ನರಗುಂದ: ಆಧುನಿಕತೆಗೆ ತಕ್ಕಂತೆ ಸುಸಜ್ಜಿತ ಮಾರುಕಟ್ಟೆ ನಿರ್ಮಾಣ ಹಾಗೂ ಪಟ್ಟಣದಲ್ಲಿ ಸಿಸಿ ರಸ್ತೆ, ಚರಂಡಿ ನಿರ್ಮಾಣ ನಡೆಯಲಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.
ಪಟ್ಟಣದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಿಂದ ಮುಖ್ಯ ಮಾರುಕಟ್ಟೆ, ಕೆಂಪಗಸಿಯಿಂದ ಬಸವೇಶ್ವರ ಸರ್ಕಲ್ ಹಾಗೂ ಪುರಸಭೆಯಿಂದ ಸರ್ವಜ್ಞ ಸರ್ಕಲ್ ವರೆಗೆ ಅಲಂಕಾರಿಕ ವಿದ್ಯುತ್ ಕಂಬ ಮತ್ತು ಬೀದಿದೀಪಗಳನ್ನು ₹32 ಲಕ್ಷಗಳಲ್ಲಿ ಅಳವಡಿಸಲಾಗುವುದು ಮತ್ತು ಪುರಸಭೆಯ ವ್ಯಾಪ್ತಿಯಲ್ಲಿ ಸರ್ಕಾರಿ ಕಚೇರಿ ಕಟ್ಟಡಗಳಲ್ಲಿ ವಿಕಲಚೇತನ ಸ್ನೇಹಿ ಶೌಚಾಲಯ ಮತ್ತು ಅವಶ್ಯಕ ಜಾರು ಹಾದಿಯನ್ನು ನಗರೋತ್ಥಾನ 4ನೇ ಹಂತದಲ್ಲಿ ಶೇ. 5ರ ಯೋಜನೆಯಡಿ ₹21.25 ಲಕ್ಷಗಳ ಅನುದಾನದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.
ಲೋಕಸಭಾ ಚುನಾವಣೆಯಲ್ಲಿ ಬಾಗಲಕೋಟೆ ಕ್ಷೇತ್ರ, ಹಾವೇರಿ ಕ್ಷೇತ್ರ ಮತ್ತು ಧಾರವಾಡ ಕ್ಷೇತ್ರಗಳ ಚುನಾವಣಾ ಪ್ರಚಾರದ ಜವಾಬ್ದಾರಿ ನನಗೆ ಸಿಕ್ಕಿದೆ. ಮಾಜಿ ಶಾಸಕರು ಭ್ರಷ್ಟಾಚಾರ ತನಿಖೆ ನೆಪದಲ್ಲಿ ಯಾರ‍್ಯಾರ ಮುಖಾಂತರ ಎಷ್ಟು ಹಣ ತಿಂದಿದ್ದಾರೆ ಎಂಬುದನ್ನು ಸಂದರ್ಭ ಬಂದಾಗ ಸಾಕ್ಷಿ ಸಮೇತ ತಿಳಿಸಲಿದ್ದೇನೆ ಎಂದರು.ಮತಕ್ಷೇತ್ರದ ಮಾಜಿ ಶಾಸಕ ಬಿ.ಆರ್. ಯಾವಗಲ್ಲ ಅವರಿಗೆ ಮರಳು ಪ್ರದೇಶದಲ್ಲೂ ನೀರು ಮತ್ತು ಎಣ್ಣೆ ತೆಗೆಯುವ ಕಲೆ ಇದೆ. ರಾಜ್ಯದಲ್ಲಿ ತುಘಲಕ್ ಸರ್ಕಾರ ವಿದೆ. ರಾಜದಾನಿ ಬೆಂಗಳೂರಲ್ಲಿ ಹೆಚ್ಚಿನ ಹಣಕ್ಕಾಗಿ ನೀರು ಮಾರಾಟದ ದಂದೆ ನಡೆದಿದೆ. ಜನರಿಗೆ ನೀರನ್ನು ಕೊಡಲಾಗದ ಕಾಂಗ್ರೆಸ್ ಜನವಿರೋಧಿಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬರಗಾಲ ಬರುತ್ತದೆ ಎಂಬುದಕ್ಕೆ ತಾಜಾ ಉದಾಹರಣೆಯನ್ನು ನಾವು ನೋಡುತ್ತಿದ್ದೇವೆ ಎಂದರು.
ಪುರಸಭೆಯ ಪ್ರಶಾಂತ ಜೋಶಿ, ಸದಸ್ಯರಾದ ರಾಜೇಶ್ವರಿ ಹವಾಲ್ದಾರ, ಚಂದ್ರು ಪವಾರ, ಅನ್ನಪೂರ್ಣಾ ಯಲಿಗಾರ, ದೇವಣ್ಣ ಕಲಾಲ, ರಾಚನಗೌಡ ಪಾಟೀಲ, ಸಿ.ಕೆ. ಪಾಟೀಲ, ಪ್ರಕಾಶ ಹಾದಿಮನಿ, ಯಲ್ಲಪ್ಪಗೌಡ ನಾಯ್ಕರ, ದಿವಾನಸಾಬ್ ಕಿಲ್ಲೇದಾರ, ಎಸ್.ಆರ್. ಪಾಟೀಲ, ಬಿ.ಬಿ. ಐನಾಪುರ, ಪ್ರಕಾಶಗೌಡ ತಿರಕನಗೌಡ್ರ, ಬಸಪ್ಪ ಅಮರಗೋಳ, ಮಾರುತಿ ಅರ್ಬಾಣದ, ಎಸ್.ಎಸ್. ಪಾಟೀಲ, ಮುಖ್ಯಾಧಿಕಾರಿ ಅಮಿತ್ ತಾರದಾಳೆ, ಪಿಡಬ್ಲ್ಯೂಡಿ ಅಧಿಕಾರಿ ಸತೀಶ ನಾಗನೂರ ಇದ್ದರು.