ಕನ್ನಡಪ್ರಭ ವಾರ್ತೆ ಶಿರಾ
ಸಮಾಜದ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸುವ ನಿಸ್ವಾರ್ಥ, ಕಲ್ಮಶವಿಲ್ಲದ ನಂಜಾವಧೂತ ಶ್ರೀಗಳ ಗುಣ ಎಲ್ಲರಿಗೂ ಮಾದರಿಯಾಗಿದೆ. ನಾವು ಮಾಡುವಂತಹ ಸಮಾಜ ಸೇವೆ ಚರಿತ್ರೆಯ ಪುಟದಲ್ಲಿ ಸೇರಬೇಕು ಅಂತಹ ಜನಪರ ಸೇವೆಗಳು ಜೀವನಕ್ಕೆ ಸಾರ್ಥಕತೆಯನ್ನು ನೀಡುತ್ತವೆ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಹೇಳಿದರು.ತಾಲೂಕಿನ ಪಟ್ಟನಾಯಕನಹಳ್ಳಿ, ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಜಾತ್ರಾ ಮಹೋತ್ಸವದ ವಸ್ತು ಪ್ರದರ್ಶನದ ವೇದಿಕೆಯಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಸ್ವಚ್ಛ ಭಾರತ್ ಮಿಷನ್ ಅಭಿಯಾನ ಆಯೋಜಿಸಿದ್ದ ಮಹಿಳಾ ಮತ್ತು ಐಟಿಐ ವಿದ್ಯಾರ್ಥಿಗಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀ ಕ್ಷೇತ್ರದಲ್ಲಿ ನಡೆದ ಗರ್ಭಿಣಿಯರ ಮಡಿಲು ತುಂಬುವ ಕಾರ್ಯಕ್ರಮ ನನಗೆ ಪ್ರೇರಣೆ ನೀಡಿದ್ದು, ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಕೂಡ ಚಾಲನೆ ನೀಡಲಿದ್ದೇನೆ. ರಾಜೇಶ್ ಗೌಡ ರಂತಹ ಸ್ನೇಹಜೀವಿ ಕ್ಷೇತ್ರದ ಜನಸೇವೆಗೆ ಅಗತ್ಯವಿದೆ ಎಂದರು.
ಗರ್ಭಿಣಿಯರಿಗೆ ಮಡಿಲು ತುಂಬುವ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ, ಹೇಮಾವತಿ ನೀರು ಮದಲೂರು ಕೆರೆಗೆ ಹರಿಯಲು ಹಾಗೂ ಅಪ್ಪರ ಭದ್ರ ನೀರಾವರಿ ಯೋಜನೆ ಅನುಷ್ಠಾನಗೊಳ್ಳಲು ನಂಜಾವಧೂತ ಶ್ರೀಗಳ ನೀರಾವರಿ ಹಾಕ್ಕೋತಾಯ ದಿನವೇ ಪ್ರೇರಣೆ. ನಾನು ಶಾಸಕನಾಗಿದ್ದ ಅವಯಲ್ಲಿ ಮಹಿಳೆಯರ ಸ್ವಾವಲಂಬಿ ಬದುಕಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ೧೦೦ ಸ್ವಸಹಾಯ ಸಂಘಗಳಿಗೆ ತನ್ನ ಒಂದು ಲಕ್ಷ ರೂಪಾಯಿ ಸಹಾಯಧನ ನೀಡಿದ್ದೇನೆ. ಬಾಂಧವ್ಯ ಗಟ್ಟಿಗೊಳಿಸುವ, ಪ್ರೀತಿ ವಿಶ್ವಾಸ ತುಂಬುವ ಸಂಕೇತವೇ ಮಹಿಳೆ ಎಂದರು.ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ, ಆರ್ಥಿಕ ಸಾಮಾಜಿಕವಾಗಿ ಸ್ವಾವಲಂಬಿಯಾಗಲು ಮಹಿಳೆ ಸ್ವಸಹಾಯ ಸಂಘಗಳು ಹೆಚ್ಚು ಶಕ್ತಿ ನೀಡುವೆ. ಹೆಣ್ಣಿಗೆ ಇಚ್ಛಾ ಶಕ್ತಿ ಮತ್ತು ಪರಿವರ್ತನಾ ಶಕ್ತಿ ಭಗವಂತ ಹುಟ್ಟಿನಿಂದಲೇ ಕೊಟ್ಟಿದ್ದಾನೆ. ಮಹಿಳೆಯರನ್ನು ಗೌರವಿಸುವಂತಹ ಸಂಸ್ಕಾರ ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲಿ ನೇಗಿಲ ಯೋಗಿ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ, ಸಿಡಿಪಿಒ ರಾಜನಾಯ್ಕ್, ತಾ.ಪಂ. ಇಒ ಅನಂತರಾಜು, ಜಿಲ್ಲಾ ಕೈಗಾರಿಕೆ ಜಂಟಿ ನಿರ್ದೇಶಕ ಲಿಂಗರಾಜು, ಸಹಾಯಕ ನಿರ್ದೇಶಕ ಸಿದ್ದೇಶ್, ಗ್ರಾ.ಪಂ. ಅಧ್ಯಕ್ಷೆ ರಕ್ಷಿತಾ ಆರ್.ಕೆ ಮಾರುತಿ, ತಾಲೂಕು ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಆರ್. ಶೈಲಜಾ, ಉಪಾಧ್ಯಕ್ಷೆ ನಾಗರತ್ನಮ್ಮ, ಪಿಡಿಒ ಲಕ್ಷ್ಮೀಬಾಯಿ, ಪವನ್ ಗೌಡ ಸೇರಿದಂತೆ ನೂರಾರು ಮಹಿಳೆಯರು ಹಾಗೂ ಐಟಿಐ ವಿದ್ಯಾರ್ಥಿಗಳು ಭಾಗವಹಿಸಿದ್ದರು.