ಶಾಸಕ ಎಆರ್‌ಕೆ ಗರಂ, ಇಒಗೆ ತರಾಟೆ । ರಾಜ್ಯದಲ್ಲಿ 4ಸಾವಿರ ಪಂಚಾಯ್ತಿಗಳಲ್ಲಿ ಕೂಸಿನ ಮನೆ, ಇದರಿಂದ ತಾಯಂದಿರಿಗೆ ವರದಾಯಕ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಿದ್ದು, 4 ಸಾವಿರ ಪಂಚಾಯಿತಿಗಳಲ್ಲಿ ಕೂಸಿನ ಮನೆ ಯೋಜನೆ ಪ್ರಾರಂಭವಾಗಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಯಲ್ಲಿ 23 ಗ್ರಾಪಂನಲ್ಲಿ ಕೂಸಿನ ಮನೆ ನಿರ್ಮಾಣಕ್ಕೆ ಅವಕಾಶವಾಗಿದೆ. ರಾಜ್ಯ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕೂಲಿ ಕೆಲಸ ಮಾಡುವ ತಾಯಂದಿರ ಮಕ್ಕಳ ಹಿತ ದೃಷ್ಟಿಯಿಂದ ಕೂಸಿನ ಮನೆ ಯೋಜನೆ ಪ್ರಾರಂಭಮಾಡಿರುವುದು ಹೆಮ್ಮೆಯ ಸಂಗತಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು. ತಾಲೂಕಿನ ಕುಂತೂರು ಹಾಗೂ ಟಗರಪುರ ಗ್ರಾಮಗಳಲ್ಲಿ ನಿರ್ಮಿಸಲಾಗಿರುವ ಕೂಸಿನ ಮನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ರಾಜ್ಯದಲ್ಲಿ 4 ಸಾವಿರ ಪಂಚಾಯಿತಿಗಳಲ್ಲಿ ಕೂಸಿನ ಮನೆ ಯೋಜನೆ ಪ್ರಾರಂಭವಾಗಿದೆ. ಜಿಲ್ಲೆಯಲ್ಲಿ 90 ಕೂಸಿನ ಮನೆಗೆ ಅವಕಾಶವಿದೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 23 ಗ್ರಾಪಂನಲ್ಲಿ ಕೂಸಿನ ಮನೆ ನಿರ್ಮಾಣಕ್ಕೆ ಅವಕಾಶವಾಗಿದ್ದು ಗ್ರಾಮೀಣ ಪ್ರದೇಶದಲ್ಲಿರುವ ತಾಯಂದಿರು ನರೇಗಾದಡಿ ಕೂಲಿ ಕೆಲಸಕ್ಕೆ ತೆರಳಬೇಕಾದರೆ ತಮ್ಮ ಸಣ್ಣ ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಿಲ್ಲ. ಈ ಹಿನ್ನಲೆ ಅವರು ಕೂಲಿಗೆ ತೆರಳಿದ ವೇಳೆ ಅವರ ಮಕ್ಕಳನ್ನು ಪೋಷಣೆ ಮಾಡಲು ಕೂಸಿನ ಮನೆಯನ್ನು ಸರ್ಕಾರ ನಿರ್ಮಿಸುತ್ತಿದೆ. 1 ಕೂಸಿನ ಮನೆಗೆ 1 ಲಕ್ಷ ಅನುದಾನ ನೀಡಲಾಗಿದೆ. ತಾಪಂ ವತಿಯಿಂದ 8 ಸಾವಿರ ಹೆಚ್ಚುವರಿ ಅನುದಾನ ನೀಡಲಾಗುತ್ತಿದೆ. ಮಕ್ಕಳನ್ನು ಪೋಷಣೆ ಮಾಡುವುದಕ್ಕೆ ಕೂಸಿನ ಮನೆಯಲ್ಲಿರುವ ಕೇರ್ ಟೇಕರ್‌ಗಳನ್ನು ಸಹ ನಿಯೋಜಿಸಿಕೊಳ್ಳಲಾಗಿದೆ. ಈ ಯೋಜನೆಯನ್ನು ತಾಯಂದಿರು ಸದ್ಬಳಕ್ಕೆ ಮಾಡಿಕೊಳ್ಳಿ, ಈ ಯೋಜನೆ ನಿಜಕ್ಕೂ ಉತ್ತಮ ರೀತಿಯದ್ದು ಆದರೆ ಸದ್ಬಳಕೆಯಾಗಬೇಕಷ್ಟೆ ಎಂದರು.ಶಾಸಕರಿಂದ ಇಒಗೆ ತರಾಟೆ:
ಇದೆ ವೇಳೆ ಕೂಸಿನ ಮನೆ ಉದ್ಘಾಟನೆಗೆ ತೆರಳಿದ ಶಾಸಕರು ಕೂಸಿನ ಮನೆಯಲ್ಲಿ ನೀರಿನ ವ್ಯವಸ್ಥೆಯೇ ಇಲ್ಲ, ಇದನ್ನ ಕಾಟಾಚಾರಕ್ಕೆ ಪ್ರಾರಂಭಿಸಿದಂತಿದೆ ಎಂದು ಎ.ಆರ್. ಕೖಷ್ಣಮೂರ್ತಿ ಗರಂ ಆದರು. ಇದೇ ವೇಳೆ ಅವ್ಯವಸ್ಥೆ ಕಂಡು ಇಒ ಶ್ರೀನಿವಾಸ್ ಅವರನ್ನು ತರಾಟೆ ತೆಗೆದುಕೊಂಡರು. ಕುಂತೂರಿನಲ್ಲಿ ಇದೆ ರೀತಿ ಕೂಸಿನ ಮನೆ ಅವ್ಯವಸ್ಥೆಯಿಂದ ಕೂಡಿದ್ದರೆ ನಿಮಗೆ ಏರು ಧ್ವನಿಯಲ್ಲಿ ನಾನು ಮಾತನಾಡಬೇಕಾಗುತ್ತದೆ, ಮುಂದೆ ಈ ರೀತಿ ಆಗಕೂಡದು ಎಂದು ಎಚ್ಚರಿಸಿದರು.ಈ ವೇಳೆ ಟಗರಪುರ ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ, ಉಪಾಧ್ಯಕ್ಷೆ ರಾಜಮ್ಮ, ಇಒ ಶ್ರೀನಿವಾಸ್, ಗೋಪಾಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ. ತೋಟೇಶ್ ಉಪಸ್ಥಿತರಿದ್ದರು.