ವಿಜಯಪುರದಲ್ಲಿ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ನಡೆಯಲಿ

KannadaprabhaNewsNetwork |  
Published : May 19, 2026, 04:00 AM IST
ರಾಷ್ಟ್ರ ಮಟ್ಟದ ಬ್ಯಾಡ್ಮಿಂಟನ್ ಆಯೋಜಿಸಿದರೆ ಸಹಕಾರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ | Kannada Prabha

ಸಾರಾಂಶ

ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟವನ್ನು ವಿಜಯಪುರದಲ್ಲಿ ಆಯೋಜಿಸುವ ಮೂಲಕ ಈ ಬೃಹತ್ ಕ್ರೀಡಾಕೂಟವು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಯೋಜನೆಗೊಂಡಿದ್ದು, ವಿಜಯಪುರ ನಗರಕ್ಕೆ ಹೊಸ ಔಟ್‌ಲುಕ್ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಶನ್ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟವನ್ನು ವಿಜಯಪುರದಲ್ಲಿ ಆಯೋಜಿಸುವ ಮೂಲಕ ಈ ಬೃಹತ್ ಕ್ರೀಡಾಕೂಟವು ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಆಯೋಜನೆಗೊಂಡಿದ್ದು, ವಿಜಯಪುರ ನಗರಕ್ಕೆ ಹೊಸ ಔಟ್‌ಲುಕ್ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಭಾನುವಾರ ನಗರದಲ್ಲಿ ಆರಂಭವಾದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜ್ಯಮಟ್ಟದ ಪಂದ್ಯಾಟಗಳನ್ನು ಆಯೋಜಿಸುವುದರಿಂದ ವಿಜಯಪುರ ಜಿಲ್ಲೆಯ ಕೀರ್ತಿ ಹೆಚ್ಚುತ್ತದೆ. ಇದರಿಂದ ವಿಜಯಪುರ ನಗರಕ್ಕೆ ಹೊಸ ಔಟಲುಕ್ ಲಭ್ಯವಾಗಲಿದೆ. ಜೊತೆಗೆ ರಾಷ್ಟಮಟ್ಟದಲ್ಲಿನ ಕ್ರೀಡಾಕ್ಷೇತ್ರದಲ್ಲಿ ಪ್ರೋತ್ಸಾಹ ಸಿಗುತ್ತದೆ. ಯುವಪ್ರತಿಭೆಗಳು ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು. ಮುಂದೊಂದು ದಿನ ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ವಿಜಯಪುರದಲ್ಲಿ ನಡೆಯಲಿ ಎಂದರು.ಈ ಹಿಂದೆ ವಿಜಯಪುರ ಜಿಲ್ಲೆ ಹಿಂದುಳಿದ ಹಾಗೂ ಬರಗಾಲ ಜಿಲ್ಲೆ ಎಂಬ ಕುಖ್ಯಾತಿಗೊಳಗಾಗಿತ್ತು. ಈಗ ವಿಜಯಪುರ ಬದಲಾಗಿದೆ. ಜಿಲ್ಲೆಯಲ್ಲಿ ನೀರಾವರಿಯಾಗಿದ್ದರಿಂದ ಭೂಮಿ ಹಚ್ಚ ಹಸಿರಿನಿಂದ ನಳನಳಿಸುತ್ತಿದೆ. ಇಂಥ ಜಿಲ್ಲೆಯಲ್ಲಿ ಈಗ ಕ್ರೀಡಾ ಚಟುವಟಿಕೆಗಳು ಗರಿಗೆದರಿವೆ. ಕ್ರೀಡಾ ಚಟುವಟಿಕೆಗಳು ಹೊಸ ಸ್ವರೂಪ ಸಿಕ್ಕಂತಾಗಿದೆ. ಹೊಸ ಔಟ್‌ಲುಕ್ ಸಿಕ್ಕಂತಾಗಿದೆ ಎಂದು ಕ್ರೀಡಾಕೂಟ ಆಯೋಜಿಸಿದ ಅಸೋಸಿಯೇಶನ್‌ನವರನ್ನು ಬಣ್ಣಿಸಿದರು. ಇಂತಹ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿ ಜಿಲ್ಲೆಗೆ ಹೆಮ್ಮೆ ಹಾಗೂ ಕೀರ್ತಿಯನ್ನು ತಂದಿದೆ. ವಿಜಯಪುರ ಜಿಲ್ಲೆಯು ಸೈಕ್ಲಿಂಗ್ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಈಗಾಗಲೇ ಹೆಸರುವಾಸಿಯಾಗಿದೆ. ಈ ರೀತಿಯ ಪಂದ್ಯಾಟಗಳನ್ನು ಆಯೋಜಿಸುವುದರಿಂದ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟದಲ್ಲಿ ಮಹತ್ವ ಸಿಗಲಿದೆ. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡುತ್ತೇವೆ ಎಂದರು. ಮಾಜಿ ಸಿಎಂ ಎಸ್.ಬಂಗಾರಪ್ಪ ಅವರು ಬ್ಯಾಡ್ಮಿಂಟನ್ ಆಟಗಾರರಾಗಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ಅದೇ ಮೊದಲ ಬಾರಿಗೆ ಶಾಸಕನಾಗಿದ್ದೆ. ಅವರು ಬ್ಯಾಡ್ಮಿಂಟನ್‌ಗೆ ಹೆಚ್ಚು ಒತ್ತು ನೀಡಿದ್ದರು. ಈಗ ಅವರ ಪುತ್ರ ಕುಮಾರ ಬಂಗಾರಪ್ಪನವರು ಯುವ ತಂಡ ಕಟ್ಟಿಕೊಂಡು ಬ್ಯಾಡ್ಮಿಂಟನ್ ಆಟೋಟಗಳನ್ನು ಮುನ್ನಡೆಸುತ್ತಿರುವುದನ್ನು ಸಚಿವರು ಪ್ರಶಂಸಿಸಿದರು. ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷರು ಹಾಗೂ ಮಾಜಿ ಸಚಿವ ಕುಮಾರ ಬಂಗಾರಪ್ಪ ಮಾತನಾಡಿ, ವಿಜಯಪುರದಲ್ಲಿ ಮೊದಲ ಬಾರಿಗೆ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟವನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಿದ್ದೇವೆ. ಇಲ್ಲಿ ನಡೆದಿರುವ ಪಂದ್ಯಾಟಕ್ಕೆ ಬಿಎಲ್ ಡಿಇ ಸಂಸ್ಥೆ, ಜಿಲ್ಲಾಡಳಿತ ಸಹಕಾರ ನೀಡಿದೆ. ಶಾಸಕರು ಹಾಗೂ ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಇದರಿಂದಾಗಿ ನಗರದಲ್ಲಿ ಆಯೋಜಿಸಿರುವ ಬ್ಯಾಡ್ಮಿಂಟನ್ ಪಂದ್ಯಾಟ ಯಶಸ್ವಿಯಾಗುವ ವಿಶ್ವಾಸವಿದೆ. ಜೊತೆಗೆ ಇಲ್ಲಿ ಕ್ರೀಡೆಗೆ ಮಹತ್ತರ ಅವಕಾಶವಿದೆ ಎಂಬುವುದು ಸಾಬೀತಾಗಿದೆ ಎಂದರು.ಶಾಸಕ ವಿಠಲ ಕಟಕದೊಂಡ ಮಾತನಾಡಿ, ಈ ಪಂದ್ಯಾವಳಿಗಾಗಿ ರಾಜ್ಯದ ವಿವಿಧ ಮೂಲೆಗಳಿಂದ ಸುಮಾರು 2 ಸಾವಿರ ಕ್ರೀಡಾಪಟುಗಳು ಜಿಲ್ಲೆಗೆ ಆಗಮಿಸಿದ್ದಾರೆ. ಆ ಮೂಲಕ ಕ್ರೀಡಾಕ್ಷೇತ್ರದಲ್ಲಿ ಜಿಲ್ಲೆ ಗುರುತಿಸಿಕೊಳ್ಳುತ್ತಿದೆ. ದ್ರಾಕ್ಷಿಯ ಸಿಹಿಗೆ ಹೆಸರಾದ ನಮ್ಮ ಜಿಲ್ಲೆಯು ಈಗ ಕ್ರೀಡಾಕ್ಷೇತ್ರದಲ್ಲೂ ಮುಂಚೂಣಿಗೆ ಬರುತ್ತಿರುವುದು ಸಂತಸದ ಸಂಗತಿ. ಈ ಪಂದ್ಯಾವಳಿ ಯಶಸ್ವಿಯಾಗಲಿ ಎಂದರು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಯಾವುದೇ ಆಟೋಟ ಹಾಗೂ ಕಾರ್ಯಕ್ರಮಗಳಿಗೆ ನಮ್ಮ ಜಿಲ್ಲೆಯ ಆತಿಥ್ಯ ನೀಡಲಿದೆ. ಅತಿಥಿಗಳು ಬಂದರೆ, ಊಟೋಪಚಾರ ಹಾಗೂ ಸತ್ಕಾರಕ್ಕೆ ನಮ್ಮ ಜಿಲ್ಲೆ ಹೆಸರುವಾಸಿಯಾಗಿದೆ. ಕುಮಾರ ಬಂಗಾರಪ್ಪನವರು ಬ್ಯಾಡ್ಮಿಂಟನ್ ಪಂದ್ಯಾಟ ಆಯೋಜಿಸಿದ್ದಾರೆ. ಅವರಿಗೂ ನಾವು ಸಂಪೂರ್ಣ ಸಹಕಾರ ನೀಡುತ್ತೇವೆ. ವಿವಿಧ ಕ್ರೀಡಾಕೂಟಗಳಲ್ಲಿ ವಿಜಯಪುರ ಜಿಲ್ಲೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದೆ. ಭವಿಷ್ಯದ ದಿನಗಳಲ್ಲೂ ಯಾವುದೇ ಕ್ರೀಡೆ ನಡೆದರೂ ಸಹಕಾರ ನೀಡಲಾಗುವುದು ಎಂದರು.ಕಾರ್ಯಕ್ರಮದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಪಾಲಿಕೆ ಮೇಯರ್‌ ಮಡಿವಾಳಪ್ಪ ಕರಡಿ, ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ಹಕಾಧಿಕಾರಿ ರಿಷಿ ಆನಂದ, ಕ್ರೀಡಾಧಿಕಾರಿ ರಾಜಶೇಖರ ದೈವಾಡಿ, ಕೆಎಂಎಫ್ ಅಧ್ಯಕ್ಷ ಲಿಂಗರಾಜ ಪಾಟೀಲ, ಬಿಎಲ್‌ಡಿಇ ಉಪಕುಲಪತಿ ಡಾ.ಅರುಣ ಇನಾಮದಾರ, ಡಾ.ಮಹಾಂತೇಶ ಬಿರಾದಾರ, ಸೈಕ್ಲಿಂಗ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ರಾಜು ಬಿರಾದಾರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳು ಕ್ರೀಡಾಸಕ್ತರು ಪಾಲ್ಗೊಂಡಿದ್ದರು.ಆರಂಭವಾಗಿರುವ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಪಂದ್ಯಾಟ ಯಶಸ್ವಿಯಾಗಲಿ. ಮುಂಬರುವ ದಿನಗಳಲ್ಲಿ ವಿಜಯಪುರದಲ್ಲಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಕೂಟ ಆಯೋಜಿಸಿದರೇ ನಾನು ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಅಧಿಕಾರಿಗಳು ಸಕಲ ಸಹಕಾರ ನೀಡುತ್ತೇವೆ.

-ಎಂ.ಬಿ.ಪಾಟೀಲ,

ಜಿಲ್ಲಾ ಉಸ್ತುವಾರಿ ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾತಿ, ಧರ್ಮಗಳ ಮಧ್ಯೆ ಕಿಚ್ಚು ಹಚ್ಚುತ್ತಿರುವ ಕಾಂಗ್ರೆಸ್‌ ಸರ್ಕಾರ
ಬೈಲಹೊಂಗಲದಲ್ಲಿ ಧಾರಾಕಾರ ಮಳೆ: ತುಂಬಿ ಹರಿದ ಹಳ್ಳ