ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ನಾಗನೂರು ರುದ್ರಾಕ್ಷಿ ಮಠದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭೆ ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ತುಳಿತಕ್ಕೆ ಒಳಗಾದವರಿಗೆ ಸಮಾನತೆ ತಂದುಕೊಟ್ಟ ವಚನ ಸಾಹಿತ್ಯವನ್ನು ಮಹಿಳೆಯರು ಅಧ್ಯಯನ ಮಾಡುವ ಅಗತ್ಯವಿದೆ. ಒಬ್ಬ ಮಹಿಳೆಗೆ ಧಾರ್ಮಿಕ ಸಂಸ್ಕಾರ ಬಂದರೆ ಇಡೀ ಮನೆತನಕ್ಕೆ ಸಂಸ್ಕಾರ ಬಂದಂತೆ. ಹೀಗಾಗಿ ಮಹಿಳೆಯರು ಸಂಸ್ಕಾರವಂತರಾಗುವುದು ಅನಿವಾರ್ಯವಾಗಿದೆ ಎಂದು ಹೇಳಿದರು.
ಹಿಂದೆಂದಿಗಿಂತ ಇಂದಿನ ದಿನಮಾನಗಳಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿಗೆ ಧಾರ್ಮಿಕ ಸಂಸ್ಕಾರ ಇದ್ದರೆ, ಆಕೆ ತನ್ನ ಮಕ್ಕಳಿಗೂ ಅದೇ ಸಂಸ್ಕಾರ ನೀಡುತ್ತಾಳೆ. ತನ್ಮೂಲಕ ಇಡೀ ಮನೆತನವನ್ನೇ ಆಕೆ ಸರಿಯಾದ ಮಾರ್ಗಕ್ಕೆ ಕೊಂಡೊಯ್ಯುವಲ್ಲಿ ಶಕ್ತಳಾಗುತ್ತಾಳೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ತತ್ವ ಸಿದ್ಧಾಂತಗಳ ಅರಿವು ಇಲ್ಲದಿದ್ದಲ್ಲಿ ಆಕೆ ತನ್ನ ಮಕ್ಕಳಿಗೆ ಏನು ಕೊಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಮಹಿಳೆಯ ಸ್ಥಾನ ಅತ್ಯಂತ ಪ್ರಮುಖವಾಗಿದೆ ಎಂದು ಹೇಳಿದರು.ಜಗತ್ತಿನಲ್ಲಿ ಪ್ರಪ್ರಥಮವಾಗಿ ಮಹಿಳೆಯೊಬ್ಬಳಿಗೆ ಜಗದ್ಗುರು ಸ್ಥಾನ ನೀಡಿ ಗೌರಿಸಿದ ಧರ್ಮ ಎಂದರೆ ಅದು ಲಿಂಗಾಯತ ಮಾತ್ರ. ಮಹಿಳೆಯನ್ನು ಕಸಕ್ಕಿಂತ ಕಡೆಯಾಗಿ ಕಾಣುತ್ತಿದ್ದ ಸಮಯದಲ್ಲಿ ಮಹಿಳೆಗೆ ತಮ್ಮ ಸರಿ ಸಮಾನವಾದ ಸ್ಥಾನಮಾನ ನೀಡಿ ಬೆಳೆಸಿದ ಬಸವಣ್ಣನ ಆದಿಯಾಗಿ ಸಮಸ್ತ ಶರಣರು ಹಾಕಿಕೊಟ್ಟ ಧರ್ಮ, ತತ್ವ ಸಿದ್ಧಾಂತ ಅರಿತು ಅವರ ಮಾರ್ಗದಲ್ಲಿ ನಡೆಯುವ ಮೂಲಕ ಅವರೆಲ್ಲರನ್ನು ಗೌರವಿಸಬೇಕು. ಐವತ್ತು ವರ್ಷಗಳ ಹಿಂದೆ ಕೂಡಲಸಂಗಮ ಬಸವ ಧರ್ಮ ಪೀಠದ ಜಗದ್ಗುರುವಾಗಿ ಮಾತೇ ಮಹದೇವಿಯವರನ್ನು ನೇಮಿಸಲ್ಪಟ್ಟಾಗ ಅದನ್ನು ಸಮಾಜ ಸುಲಭವಾಗಿ ಸ್ವೀಕರಿಸಲಿಲ್ಲ ಸವಾಲುಗಳ ಮತ್ತು ಕಷ್ಟಗಳನ್ನು ಅವರು ಎದುರಿಸಬೇಕಾಗಿತ್ತು, ಅದಕ್ಕೆಲ್ಲ ಧೈರ್ಯ ತುಂಬಿ ಬೆನ್ನೆಲುಬಾಗಿ ನಿಂತ ಲಿಂಗೈಕ್ಯ ಜಗದ್ಗುರು ಲಿಂಗಾನಂದ ಸ್ವಾಮಿಜಿಯವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು ಎಂದು ನುಡಿದರು.
ಸಮಾರಂಭದಲ್ಲಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಆಡಿ ಹಂದಿಗುಂದ ಸಿದ್ದೇಶ್ವರ ಮಠದ ಶಿವಾನಂದ ಸ್ವಾಮೀಜಿ, ಓರ್ವ ಮಹಿಳೆ ಸಂಘಟಿತವಾದರೆ ಕೇವಲ ತಾಲೂಕು, ಜಿಲ್ಲೆ, ರಾಜ್ಯ ಮಾತ್ರವಲ್ಲ ಇಡೀ ಭಾರತವೇ ಸಂಘಟಿತವಾದಂತೆ ಎಂದರು. ಅಥಣಿ ಮೋಟಗಿ ಮಠದ ಪ್ರಭುಚನ್ನಬಸವ ಸ್ವಾಮೀಜಿ ಮಾತನಾಡಿ, ಭೂಮಿಯ ಮೇಲಿನ ಸಕಲ ಜೀವರಾಷಿಗಳಿಗೆ ಲೇಸನ್ನೆ ಬಯಸಿದ, ಹಾಮಾನವತಾವಾದಿ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕರನ್ನಾಗಿ ಸರ್ಕಾರ ಘೋಷಿಸಿರುವುದು ಅಭಿನಂದನೀಯ ಎಂದರು.