ಭಾರತ ಸರ್ಕಾರದ ನಿಲುವಿನ ಹಿಂದೆ ರಾಷ್ಟ್ರೀಯ ಹಿತಾಸಕ್ತಿ: ಲೆ.ಜ. ವಿನೋದ್‌ ಖಂಡಾರೆ

KannadaprabhaNewsNetwork | Published : Jan 21, 2024 1:34 AM

ಸಾರಾಂಶ

ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ‘ಮಂಗಳೂರು ಲಿಟ್‌ ಫೆಸ್ಟ್‌-2024’ನಲ್ಲಿ ಎರಡನೇ ದಿನ ಶನಿವಾರ ‘ನೂತನ ಜಾಗತಿಕ ಸನ್ನಿವೇಶದಲ್ಲಿ ಭಾರತದ ಮಹತ್ವ’ ಕುರಿತ ಪ್ರಥಮ ವಿಚಾರಗೋಷ್ಠಿಯಲ್ಲಿ ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ವಿನೋದ್ ಖಂಡಾರೆ ಅಭಿಪ್ರಾಯ ಮಂಡಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಭಾರತದ ಅಭಿಪ್ರಾಯಗಳನ್ನು ಇಡೀ ಜಗತ್ತೇ ಎದುರು ನೋಡುವಂತಾಗಿದೆ. ಭಾರತ ಸರ್ಕಾರ ರಾಜತಾಂತ್ರಿಕವಾಗಿ ಅಥವಾ ದೇಶೀಯವಾಗಿ ಯಾವುದೇ ನಿಲುವನ್ನು ತೆಗೆದುಕೊಂಡರೂ ಅದರ ಹಿಂದೆ ರಾಷ್ಟ್ರೀಯ ಹಿತಾಸಕ್ತಿ ಇದ್ದೇ ಇರುತ್ತದೆ ಎಂದು ರಕ್ಷಣಾ ಇಲಾಖೆ ಪ್ರಧಾನ ಸಲಹೆಗಾರ, ನಿವೃತ್ತ ಲೆಫ್ಟಿನೆಂಟ್‌ ಜನರಲ್‌ ವಿನೋದ್ ಖಂಡಾರೆ ಹೇಳಿದರು. ಇಲ್ಲಿನ ಟಿಎಂಎ ಪೈ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ‘ಮಂಗಳೂರು ಲಿಟ್‌ ಫೆಸ್ಟ್‌-2024’ನಲ್ಲಿ ಎರಡನೇ ದಿನ ಶನಿವಾರ ‘ನೂತನ ಜಾಗತಿಕ ಸನ್ನಿವೇಶದಲ್ಲಿ ಭಾರತದ ಮಹತ್ವ’ ಕುರಿತ ಪ್ರಥಮ ವಿಚಾರಗೋಷ್ಠಿಯಲ್ಲಿ ಅವರು ಅಭಿಪ್ರಾಯ ಮಂಡಿಸಿದರು. ಕೇವಲ ನಾಯಕತ್ವದ ಆಯಾಮದಲ್ಲಿ ಮಾತ್ರವಲ್ಲದೆ, ಜಾಗತಿಕ ಬಿಕ್ಕಟ್ಟುಗಳ ಸಮಯದಲ್ಲಿ ಭಾರತದ ಪ್ರತಿಕ್ರಿಯೆಗಳು, ರಾಜತಾಂತ್ರಿಕ, ರಕ್ಷಣಾ ಮತ್ತು ಆರ್ಥಿಕ ನೀತಿಗಳು, ನುಡಿದಂತೆ ನಡೆಯುವ ಪ್ರವೃತ್ತಿ, ಜಿ 20 ಯಶಸ್ವಿ ಆಯೋಜನೆ, ಬೇರೆ ದೇಶಗಳೆದುರು ನಮ್ಮ ಪರವಾದ ನಿಲುವನ್ನು ಇನ್ನಷ್ಟು ಬಲಿಷ್ಠಗೊಳಿಸಿದೆ. ಜಗತ್ತಿನಾದ್ಯಂತ ಎಷ್ಟೇ ಅನಿಶ್ಚಿತತೆಯಿದ್ದರೂ, ಭಾರತ ವಿಶ್ವಾಮಿತ್ರನಂತೆ ಕಾರ್ಯನಿರ್ವಹಿಸುತ್ತಿದೆ. ಗ್ಲೋಬಲ್ ಸೌತ್‌ನ ಪರಿಕಲ್ಪನೆಯೂ ಭಾರತದ ಪ್ರತಿಕ್ರಿಯೆಗಳಿಂದಾಗಿಯೇ ಹುಟ್ಟಿಕೊಂಡಿದೆ. ಸಮೂಹ ಮಾಧ್ಯಮಗಳಲ್ಲಿ ಹುಟ್ಟಿಕೊಳ್ಳುವ ಅಭಿಪ್ರಾಯಗಳೆಲ್ಲವೂ ಭಾರತದ ಹೆಸರನ್ನು ಬಲಪಡಿಸಲು ಬಹಳ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

ಹಮಾಸ್‌-ಇಸ್ರೇಲ್‌ ವಿಚಾರದಲ್ಲೂ ನಾವು ಭಯೋತ್ಪಾದನೆಯಿಂದ ತೊಂದರೆಗೀಡಾದವರು, ಹಾಗಾಗಿ ಉಗ್ರ ಚಟುವಟಿಕೆಗಳಿಗೆ ಬೆಂಬಲವಿಲ್ಲ, ಇಸ್ರೇಲ್‌ನೊಳಗೆ ನುಸುಳಲು ಹಮಾಸ್‌ ಸುರಂಗ ತೋಡಿರುವುದನ್ನು ವಿರೋಧಿಸಲೇಬೇಕಾಗುತ್ತದೆ, ಹಾಗೆಂದು ಮುಗ್ಧಜೀವಗಳು ಸಾಯುವುದನ್ನು ಸಮರ್ಥಿಸಿಕೊಳ್ಳಲಾಗದು. ಬದಲಾಗುವ ಪರಿಸ್ಥಿತಿಗಳಿಗನುಗುಣವಾಗಿ ನಮ್ಮ ನಿಲುವನ್ನು ಹೊಂದಿರುವುದು ಸರಿಯಾಗಿದೆ ಎಂದರು.

ಭಯೋತ್ಪಾದನೆ ವಿರುದ್ಧ ಭಾರತ ನಿಲುವು:ಮಾಜಿ ರಾಯಭಾರಿ ಅಶೋಕ್‌ ಸಜ್ಜನವರ್‌ ಮಾತನಾಡಿ, ಅಂತಾರಾಷ್ಟ್ರೀಯ ಬಿಕ್ಕಟ್ಟುಗಳಲ್ಲಿ ತಟಸ್ಥನೀತಿ ಅಥವಾ ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿದು ತೀರ್ಮಾನಗಳನ್ನು ಬದಲಿಸುವುದಕ್ಕಿಂತ, ಭಾರತ ಇದೀಗ ಬಹು ಆಯಾಮಗಳಲ್ಲಿ ಚಿಂತನೆ ನಡೆಸಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತದೆ. ಪ್ರಧಾನಿಯವರ ವಿಕಸಿತ ದೇಶ, ಸುರಕ್ಷಿತ ದೇಶ ಎಂಬ ಮಾತಿನಂತೆ ಸ್ಪಷ್ಟತೆಯ ಕೊರತೆಯಿರುವ ಒಂದಿಷ್ಟು ವಿಚಾರಗಳಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವಾಗ ಭಾರತ ಬಳಷ್ಟು ಮುತುವರ್ಜಿ ವಹಿಸುತ್ತದೆ. ಇಷ್ಟಾಗಿಯೂ ಭಾರತದ ನಿಲುವು ಭಯೋತ್ಪಾದನೆಗೆ ಸಂಪೂರ್ಣ ವಿರುದ್ಧವಾಗಿದೆ ಎಂದು ಇಸ್ರೇಲ್‌ ಹಾಗೂ ಪ್ಯಾಲೆಸ್ತೇನ್‌ ಸಂಘರ್ಷದಲ್ಲಿ ಭಾರತದ ನಿಲುವಿನ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ವಿವಿಧ ಅಂತಾರಾಷ್ಟ್ರೀಯ ನಾಯಕರುಗಳ ಜೊತೆ ನಮ್ಮ ಉತ್ತಮ ಸಂಬಂಧವೂ ಭಾರತದ ಮೇಲೆ ಇನ್ನಷ್ಟು ದೃಷ್ಟಿಗಳು ಬೀಳುವಂತೆ ಮಾಡಿದೆ ಎಂದವರು ಹೇಳಿದರು.ಪಾಂಡಿಚೇರಿ ವಿವಿ ಉಪನ್ಯಾಸಕ ಡಾ.ನಂದ ಕಿಶೋರ್‌ ಸಮನ್ವಯಕಾರರಾಗಿದ್ದರು.

ಪಾಠ ಕಲಿಯಲಿದೆ ಮಾಲ್ಡೀವ್ಸ್‌ಏಷ್ಯಾ ಪ್ರದೇಶ ಮಾತ್ರವಲ್ಲ ಜಗತ್ತಿನಲ್ಲೇ ಶಕ್ತಿಶಾಲಿಯಾಗಿ ಹೊರಹೊಮ್ಮುವ ಪ್ರಬಲ ಆಕಾಂಕ್ಷೆಯನ್ನು ಚೀನಾ ಹೊಂದಿದೆ. ಅದು ಶ್ರೀಲಂಕಾ, ಬಾಂಗ್ಲಾದೇಶದಂತಹ ಸಣ್ಣಪುಟ್ಟರಾಷ್ಟ್ರಗಳಿಗೆ ನೆರವು ನೀಡುವ ನೆಪದಲ್ಲಿ ಅವರ ಸಾರ್ವಭೌಮತೆಯನ್ನು ಕಬಳಿಸುತ್ತದೆ. ಇದು ಶೀಘ್ರದಲ್ಲೇ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ಗೂ ಮನದಟ್ಟಾಗಲಿದೆ ಎಂದು ಲೆ.ಜ.ವಿನೋದ್‌ ಖಂಡಾರೆ ಹೇಳಿದರು.ಭಾರತದ ನೆರೆಹೊರೆಯ ವಿಚಾರದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತ ಸಾಮಾನ್ಯವಾಗಿ ನೆರೆಯ ದೇಶಗಳಿಗೆ ಎಷ್ಟೇ ಸಹಾಯಮಾಡಿದರೂ ಅವರ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವುದಿಲ್ಲ, ಹಾಗಾಗಿ ಮಾಲ್ಡೀವ್ಸ್‌ ವಿಚಾರದಲ್ಲೂ ನಮ್ಮ ನಿರ್ಲಿಪ್ತ ಧೋರಣೆಯನ್ನು ಮುಂದುವರಿಸುವುದು ಸೂಕ್ತ ಎಂದರು.

-----------------

Share this article