ಹೊನ್ನಾವರ: ನಾರಾಯಣ ಭಟ್ಟ ಸಂತೇಗುಳಿ ಅವರು ತಮ್ಮ ಇಡೀ ಬದುಕನ್ನು ಯಕ್ಷಗಾನದ ಉತ್ಕರ್ಷಕ್ಕಾಗಿ ಮುಡಿಪಾಗಿಟ್ಟವರು ಎಂದು ಹಿರಿಯ ಪತ್ರಕರ್ತ ಜಿ.ಯು. ಭಟ್ಟ ಹೇಳಿದರು.
ಇಲ್ಲಿಯ ಎಸ್.ಡಿ.ಎಂ. ಪದವಿ ಮಹಾವಿದ್ಯಾಲಯದ ಕನ್ನಡ ಸಂಘ, ಭಾರತೀಯ ಕಿಸಾನ್ ಸಂಘ ಮತ್ತು ಹೊಸಪೇಟೆಯ ಯಾಜಿ ಪ್ರಕಾಶನದ ಸಹಯೋಗದಲ್ಲಿ ನಡೆದ ಸಂತೇಗುಳಿ ನಾರಾಯಣ ಭಟ್ಟರ ಆತ್ಮಕಥನ ‘ಆಟದ ಮೇಳ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಕಲಾವಿದರ ಬದುಕಿಗೆ ಬೆಳಕಾದ ಭಟ್ಟರಂಥವರನ್ನು ನುಡಿಯಿಂದಾದರೂ ಗೌರವಿಸುವ ಕೆಲಸವಾಗುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು. ಕಟ್ಟಡದ ಗುದ್ದಲಿಪೂಜೆಯಲ್ಲಿ ಅಡಿಗಲ್ಲಿಗೆ ಪೂಜೆ-ಪುನಸ್ಕಾರ ಮಾಡಿ ಕಟ್ಟಡದ ಅಡಿಗೆ ಹಾಕಿ ಭದ್ರವಾದ ಕಟ್ಟಡ ಕಟ್ಟುತ್ತಾರೆ. ಮೇಲಿನ ಸೌಧ ಕಾಣುತ್ತದೆ. ಭಾರಹೊತ್ತ ಅಡಿಗಲ್ಲು ಮರೆತುಹೋಗುತ್ತದೆ. ಕಲೆ-ಸಂಸ್ಕೃತಿಯ ಉಳಿವಿಗೆ ಅಡಿಗಲ್ಲಾದ ನಾರಾಯಣ ಭಟ್ಟ ಅವರಿಂದ ದೊಡ್ಡವರಾದ ಕಲಾವಿದರು ಅವರನ್ನು ಮರೆತು ಮೆರೆಯುತ್ತಿದ್ದಾರೆ ಎಂದರು.ಯಾಜಿ ಪ್ರಕಾಶನದ ಪರವಾಗಿ ಸವಿತಾ ಯಾಜಿ ಮಾತನಾಡಿ, ಸಂತೇಗುಳಿ ನಾರಾಯಣ ಭಟ್ಟ ಅವರು ಪಟ್ಟ ಕಷ್ಟ-ನಷ್ಟ, ನೋವು-ನವಿಲುಗಳ ಸಮ್ಮಿಶ್ರವೇ ‘ಆಟದ ಮೇಳ’ ಕೃತಿ. ಅವರು ಟೆಂಟ್ ಆಟ ಆಡಿಸುವಾಗಿನ ಸಿಹಿ-ಕಹಿ ಅನುಭವದ ಮೂಟೆಯನ್ನು ಈ ಕೃತಿಯಲ್ಲಿ ನಿರೂಪಕರಾದ ಕೆರೆಮನೆ ಶಿವಾನಂದ ಹೆಗಡೆ ಅವರ ಲೇಖನಿಯ ಮೂಲಕ ಕಟ್ಟಿಕೊಟ್ಟಿದ್ದಾರೆ. ಮುಂದಿನ ಸಂಘಟಕರಿಗೆ ಇದು ದಾರಿದೀಪ ಮತ್ತು ಎಚ್ಚರಿಕೆಯ ಗಂಟೆಯಾಗಲಿ ಎಂದರು.ಸಾಹಿತಿ ನಾರಾಯಣ ಯಾಜಿ ಸಾಲೆಬೈಲು ಕೃತಿಕಾರರ ಕುರಿತು ಹಾಗೂ ಪ್ರೊ. ನಾಗರಾಜ ಹೆಗಡೆ ಅಪಗಾಲ ಕೃತಿಯ ಕುರಿತು ಮಾತನಾಡಿದರು. ಕೃತಿಕಾರ ನಾರಾಯಣ ಭಟ್ಟ ಸಂತೇಗುಳಿ ಮಾತನಾಡಿ, ಕೆರೆಮನೆ ಶಂಭು ಹೆಗಡೆ ಅವರ ಸಂಕಲ್ಪವನ್ನು ಅವರ ಮಗ ಈಡೇರಿಸಿದ್ದಾರೆ. ‘ಯಕ್ಷಗಾನ ನನ್ನ ಉಸಿರು’. ಅದರ ಸೇವೆಯಲ್ಲಿ ನನಗೆ ಸಂತೃಪ್ತಿ ಸಿಕ್ಕಿದೆ ಎಂದರು.
ಪ್ರಾಚಾರ್ಯರಾದ ಡಾ. ರೇಣುಕಾದೇವಿ ಗೋಳಿಕಟ್ಟೆ, ಗೋಪಾಲಕೃಷ್ಣ ಭಾಗವತ, ಕೆರೆಮನೆ ಶಿವಾನಂದ ಹೆಗಡೆ, ಪ್ರೊ. ಶಂಭು ಭಟ್ಟ ಕಡತೋಕ ಉಪಸ್ಥಿತರಿದ್ದರು. ಶಿವರಾಮ ಗಾಂವಕರ ಕನಕನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಪ್ರಶಾಂತ ಮೂಡಲಮನೆ ಸ್ವಾಗತಿಸಿದರು. ವಿದ್ಯಾಧರ ಕಡತೋಕಾ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಭಟ್ಟ ಶಿವಮೊಗ್ಗ ವಂದಿಸಿದರು. ಸಂಘಟಕರ ಪರವಾಗಿ ಕೆರೆಮನೆ ಶಿವಾನಂದ ಹೆಗಡೆ ದಂಪತಿಯನ್ನು ಮತ್ತು ಯಾಜಿ ಪ್ರಕಾಶನದ ಸವಿತಾ ಯಾಜಿ ದಂಪತಿ ಸನ್ಮಾನಿಸಲಾಯಿತು.