾವನಾತ್ಮಕ, ಭಯದ ಮಾತಿನ ಬಲೆಗೆ ಬಿದ್ದು ತಕ್ಷಣ ಕೈಯಲ್ಲಿದ್ದ ನಾಲ್ಕು ಚಿನ್ನದ ಬಳೆ ಮತ್ತು ಉಂಗುರು ತೆಗೆದು ಕೊಟ್ಟು ಕಳುಹಿಸಿದ್ದಾರೆ. ನಂತರ ಏನೂ ತೋಚದೆ ಅವರು ಭಯಹುಟ್ಟಿಸಿದ ಕಾರಣ ಆಭರಣ ತೆಗೆದುಕೊಟ್ಟಿರುವುದು ಅರಿವಿಗೆ ಬಂದಿದ್ದು, ಅಲ್ಲದೇ ಇವರು ಬಂದಿದ್ದ ಮನೆಯ ಪುರೋಹಿತರಿಗೂ ವಿಷಯ ತಿಳಿಸಿದ್ದಾರೆ.
ಮಹಾಬಲೇಶ್ವರ ಮಂದಿರದ ಹೊರ ಠಾಣೆಯ ಹವಲ್ದಾರ ಜಟ್ಟಪ್ಪ ನಾಯ್ಕರವರಿಗೆ ಘಟನೆ ವಿವರಿಸಿದ್ದು, ಇವರು ಪಿ.ಐ.ಶ್ರೀಧರ ಹಾಗೂ ಪಿ.ಎಸ್. ಐ. ಅನಿಲರವರಿಗೆ ಮಾಹಿತಿ ನೀಡಿದ್ದಾರೆ. ಪಿ.ಐ. ಶ್ರೀಧರ ನೇತೃತ್ವದಲ್ಲಿ ಪಿ.ಎಸ್.ಐ. ಅನಿಲ, ಕ್ರೈಮ್ ಪಿ.ಎಸ್.ಐ. ಸುನಿಲ, ಎ.ಎಸ್.ಐ. ನಿರಂಜನ ನಾಯಕ ,ಹವಾಲ್ದಾರ ರಾಜೇಶ ನಾಯ್ಕ,ವಸಂತ ನಾಯ್ಕ, ಸಿಬ್ಬಂದಿಗಳಾದ ಪ್ರಕಾಶ,ಕಿರಣ, ಶ್ರೀಕಾಂತ , ಪರಮೇಶ್ವರ ಬೆಂಡ್ಲಗಟ್ಟಿ, ಮಣಿಕಂಠ ಗೌಡ ಕಾರ್ಯಚರಣೆ ನಡೆಸಿ ಮಧ್ಯಪ್ರದೇಶದ ನಾಗಾಸಾಧುಗಳನ್ನು ಉಡುಪಿಯಲ್ಲಿ ಪತ್ತೆ ಹಚ್ಚಿ ಕರೆ ತಂದು ಅವರಿಂದ ಯಾತ್ರಿಕರ ಚಿನ್ನಾಭರಣ ಮರಳಿಸಿದ್ದಾರೆ.
ಪೊಲೀಸರ ಈ ಕಾರ್ಯಾಚರಣೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿ, ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.