ಕೇಂದ್ರದ ನರೇಂದ್ರ ಮೋದಿ ಸರ್ಕಾರ ಕೊಟ್ಟ ಮಾತಿನಂತೆ ನಡೆದಿಲ್ಲ: ಸಿದ್ದರಾಮಯ್ಯ

KannadaprabhaNewsNetwork |  
Published : Apr 14, 2026, 01:30 AM IST
ನರಸಿಂಹರಾಜಪುರ ತಾಲೂಕಿನ ಹೊನ್ನೇಕೊಡಿಗೆ ಸಂಪರ್ಕ ಸೇತುವೆಯನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. | Kannada Prabha

ಸಾರಾಂಶ

ನರಸಿಂಹರಾಜಪುರನರಸಿಂಹರಾಜಪುರದ ₹38 ಕೋಟಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಲೋಕಾರ್ಪಣೆ, ₹60 ಕೋಟಿ ವೆಚ್ಚದ ರಸ್ತೆ ಅಗಲೀಕರಣಕ್ಕೆ ಭೂಮಿ ಪೂಜೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ₹196 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮತ್ತು ಚಾಲನೆ ನೀಡಿದರು.

- ನರಸಿಂಹರಾಜಪುರದಲ್ಲಿ ₹38 ಕೋಟಿ ವೆಚ್ಚದ ಹೊನ್ನೇಕೊಡಿಗೆ ಸೇತುವೆ ಉದ್ಘಾಟನೆ । ₹60 ಕೋಟಿ ರು. ವೆಚ್ಚದ ರಸ್ತೆ ಅಗಲೀಕರಣಕ್ಕೆ ಭೂಮಿ ಪೂಜೆ

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ನರಸಿಂಹರಾಜಪುರದ ₹38 ಕೋಟಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಲೋಕಾರ್ಪಣೆ, ₹60 ಕೋಟಿ ವೆಚ್ಚದ ರಸ್ತೆ ಅಗಲೀಕರಣಕ್ಕೆ ಭೂಮಿ ಪೂಜೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕುಗಳ ₹196 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ಮತ್ತು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ನರಸಿಂಹರಾಜಪುರ ಭಾಗದ ಅಭಿವೃದ್ಧಿ ಉದ್ದೇಶದಿಂದ ಇಲ್ಲಿನ ಶಾಸಕರ ಒತ್ತಾಸೆಯಿಂದ ಸೇತುವೆ ನಿರ್ಮಾಣ ಸಾಧ್ಯವಾಗಿದೆ. ಉಳಿದಂತೆ ರಸ್ತೆ ಅಗಲೀಕರಣ, ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ, ಪ್ರವಾಸೋದ್ಯಮವೂ ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.

ವಿರೋಧ ಪಕ್ಷದವರು ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ, ಗ್ಯಾರಂಟಿಗಳ ನಂತರ ಖಜಾನೆ ಖಾಲಿಯಾಗಿದೆ. ಅಭಿವೃದ್ಧಿ ಶೂನ್ಯ ಎಂದು ಟೀಕಿಸುತ್ತಾರೆ. ಆದರೆ, ಗ್ಯಾರಂಟಿಗಳ ಜತೆಗೆ ಅಭಿವೃದ್ಧಿಯನ್ನೂ ಕಾಂಗ್ರೆಸ್‌ ಸರ್ಕಾರ ಸಾಧ್ಯವಾಗಿಸಿದೆ.

ಕೇಂದ್ರ ಸರ್ಕಾರ 2023-24ನೇ ಸಾಲಿನಲ್ಲಿ ಅಪ್ಪರ್ ಭದ್ರಾ ನೀರಾವರಿ ಯೋಜನೆಗೆ ₹5,300 ಕೋಟಿ ಘೋಷಣೆ ಮಾಡಿ 4 ವರ್ಷ ಕಳೆದರೂ ಒಂದು ರುಪಾಯಿ ಬಿಡುಗಡೆ ಮಾಡಿಲ್ಲ. ಕೊಟ್ಟ ಮಾತಿಗೆ ತಪ್ಪಿದ್ದಾರೆ. 15 ನೇ ಹಣಕಾಸು ಆಯೋಗ ಬೆಂಗಳೂರಿನ ಕೆರೆ ಅಭಿವೃದ್ಧಿಗೆ ₹3 ಸಾವಿರ ಕೋಟಿ ಬೆಂಗಳೂರಿನ ಹೊರ ವಲಯದ ರಸ್ತೆ ಅಭಿವೃದ್ಧಿಗೆ ₹11,495 ಕೋಟಿ ನೀಡಲು ಶಿಪಾರಸ್ಸು ಮಾಡಿತ್ತು. ಆದರೆ, 1 ರುಪಾಯಿ ಕೊಡಲಿಲ್ಲ. ಕೇಂದ್ರದ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ರಾಜ್ಯದ ಜನತೆಗೆ ನೀಡಿದ್ದ ಭರವಸೆಯಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ಸರ್ಕಾರ ನುಡಿದಂತೆ ನಡೆದಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ 2013 ರಿಂದ 2018 ರವರೆಗಿನ ಅವಧಿಯಲ್ಲೂ ಅನೇಕ ಜನಪರ ಕಾರ್ಯಕ್ರಮ ನೀಡಿತ್ತು. ಈಗಿನ ಐದು ಗ್ಯಾರಂಟಿ ಯೋಜನೆಗಳ ಹಿಂದೆ ರಾಹುಲ್ ಗಾಂಧಿ ಆಶಯ ಹಾಗೂ ಡಿ.ಕೆ. ಶಿವಕುಮಾರ್ ಶ್ರಮವಿದೆ. ಕೋವಿಡ್ ನಂತರದ ಆರ್ಥಿಕ ಸಂಕಷ್ಟದ ಕಾಲದಲ್ಲಿ ಮಹಿಳೆಯರು ಮತ್ತು ಬಡವರ ನೆರವಿಗೆ ಬರಬೇಕೆಂಬ ಉದ್ದೇಶದಿಂದ ಮೊದಲ ಸಚಿವ ಸಂಪುಟ ಸಭೆಯಲ್ಲೇ ಈ ಯೋಜನೆ ಗಳಿಗೆ ಅನುಮೋದನೆ ನೀಡಲಾಗಿದೆ.

ಮುಖ್ಯಮಂತ್ರಿ ಹಣಕಾಸಿನ ಶಿಸ್ತಿನೊಂದಿಗೆ ಬಜೆಟ್‍ನಲ್ಲಿ ಸೂಕ್ತ ಅನುದಾನ ಮೀಸಲಿರಿಸಿ ಈ ಯೋಜನೆಗಳನ್ನು ಯಶಸ್ವಿ ಗೊಳಿಸಿದ್ದಾರೆ. ಇಂಧನ ಇಲಾಖೆಯೊಂದರಲ್ಲೇ ಸುಮಾರು ₹2.64 ಕೋಟಿ ಫಲಾನುಭವಿಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಇದಕ್ಕಾಗಿ ವಾರ್ಷಿಕ ಸುಮಾರು ₹10 ಸಾವಿರ ಕೋಟಿ ಸಬ್ಸಿಡಿಯನ್ನು ಸರ್ಕಾರ ಭರಿಸುತ್ತಿದೆ. ಗೃಹಲಕ್ಷ್ಮಿ, ಶಕ್ತಿ ಸೇರಿದಂತೆ ಎಲ್ಲಾ ಯೋಜನೆಗಳಿಂದ ಪ್ರತಿ ಕುಟುಂಬ ತಿಂಗಳಿಗೆ ಸರಾಸರಿ ₹5 ಸಾವಿರ ಆರ್ಥಿಕ ನೆರವು ಪಡೆಯುತ್ತಿವೆ. ಇದರಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದ್ದು, ರಾಜ್ಯದ ತಲಾದಾಯ ಹೆಚ್ಚಳಕ್ಕೆ ಈ ಯೋಜನೆಗಳು ಪೂರಕವಾಗಿವೆ ಎಂದರು.

ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಮಾತನಾಡಿ, 1958 ರಲ್ಲಿ ಭದ್ರಾ ಡ್ಯಾಂನಿಂದ ಮನೆ, ಜಮೀನು ಕಳೆದುಕೊಂಡ ಎನ್‌.ಆರ್.ಪುರ ಜನತೆಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ ನೂರಾರು ಕೋಟಿ ಅನುದಾನ ನೀಡಿ ಸಂತ್ರಸ್ಥರಿಗೆ ಮರಳಿ ಜೀವ ನೀಡಿದ್ದಾರೆ. ಕಡಹಿನಬೈಲು ಏತ ನೀರಾವರಿ ಯೋಜನೆಗೆ ಆಗಿನ ಕಾಲದಲ್ಲೇ ₹18 ಕೋಟಿ ನೀಡಿದ್ದರು. ಈಗ 60 ಕೆರೆಗಳು ನೀರು ತುಂಬಿ ಸಾವಿರಾರು ಎಕರೆ ಭೂಮಿ ನೀರಾವರಿಯಾಗಿದೆ. 2016 ರಲ್ಲಿ ಕಡಹಿನಬೈಲು ಏತ ನೀರಾವರಿ ಯೋಜನೆ ಉದ್ಘಾಟನೆಗೆ ಬಂದಿದ್ದ ಸಿದ್ದರಾಮಯ್ಯ ಹೊನ್ನೇಕೊಡಿಗೆ ಸಂಪರ್ಕ ಸೇತುವೆಗೆ ಶಂಕುಸ್ಥಾಪನೆ ಮಾಡಿ ₹20 ಕೋಟಿ ನೀಡಿದ್ದರು. ಈಗ ಸೇತುವೆ ಉದ್ಘಾಟನೆ ಮಾಡಿದ್ದಾರೆ. ರಸ್ತೆ ಅಗಲೀಕರಣಕ್ಕೆ ₹60 ಕೋಟಿ ಮಂಜೂರು ಮಾಡಿದ್ದಾರೆ ಎಂದರು.

ಸಮಾರಂಭದಲ್ಲಿ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಲಕೃಷ್ಣ, ಕೃಷಿ ಉತ್ಪನ್ನ ನಿಗಮದ ಅಧ್ಯಕ್ಷ ಹರೀಶ್, ಕಡೂರು ಶಾಸಕ ಆನಂದ್, ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ, ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಶಿವಾನಂದ್, ರಾಜೇಂದ್ರ ಕುಮಾರ್ ಕಠಾರಿಯಾ, ಸತ್ಯನಾರಾಯಣ, ಕೆ.ವಿ.ಪ್ರಭಾಕರ, ರಾಜು ಗೌಡ, ಓಣಿತೋಟ ರತ್ನಾಕರ, ಚಂದ್ರಮ್ಮ, ಜಿಲ್ಲಾಧಿಕಾರಿ ನಾಗರಾಜ್,ಜಿಲ್ಲಾ ಪಂಚಾಯಿತಿ ಸಿ.ಓ.ಕೀರ್ತನಾ ಸೇರಿದಂತೆ ಮೊದಲಾದವರಿದ್ದರು.

---ಕೋಟ್‌--

ಗ್ಯಾರಂಟಿ ಯೋಜನೆಯಿಂದ ಶೃಂಗೇರಿ ಕ್ಷೇತ್ರಕ್ಕೆ ವರ್ಷಕ್ಕೆ ₹250 ಕೋಟಿ ಸಿಗುತ್ತಿದೆ. ಆದರೂ ಕ್ಷೇತ್ರದ ಅಭಿವೃದ್ಧಿಗೆ ಸಿದ್ದರಾಮಯ್ಯ ಹಣ ನೀಡುತ್ತಿದ್ದು ಈ ವರ್ಷ ಅಭಿವೃದ್ಧಿ ಕಾರ್ಯಕ್ಕೆ ₹500 ಕೋಟಿ ಮಂಜೂರು ಮಾಡಿದ್ದಾರೆ.

ಟಿ.ಡಿ.ರಾಜೇಗೌಡ, ಶಾಸಕ--ಬಾಕ್ಸ್---

ಶೃಂಗೇರಿಗೆ ಹೆಚ್ಚುವರಿ ₹50 ಕೋಟಿ ಅನುದಾನ: ಸತೀಶ್‌ ಭರವಸೆ

ಹೆಬ್ಬೆ ಭವಾನಿ ಶಂಕರ ದೇವಸ್ಥಾನದ ಹತ್ತಿರದ ನದಿಗೆ ಸೇತುವೆ ನೀರ್ಮಾಣ ಸೇರಿದಂತೆ ಶೃಂಗೇರಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚುವರಿ ₹50 ಕೋಟಿ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.

ಸಮಾರಂಭ ಉದ್ದೇಶಿಸಿ ಮಾತನಾಡಿ, ಹೊಸ ಬಜೆಟ್‍ನಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಮೀಸಲಿಟ್ಟಿರುವ ₹2 ಸಾವಿರ ಕೋಟಿ ಅನುದಾನದಲ್ಲಿ ಶೃಂಗೇರಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚುವರಿಯಾಗಿ ₹50 ಕೋಟಿ ಒದಗಿಸುವುದಾಗಿ ಘೋಷಿಸಿದರು. ಕಳೆದ 20 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ನಮ್ಮ ಸರ್ಕಾರ ಜೀವ ತುಂಬುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧ. ಜಿಲ್ಲೆಯಲ್ಲಿ ಒಟ್ಟು 41 ಸೇತುವೆ ಮಂಜೂ ರಾಗಿದ್ದು, ಈ ಗಾಗಲೇ 31 ಸೇತುವೆ ಲೋಕಾರ್ಪಣೆಗೊಂಡಿವೆ. ಬಾಕಿ ಉಳಿದಿರುವ 10 ಸೇತುವೆ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಶೃಂಗೇರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಸೇತುವೆಗಳ ಅಭಿವೃದ್ಧಿಗೆ ಸರ್ಕಾರ ದೊಡ್ಡ ಮೊತ್ತದ ಅನುದಾನ ಬಿಡುಗಡೆ ಮಾಡಿದೆ. ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ₹6.10 ಕೋಟಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಸುಧಾರಣೆಗಾಗಿ ₹16 ಕೋಟಿ ಮೀಸಲಿಡಲಾಗಿದೆ. ಇದರ ಜೊತೆಗೆ, ರಾಜ್ಯ ಹೆದ್ದಾರಿಯಲ್ಲಿ ಎರಡು ಸೇತುವೆಗಳ ನಿರ್ಮಾಣಕ್ಕೆ ₹7.5 ಕೋಟಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಮೂರು ಸೇತುವೆಗಳಿಗೆ ₹10.40 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ, ಕ್ಷೇತ್ರದ ವಿವಿಧ ಭಾಗಗಳಲ್ಲಿ ₹2.80 ಕೋಟಿ ವೆಚ್ಚದಲ್ಲಿ ಕಿರು ಸೇತುವೆಗಳ ನಿರ್ಮಾಣಕ್ಕೂ ಒಪ್ಪಿಗೆ ನೀಡಲಾಗಿದೆ ಎಂದುವಿವರಿಸಿದರು.

----ಬಾಕ್ಸ್‌---

ಮುಖ್ಯಮಂತ್ರಿಗೆ ರಾಜೇಗೌಡರಿಂದ ಮನವಿ

ಕೊಪ್ಪದಿಂದ ಶಿವಮೊಗ್ಗ ವಿಮಾನ ನಿಲ್ದಾಣ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ ಹಣ ಮಂಜೂರು ಮಾಡಲು ಶಾಸಕ ಟಿ.ಡಿ.ರಾಜೇಗೌಡ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಅತಿ ವೃಷ್ಠಿಯಿಂದ ಹಾಳಾದ ಶೃಂಗೇರಿ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹100 ಕೋಟಿ, ಕೊಪ್ಪದಲ್ಲಿ ಉಪ ವಿಭಾಗಾಧಿಕಾರಿಗಳ ಕಚೇರಿ ಪ್ರಾರಂಭಿಸಬೇಕು. ಶೃಂಗೇರಿ ಪಟ್ಟಣ ರಸ್ತೆ ಅಗಲೀಕರಣಕ್ಕೆ ಅನುದಾನ, ಒತ್ತುವರಿ ಮಾಡಿದ ರೈತರ ಭೂಮಿ ಲೀಸ್ ಮೇಲೆ ರೈತರಿಗೆ ಕೊಡುವ ಬಗ್ಗೆ ಸರ್ಕಾರ ಆದೇಶ ಹೊರಡಿಸಬೇಕು ಎಂಬ ವಿವಿಧ ಮನವಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದರು.---ಬಾಕ್ಸ್‌---

ಅಜಾನ್‌ ವೇಳೆ ಭಾಷಣ ನಿಲ್ಲಿಸಿದ ಸಿಎಂ

ಸೇತುವೆ ಲೋಕಾರ್ಪಣೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ಮಸೀದಿಯ ಅಜಾನ್‌ ಕೇಳುತ್ತಿದ್ದಂತೆ ಮುಖ್ಯಮಂತ್ರಿ ಭಾಷಣ ನಿಲ್ಲಿಸಿದರು. ಅಜಾನ್‌ ಮುಗಿದ ಬಳಿಕ ಮತ್ತೆ ಸಿದ್ದರಾಮಯ್ಯ ತಮ್ಮ ಭಾಷಣ ಮುಂದುವರಿಸಿದರು.

--ಬಾಕ್ಸ್‌--

ಸೆಲ್ಫಿ ವಿತ್‌ ಸಿದ್ದರಾಮಯ್ಯ

ಉದ್ಘಾಟನೆಯಾದ ಸೇತುವೆ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸೆಲ್ಫಿ ಪಡೆಯಲು ಮಹಿಳಾ ಕಾಂಗ್ರೆಸ್‌ ಪದಾಧಿಕಾರಿಗಳು ಮತ್ತು ಇತರೆ ಮಹಿಳೆಯರು ಮುಗಿಬಿದ್ದ ದೃಶ್ಯ ಕಂಡು ಬಂತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳಾ ಸ್ವಾತಂತ್ರ ಹೋರಾಟಗಾರ್ತಿ ಅಕ್ಕಮಹಾದೇವಿ
ಭಾಗ್ಯವಂತಿ ಶಿಕ್ಷಣ ಸಂಸ್ಥೆಗೆ ಒಲಿದ ಹ್ಯಾಟ್ರಿಕ್!