ಪುತ್ತೂರು: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಮಹಾತ್ಮ ಗಾಂಧಿ ಅವರ ಹೆಸರು ಬದಲಿ, ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸಿರುವ ಕೇಂದ್ರ ಸರಕಾರದ ವಿರುದ್ಧ ಪುತ್ತೂರು, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ಶುಕ್ರವಾರ ಪುತ್ತೂರಿನ ಬಸ್ ನಿಲ್ದಾಣ ಬಳಿಯ ಗಾಂಧಿಕಟ್ಟೆಯಲ್ಲಿ ಸತ್ಯಾಗ್ರಹ ನಡೆಸಿದರು.
ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ಉದ್ಯೋಗ ಖಾತರಿ ಯೋಜನೆಯನ್ನು ಕೇಂದ್ರ ಸರಕಾರ ನಿಷ್ಕ್ರಿಯಗೊಳಿಸುವ ಯೋಜನೆಗೆ ಕೈ ಹಾಕಿದ್ದು ಅದರಲ್ಲಿ ಮಹಾತ್ಮ ಗಾಂಧಿಜಿ ಹೆಸರು ತೆಗೆಯಲು ಮುಂದಾಗಿದೆ. ಹೆಸರು ಮಾತ್ರವಲ್ಲ ಯೋಜನೆಯನ್ನೇ ಹಂತ ಹಂತವಾಗಿ ನಿಷ್ಕ್ರಿಯಗೊಳಿಸುವ ಕೆಲಸಕ್ಕೆ ಕೈ ಹಾಕಿದೆ ಎಂದು ಹೇಳಿದರು.
ಅಕ್ರಮ ಸಕ್ರಮ ಸಮಿತಿ ಸದಸ್ಯ, ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ, ಪುತ್ತೂರು ಬ್ಲಾಕ್ ಉಸ್ತುವಾರಿಯಾಗಿರುವ ಚಿತ್ತರಂಜನ್ ಬೊಂಡಾಲ, ಪಕ್ಷದ ಮುಖಂಡ ಸೇಸಪ್ಪನೆಕ್ಕಿಲು ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ ವಂದಿಸಿದರು. ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರವಿಪ್ರಸಾದ್ ಶೆಟ್ಟಿ ಬನ್ನೂರು, ಶರೂನ್ ಸಿಕ್ವೇರಾ, ಗಂಗಾಧರ, ಯುವ ಕಾಂಗ್ರೆಸ್‌ನ ಅಧ್ಯಕ್ಷ ಫಾರೂಕ್ ಪೆರ್ನೆ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಖಾದರ್, ಅಬ್ಬು ನವಗ್ರಾಮ, ನಝೀರ್ ಮಠ, ಶಿವಪ್ರಸಾದ್ ರೈ ಮಠಂತಬೆಟ್ಟು, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ರೋಷನ್ ರೈ ಬನ್ನೂರು ಸಹಿತ ಹಲವು ಮಂದಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.