ಸರಯೂ ನದಿಯಲ್ಲಿ ಸ್ನಾನ ಮಾಡಿ ಮರಳು ತಂದೆವು

KannadaprabhaNewsNetwork | Published : Jan 21, 2024 1:34 AM

ಸಾರಾಂಶ

1992ರ ಡಿಸೆಂಬರ್‌ನಲ್ಲಿ ಅಯೋಧ್ಯೆಯಲ್ಲಿ ನಡೆದ ಕರಸೇವೆಯಲ್ಲಿ ಭಾಗವಹಿಸಿದ್ದ ಹರಪನಹಳ್ಳಿಯ 13 ಕರಸೇವಕರು ತಮ್ಮ ಅನುಭವಗಳನ್ನು ರಾಮಮಂದರಿ ಉದ್ಘಾಟನೆ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ.

ಬಿ. ರಾಮಪ್ರಸಾದ್‌ ಗಾಂಧಿ

ಹರಪನಹಳ್ಳಿ: ಅಯೋಧ್ಯೆಯ ಸರಯೂ ನದಿಯಲ್ಲಿ ಸ್ನಾನ ಮಾಡಿ ಉಸುಕು ತಂದು ಈಗ ಅಲ್ಲಿ ಉದ್ಘಾಟನೆಗೊಳ್ಳಲಿರುವ ರಾಮಮಂದಿರ ಬಳಿ ಹಾಕಿದ್ದು ನೆನೆಸಿಕೊಂಡರೆ ಸಾರ್ಥಕ ಪಯಣವೆನಿಸಿದೆ.

ಇದು 1992ರ ಡಿಸೆಂಬರ್‌ನಲ್ಲಿ ಕರಸೇವೆಗಾಗಿ ಹರಪನಹಳ್ಳಿಯಿಂದ ತೆರಳಿದ ಕರಸೇವಕನ ಧನ್ಯತೆಯ ಮಾತು.1992ರ ಡಿಸೆಂಬರ್‌ 6ರಂದು ಅಯೋಧ್ಯೆಯಲ್ಲಿ ಕರಸೇವೆ ನಿಗದಿಯಾಗಿತ್ತು. ಆ ಕರಸೇವೆಯಲ್ಲಿ ಪಾಲ್ಗೊಳ್ಳಲು ಹರಪನಹಳ್ಳಿಯಿಂದ ಸುರೇಂದ್ರ ಮಂಚಾಲಿ, ಪಶುಪತಿ ಗೌಳಿ, ಸಿದ್ಧಾರೂಢ, ಹೋಟೆಲ್‌ ಜಯಣ್ಣ, ಶೆಟ್ಟರ ಕೃಷ್ಣಮೂರ್ತಿ, ನಿರಂಜನ, ಶ್ರೀಕಾಂತ, ಮಲ್ಲಿಕಾರ್ಜುನ ಪಾಟೀಲ್, ಯರಿಸ್ವಾಮಿ ರೆಡ್ಡಿ, ಎಸ್‌.ಆರ್‌. ಸುಬ್ಬಣ್ಣ, ಮಾಡ್ಲಗೇರಿ ಕೊಟ್ರೇಶ, ಮಹದೇವಜ್ಜ, ಪ್ರಸನ್ನಾಚಾರ ಹೀಗೆ 13 ಕರಸೇವಕರು ನ. 29, 1992ರಂದು ಅಯೋಧ್ಯೆಗೆ ಬಳ್ಳಾರಿಯಿಂದ ಗುಂತಕಲ್‌ ಮೂಲಕ ಪಯಣ ಬೆಳೆಸಿದರು.

ಡಿ. 1ಕ್ಕೆ ಅಯೋಧ್ಯೆಗೆ ತಲುಪಿದೆವು. ರಾಜ್ಯವಾರು ಹಾಕಿದ್ದ ಟೆಂಟಲ್ಲಿ ವಾಸ್ತವ್ಯ ಹೂಡಿದೆವು. ಡಿ. 6ರ ವರೆಗೆ ಅಯೋಧ್ಯೆಯಲ್ಲಿ ನಡೆಯುವ ಭಾಷಣ, ಪ್ರವಚನ ಮುಂತಾದ ಕಾರ್ಯಗಳಲ್ಲಿ ಪಾಲ್ಗೊಂಡೆವು. ಡಿ. 6ರಂದು ನಮಗೆ ವಹಿಸಿದ ಕಾರ್ಯದಂತೆ ಸರಯೂ ನದಿಯಲ್ಲಿ ಸ್ನಾನ ಮಾಡಿ ಅಂದಿನ ವಿವಾದಿತ ಸ್ಥಳಕ್ಕೆ ನದಿಯ ಮರಳು ತಂದು ಹಾಕಿದೆವು.

ಅಂದು ಕರಸೇವೆ ಮುಗಿಸಿ ಡಿ. 7ರಂದು ವಾಪಸ್ ಪ್ರಯಾಣ ಬೆಳೆಸಿ ಡಿ. 9ರಂದು ಹರಪನಹಳ್ಳಿಗೆ ಆಗಮಿಸಿದೆವು. ಅಂದಿನ ಆ ಕೆಲಸವನ್ನು ಇಂದು ಸ್ಮರಿಸಿಕೊಳ್ಳುತ್ತಾ ಜ. 22ರ ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರ ಉದ್ಘಾಟನೆಯ ಸಮಯಕ್ಕಾಗಿ ಎದುರು ನೋಡುತ್ತಿದ್ದೇವೆ ಎನ್ನುತ್ತಾರೆ ಈ ಮಹನೀಯರು.ಅಂದು ಅಯೋಧ್ಯೆಯಲ್ಲಿ ಕರಸೇವೆ ಮಾಡಿದ್ದಕ್ಕೂ ಸಾರ್ಥಕ ಎನಿಸುತ್ತದೆ. ನಮ್ಮದು ಸಾರ್ಥಕ ಪಯಣ. ಹೆಮ್ಮೆ ಇದೆ. ಫೆಬ್ರವರಿ ಒಳಗೆ ಕರ್ನಾಟಕದವರಿಗೆ ಬರಲಿಕ್ಕೆ ಹೇಳಿದ್ದಾರೆ. ನಾವು ಅಯೋಧ್ಯೆಗೆ ಹೋಗಿ ಶ್ರೀರಾಮನ ದರ್ಶನ ಪಡೆಯುತ್ತೇವೆ ಎಂದು ಹರಪನಹಳ್ಳಿಯ ಕರಸೇವಕ ಪಶುಪತಿ ಗೌಳಿ ಹೇಳಿದರು.

Share this article