ಕನ್ನಡಪ್ರಭ ವಾರ್ತೆ ನಾಪೋಕ್ಲು
ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಮಳೆ ಬಿಡುವು ಕೊಟ್ಟಿದ್ದರೂ ಜಲಾವೃತಗೊಂಡ ಹಲವು ಸಂಪರ್ಕ ರಸ್ತೆಗಳಲ್ಲಿ ಪ್ರವಾಹ ತಗ್ಗಿಲ್ಲ. ಸಮೀಪದ ಕೊಟ್ಟಮುಡಿಯ ಜಂಕ್ಷನ್ ನಲ್ಲಿ ಕಾವೇರಿ ನದಿ ಪ್ರವಾಹ ರಸ್ತೆ ಮೇಲೆ ಅಪಾಯ ಮಟ್ಟದಲ್ಲಿ ತುಂಬಿ ಹರಿಯುತ್ತಿದ್ದು ನಾಪೋಕು- ಬೆಟಗೇರಿ ಮಾರ್ಗವಾಗಿ ಮಡಿಕೇರಿ, ನಾಪೋಕು - ಮೂರ್ನಾಡು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.ನಾಪೋಕ್ಲು ಪಟ್ಟಣದಿಂದ ಕಕ್ಕಬೆ ರಸ್ತೆ ಬಿಟ್ಟು ಯಾವುದೇ ಭಾಗಕ್ಕೆ ವಾಹನ ಸಂಚರಿಸುತ್ತಿಲ್ಲ. ಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿವೆ. ಪಟ್ಟಣಕ್ಕೆ ದಿನನಿತ್ಯದ ಅವಶ್ಯಕ ವಸ್ತುಗಳ ಪೂರೈಕೆ ಆಗದೆ ಜನಸಾಮಾನ್ಯರ ಸಮಸ್ಯೆ ಅನುಭವಿಸುವಂತಾಗಿ ನಾಪೋಕು ಬಹುತೇಕ ದ್ವೀಪದಂತಾಗಿದೆ.
ಹೋಬಳಿ ವ್ಯಾಪ್ತಿಯ ಹೆಚ್ಚಿನ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲದೆ ಪರದಾಡುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಕಳೆದ ಹತ್ತು ದಿನಗಳಿಂದ ವಿದ್ಯುತ್ ಸಮಸ್ಯೆ ಎದುರಿಸುತ್ತಿದ್ದಾರೆ. ಕಕ್ಕಬೆ, ಎಮ್ಮೆಮಾಡು, ಬಲ್ಲಮಾವಟಿ, ಪುಲಿಕೋಟು, ಪೇರೂರು ಗ್ರಾಮಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ಪೂರೈಕೆ ಇಲ್ಲದೆ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.ಮರಂದೋಡ ಗ್ರಾಮದ ಕೆರೆತಟ್ಟು ಭಾಗದಲ್ಲಿ ಎರಡು ವಿದ್ಯುತ್ ಕಂಬಗಳು ರಸ್ತೆ ಮೇಲೆ ಬಿದ್ದಿದ್ದು ಗ್ರಾಮ ಪಂಚಾಯಿತಿ ಸದಸ್ಯರು, ಚೆಸ್ಕಾಂ ಸಿಬ್ಬಂದಿ ಹಾಗೂ ಗ್ರಾಮಸ್ಥರ ನೆರವಿನಿಂದ ತೆರವುಗೊಳಿಸಲಾಯಿತು. ಬಳಿಕ ಕೆರೆತಟ್ಟು ವ್ಯಾಪ್ತಿಯ ಹಲವು ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಯಿತು. ಇನ್ನು ಕೆಲವೆಡೆ ವಿದ್ಯುತ್ ಕಂಬಗಳು ತುಂಡಾಗಿ ಬಿದ್ದಿರುವುದರಿಂದ ವಿದ್ಯುತ್ ಸಂಪರ್ಕ ಪೂರೈಕೆ ಮಾಡಲಾಗಿಲ್ಲ.
ಧಾರಾಕಾರ ಮಳೆಯಿಂದಾಗಿ ವಿವಿಧೆಡೆ ಅನಾಹುತಗಳು ಸಂಭವಿಸಿವೆ. ಕುಂಜಿಲ ಗ್ರಾಮದ ಇಸ್ಮಾಯಿಲ್ ಎಂಬವರ ವಾಸದ ಮನೆಯ ಬರೆ ಕುಸಿದು ನಷ್ಟ ಸಂಭವಿಸಿದೆ.ಇಲ್ಲಿಗೆ ಸಮೀಪದ ಚೆರಿಯಪರಂಬುವಿನಲ್ಲಿ ಪ್ರವಾಹ ವ್ಯಾಪಿಸಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದ್ದಲ್ಲದೆ ಹಲವು ಮನೆಗಳಿಗೆ ನೀರು ನುಗ್ಗಿದೆ. ಕಂದಾಯ ಇಲಾಖೆ ಸೂಚನೆಯಂತೆ ಇಲ್ಲಿನ ನಿವಾಸಿಗಳು ಹಲವರು ಸ್ಥಳಾಂತರಗೊಂಡಿದ್ದಾರೆ. ಯಾವುದೇ ಅನಾಹುತ ಸಂಭವಿಸಿಲ್ಲ.