ನಾಳೆ ಚಿಕ್ಕಬಳ್ಳಾಪುರಕ್ಕೆ ನರೇಂದ್ರ ಮೋದಿ ಆಗಮನ

KannadaprabhaNewsNetwork | Published : Apr 19, 2024 1:07 AM

ಸಾರಾಂಶ

ಏಪ್ರಿಲ್ 20 ರಂದು ಚಿಕ್ಕಬಳ್ಳಾಪುರಕ್ಕೆ ಪ್ರಧಾನ ಮಂತ್ರಿ ನರೆಂದ್ರಮೋದಿ ಆಗಮಿಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಮತಯಾಚನೆ ಮಾಡಲಿದ್ದಾರೆ ಎಂದು ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಎಪ್ರಿಲ್ 20 ರಂದು ಚಿಕ್ಕಬಳ್ಳಾಪುರಕ್ಕೆ ಪ್ರಧಾನ ಮಂತ್ರಿ ನರೆಂದ್ರಮೋದಿ ಆಗಮಿಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಪರ ಮತಯಾಚನೆ ಮಾಡಲಿದ್ದಾರೆ ಎಂದು ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ತಿಳಿಸಿದರು.

ಗುರುವಾರ ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಬಿಜೆಪಿ ವತಿಯಿಂದ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಏಪ್ರಿಲ್ 20ರ ಶನಿವಾರ ಸಂಜೆ 3 ಗಂಟೆಗೆ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರ ಬೈಪಾಸ್‌ನ ಚೊಕ್ಕಹಳ್ಳಿ ಬಳಿ ನಿರ್ಮಿಸಿರುವ ಬೃಹತ್ ವೇದಿಕೆಗೆ ಪ್ರಧಾನಿ ಮೋದಿ ಆಗಮಿಸಿ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಲೋಕಸಭಾ ಕ್ಷೇತ್ರಗಳ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದರು.

ಪ್ರಧಾನಿ ಭಾಷಣಕ್ಕಾಗಿ ಜನ ಕಾಯುತ್ತಿದ್ದಾರೆ:

ಪ್ರಧಾನಿ ನರೇಂದ್ರ ಮೋದಿ ವಿಶ್ವಕಂಡ ಮಹಾನಾಯಕ, ಅಂತಹ ವ್ಯಕ್ತಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಬರುತ್ತಿರುವುದು ಸಂತೋಷವಾಗಿದೆ. ಅವರ ಭಾಷಣವನ್ನು ಕೇಳಲು ಸಾಕಷ್ಟು ಕಾತುರದಿಂದ ದೇಶದ ಜನ ಇರುತ್ತಾರೆ. ಅದೇ ರೀತಿ ಚಿಕ್ಕಬಳ್ಳಾಪುರ ಹಾಗೂ ಕೋಲಾರ ಭಾಗದ ಲೋಕಸಭಾ ಕ್ಷೇತ್ರದ ಜನತೆ ಕಾತುರದಿಂದ ಕಾಯುತ್ತಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರು, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೋಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಬಿಜೆಪಿ ಮತ್ತು ಜೆಡಿಎಸ್ ನ ಅನೇಕ ನಾಯಕರು ಆಗಮಿಸಲಿದ್ದಾರೆ. ಒಂದೇ ವೇದಿಕೆಯಲ್ಲಿ ಹಾಲಿ ಹಾಗೂ ಮಾಜಿ ಪ್ರಧಾನಿಗಳನ್ನು ಕೆ ಕಾಣುತ್ತಿರುವುದಕ್ಕೆ ಈ ಭಾಗದ ಜನರನ್ನು ಮತ್ತಷ್ಟು ಕುತೂಹಲ ಮೂಡಿಸುತ್ತಿದೆ ಎಂದರು.

ಸಿಎಂಗೆ ಜನರು ಉತ್ತರ ಕೊಡಲಿದ್ದಾರೆ:

ಇಂದು ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದಲ್ಲಿ ಎನ್‌ಡಿಎ ಅಭ್ಯರ್ಥಿಗೆ ಮತ ನೀಡಬೇಡಿ, ಸೋಲಿಸಿ ಮನೆಗೆ ಕಳುಹಿಸಿ ಎಂದು ಹೇಳಿದ್ದಾರೆ. ಅದಕ್ಕೆ ಉತ್ತರವನ್ನು ವೇದಿಕೆಯಲ್ಲಿ ಪ್ರಧಾನಿಗಳು ನೀಡಲಿದ್ದಾರೆ. ಸಿದ್ದರಾಮಯ್ಯ ಹೇಳಿಕೆಗಳನ್ನು ನೀಡುವುದು ಇದೆ ಮೊದಲೇನಲ್ಲ ಅವರು ನಮ್ಮ ಅಭ್ಯರ್ಥಿ ವಿರುದ್ಧ ಏನೇ ಆರೋಪ ಮಾಡಿದರು ಜೂನ್ 4ರಂದು ಅದಕ್ಕೆ ನಾವು ಮತ್ತು ಲೋಕಸಭಾ ಕ್ಷೇತ್ರಗಳ ಜನತೆ ಮತದಾನದ ಮೂಲಕ ತಕ್ಕ ಉತ್ತರ ಕೊಡುವರು.

ಸಿದ್ದರಾಮಯ್ಯ ಪೂರ್ವಗ್ರಹ ಪೀಡಿತರಂತೆ ತನಿಖೆಗೆ ಮುಂಚಿತವಾಗಿಯೇ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ನನ್ನು ಅಪರಾಧಿ ಎಂದು ಕರೆಯುತ್ತಿರುವುದು ತಪ್ಪು ಹೇಳಿಕೆಯಾಗಿದೆ. ಜೊತೆಗೆ ಸಿದ್ದರಾಮಯ್ಯ ಮಾತುಗಳಿಗೆ ಈ ಭಾಗದ ಜನರ ಬೆಂಬಲ ಇಲ್ಲಾ ಎಂದು ಸ್ಪಷ್ಟಪಡಿಸಿದರು. ಸುಧಾಕರ್ ಕಣ್ಣೀರು ಕಂಡು ಕ್ಷೇತ್ರದ ಹೆಣ್ಣುಮಕ್ಕಳು ಕಣ್ಣೀರು ಹಾಕಿದ್ದು, ಈ ಬಾರಿ ಅಧಿಕ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ತಿಳಿಸಿದರು.

ಬಿಬಿಎಂಪಿ ಮಾಜಿ ಉಪಾಧ್ಯಕ್ಷ ಕೆ.ವಿ.ನವೀನ್ ಕಿರಣ್ ಮಾತನಾಡಿ, ಈ ಬೃಹತ್ ಸಮಾವೇಶದಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಗೆ ಯಾಕೆ ಮತ ಹಾಕುತ್ತಾರೆ, ಯಾಕೆ ಅಭ್ಯರ್ಥಿಗೆ ಮತ ನೀಡಲಾಗುತ್ತದೆ ಎಂದು ತಿಳಿಸುತ್ತಾರೆ.

ನರೇಂದ್ರ ಮೋದಿ ಭಾಷಣ ಕೇಳಲು ಎರಡು ಲೋಕಸಭಾ ಕ್ಷೇತ್ರದ ಜನ ಕಾಯುತ್ತಿದ್ದಾರೆ. ಬಿಜೆಪಿ ಜೆಡಿಎಸ್ ಪಕ್ಷದ ಸ್ಥಳೀಯ ಮುಖಂಡ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೀರಾವರಿ ಯೋಜನೆಗಳನ್ನು ಜಾರಿ ಮಾಡುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಅದೇ ರೀತಿ ಸ್ಥಳೀಯ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಸಹಾ ನೀರಾವರಿ ಯೋಜನೆಗಳ ಬಗ್ಗೆ ಸಾಕಷ್ಟು ಆಸಕ್ತಿಯಿಂದ ತಿಳಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಕಾಯಾಧ್ಯಕ್ಷ ಕೆ.ಆರ್.ರೆಡ್ಡಿ,ಜೆಡಿಎಸ್ ವಕ್ತಾರ ಆರ್.ಮಟಮಪ್ಪ,ಬಿಜೆಪಿ ಮುಖಂಡರಾದ ಮರಳು ಕುಂಟೆ ಕೃಷ್ಣಮೂರ್ತಿ, ಅನು ಆನಂದ್, ಮಧುಚಂದ್ರ,ದೇವಸ್ಥಾನದ ಹೊಸಹಳ್ಳಿ ರಾಮಣ್ಣ,ಜಿ.ಆರ್.ಶ್ರೀನಿವಾಸ್, ಮತ್ತಿತರರಿದ್ದರು.

Share this article