ಜು. 12ರಂದು ಬ್ಯಾಡಗಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್: ನ್ಯಾಯಾಧೀಶ ಅಮೋಲ್ ಹಿರೇಕುಡೆ

KannadaprabhaNewsNetwork |  
Published : Jun 19, 2025, 11:49 PM IST
ಮ | Kannada Prabha

ಸಾರಾಂಶ

ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಕಕ್ಷಿದಾರರು ಪಾವತಿಸಿದ ಶುಲ್ಕ ಮರಳಿಸಲಾಗುವುದು.

ಬ್ಯಾಡಗಿ: ತಾಲೂಕು ಕಾನೂನುಗಳ ಸೇವೆಗಳ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಜು. 12ರಂದು ನ್ಯಾಯಾಲಯದ ಆವರಣದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮ ಆಯೋಜಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಅಮೋಲ್ ಹಿರೇಕುಡೆ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ ಕೆಲ ಸಣ್ಣಪುಟ್ಟ ಸಮಸ್ಯೆಗಳಿಗೆ ಸಾರ್ವಜನಿಕರ ಸಮಯ ಹಾಗೂ ಹಣ ವ್ಯರ್ಥವಾಗುವ ಜತೆಗೆ ಮಾನಸಿಕವಾಗಿ ತೊಂದರೆಗೆ ಸಿಲುಕುತ್ತಿದ್ದಾರೆ. ಇಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ನಿಟ್ಟಿನಲ್ಲಿ ಲೋಕ ಅದಾಲತ್ ಉತ್ತಮ ವೇದಿಕೆಯಾಗಿದೆ ಎಂದರು.

ಅಪಘಾತ ಪ್ರಕರಣ, ಮನೆ, ಇತರೆ ವ್ಯಾಜ್ಯಗಳು, ವೈವಾಹಿಕ ಹಾಗೂ ಕೌಟುಂಬಿಕ ವ್ಯಾಜ್ಯ, ಚೆಕ್‌ ಬೌನ್ಸ್ ಪ್ರಕರಣ, ಬ್ಯಾಂಕ್‌ಗಳಲ್ಲಿ ಕಟಬಾಕಿದಾರರ(ಎನ್‌ಪಿ) ಹಣ ವಸೂಲಾತಿ, ಭೂಸ್ವಾಧೀನ ಪ್ರಕರಣ ಸಂಬಂಧಿಸಿದಂತೆ ಇಲ್ಲಿ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಕಕ್ಷಿದಾರರಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸಲು, ಉಭಯ ಪಕ್ಷಗಾರರು ರಾಜಿ ಮಾಡಿಕೊಳ್ಳಲು ತಾಲೂಕು ಉಚಿತ ಕಾನೂನು ಸಮಿತಿ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಇತ್ಯರ್ಥ ಪಡಿಸಲಿದೆ ಎಂದರು.

ಮೇಲ್ಮನವಿಗೆ ಅವಕಾಶವಿಲ್ಲ: ರಾಜೀ ಸಂಧಾನದ ಮೂಲಕ ಪ್ರಕರಣ ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಕಕ್ಷಿದಾರರು ಪಾವತಿಸಿದ ಶುಲ್ಕ ಮರಳಿಸಲಾಗುವುದು. ಲೋಕ ಅದಾಲತ್‌ನಲ್ಲಿ ರಾಜಿ ಮಾಡಿಕೊಂಡ ಪ್ರಕರಣಗಳಿಗೆ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ ಎಂದರು. ರಿಯಾಯಿತಿ ಪಡೆದುಕೊಳ್ಳಿ: ಕಿರಿಯಶ್ರೇಣಿ ನ್ಯಾಯಾಧೀಶ ಸುರೇಶ ವಗ್ಗನವರ ಮಾತನಾಡಿ, ಸಾರ್ವಜನಿಕರು ಲೋಕ ಅದಾಲತ್‌ನಲ್ಲಿ ಪಾಲ್ಗೊಂಡು ನ್ಯಾಯ ಪಡೆದುಕೊಳ್ಳಲು ಮುಂದಾಗಬೇಕು. ರೈತರ ಕಟಬಾಕಿ ಸಾಲ ಜಮೆ ಮಾಡಲಾಗದೇ ದುಸ್ಥಿತಿಯಲ್ಲಿ ಸಿಲುಕಿರುತ್ತಾರೆ. ಇಂಥವರು ಬ್ಯಾಂಕ್ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ತಾವು ಪಡೆದ ಸಾಲದ ಮೂಲ ಮೊತ್ತದಲ್ಲೇ ರಿಯಾಯಿತಿ ಪಡೆದು ಪಡೆದಂತಹ ಸಾಲವನ್ನು ತೀರುವಳಿ ಮಾಡಿಕೊಳ್ಳಲು ಅನುಕೂಲ ಕಲ್ಪಿಸಲಾಗಿದೆ ಎಂದರು.

ಈ ವೇಳೆ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜು ಶಿಡೇನೂರ, ಉಪಾಧ್ಯಕ್ಷ ಜಿ.ಬಿ. ಯಲಗಚ್ಚ, ಕಾರ‍್ಯದರ್ಶಿ ಎಚ್.ಜಿ. ಮುಳಗುಂದ, ಸಹ ಕಾರ‍್ಯದರ್ಶಿ ಮಂಜುನಾಥ ಕುಮ್ಮೂರ, ಮಾಜಿ ಅಧ್ಯಕ್ಷ ಶಂಕರ ಬಾರ್ಕಿ ನ್ಯಾಯವಾದಿಗಳಾದ ಪ್ರಕಾಶ ಬನ್ನಿಹಟ್ಟಿ, ಕೆ.ಎಸ್. ನಾಯ್ಕರ್, ಮಂಜುನಾಥ ಹಂಜಗಿ ಸೇರಿದಂತೆ ಇತರರಿದ್ದರು.

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌