ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ನಾಪೋಕ್ಲು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಬಹುಮಾನ ವಿತರಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಪಾಲ್ಗೊಳ್ಳುವುದು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿ ಎಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹೇಳಿದ್ದಾರೆ.
ನರಿಯಂದಡ ಕೇಂದ್ರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ನಾಪೋಕ್ಲು ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಸೋಲು, ಗೆಲವು ಮುಖ್ಯವಲ್ಲ. ಪಾಲ್ಗೊಳ್ಳುವುದು ಮುಖ್ಯ. ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ದೈಹಿಕ ಸಾಮರ್ಥ್ಯ ವೃದ್ಧಿಸುವುದಲ್ಲದೆ ಶೈಕ್ಷಣಿಕವಾಗಿಯೂ ಮುಂದುವರಿಯಲು ಸಾಧ್ಯ ಎಂದರು.
ಈಗ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲೂ ಕ್ರೀಡೆಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಗಿರೀಶ್ ಪೂಣಚ್ಚ, ಕಾರ್ಯದರ್ಶಿ ಬಿದ್ದಂಡ ಎಂ. ರಾಜೇಶ್ ಅಚ್ಚಯ್ಯ, ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ , ಗ್ರಾಮ ಪಂಚಾಯಿತಿ ಪಿಡಿಒ ಆಶಾ ಕುಮಾರಿ, ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ, ಸ್ಥಳದಾನಿ ಬೊವ್ವೇರಿಯಂಡ ಮತ್ತು ಬಟ್ಟಿಯಂಡ ಕುಟುಂಬದ ಅಧ್ಯಕ್ಷರು, ವಿವಿಧ ಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು, ವ್ಯವಸ್ಥಾಪಕರು,ಶಿಕ್ಷಕರು, ಸಿಬ್ಬಂದಿ ಪಾಲ್ಗೊಂಡಿದ್ದರು. ನರಿಯಂದಡ ಕೇಂದ್ರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಭವ್ಯ ಬಿ.ಎಸ್, ದೈಹಿಕ ಶಿಕ್ಷಣ ಶಿಕ್ಷಕ ಪಿ.ಬಿ ಪೊನ್ನಪ್ಪ ಮತ್ತು ಶಿಕ್ಷಕರು ಕ್ರೀಡಾಕೂಟದ ಉಸ್ತುವಾರಿ ವಹಿಸಿದ್ದರು.
ನಾಪೋಕ್ಲು ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.