ಹಾವೇರಿ: ಚಿತ್ರದುರ್ಗದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಲ್ಲಿ ಜು. 18ರಂದು ರಾಷ್ಟ್ರೀಯ ಭೋವಿ (ವಡ್ಡರ) ಜನೋತ್ಸವ ಆಯೋಜಿಸಿದ್ದು, ಹಾವೇರಿ ಜಿಲ್ಲೆಯಿಂದ ₹5 ಸಾವಿರಕ್ಕೂ ಹೆಚ್ಚು ಜನ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಅಖಿಲ ಕರ್ನಾಟಕ ಭೋವಿ ಸಂಘದ ಜಿಲ್ಲಾಧ್ಯಕ್ಷ ರವಿ ಪೂಜಾರ ತಿಳಿಸಿದರು.
ಸಮಾವೇಶವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಉದ್ಘಾಟಿಸಲಿದ್ದು, ಮಾಜಿ ಸಚಿವ ಶಿವರಾಜ ತಂಗಡಗಿ, ಅರವಿಂದ ಲಿಂಬಾವಳಿ, ಚಂದ್ರಪ್ಪ, ಶ್ರೀನಿವಾಸ, ಎಸ್. ರಘು ಭಾಗವಹಿಸಲಿದ್ದಾರೆ. ಅಲ್ಲದೇ ದೇಶದ ವಿವಿಧ ರಾಜ್ಯಗಳಿಂದ ಭೋವಿ (ವಡ್ಡರ) ಸಮುದಾಯದ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಸದಸ್ಯರು ಪಾಲ್ಗೊಳ್ಳಲಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆಯಿದೆ ಎಂದರು. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ. 90ಕ್ಕಿಂತ ಹೆಚ್ಚು ಅಂಕ ಪಡೆದ ಭೋವಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಸಮಾಜದ ವಧು-ವರರ ಸಮಾವೇಶ, ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸಮ್ಮಾನ, ರಕ್ತದಾನ ಶಿಬಿರ, ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಸರ್ಕಾರಕ್ಕೆ ಹಕ್ಕೊತ್ತಾಯ: ಈ ಸಮಾವೇಶದಲ್ಲಿ ಭೋವಿ ಸಮಾಜಕ್ಕೆ ಆಗಿರುವ ಅನ್ಯಾಯದ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು. ಒಳಮೀಸಲಾತಿಯಲ್ಲಿ ಅನ್ಯಾಯವಾಗಿದ್ದು, ಸಾಮಾಜಿಕ ಸ್ಥಿತಿ-ಗತಿ ನೋಡಿಕೊಂಡು ಒಳಮೀಸಲು ಪರಿಷ್ಕರಿಸುವಂತೆ ಒತ್ತಡ ಹಾಕಲಾಗುವುದು. ಸಮಾಜದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು. ವಿಧಾನಪರಿಷತ್ತಿನಲ್ಲಿ ಅವಕಾಶ ಕಲ್ಪಿಸಬೇಕು. ನಿಗಮ-ಮಂಡಳಿಗಳಲ್ಲಿ ಆದ್ಯತೆ ಮೇರೆಗೆ ಸಮಾಜಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುವುದು ಸೇರಿದಂತೆ ಹಲವು ಮಹತ್ವದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲಾಗುತ್ತದೆ ಎಂದರು.ಸುದ್ದಿಗೋಷ್ಠಿಯಲ್ಲಿ ಸಮಾಜದ ಮುಖಂಡರಾದ ಜಗದೀಶ ಮಲಗೋಡ, ಅರ್ಜುನ ಹಂಚಿನಮನಿ, ದಾಸಪ್ಪ ಕರ್ಜಗಿ, ಮಹೇಶ ಕುರುಂದವಾಡ, ಹನುಮಂತಪ್ಪ ದೇವಗಿರಿ, ದ್ಯಾಮಣ್ಣ ಅರಸನಾಳ, ಭೀಮಣ್ಣ ಬತ್ತಿಕೊಪ್ಪ, ಮಂಜುನಾಥ ಗುಡಗೇರಿ, ನಾಗರಾಜ, ಸುರೇಶ ಇತರರಿದ್ದರು.