ಸದ್ಯದಲ್ಲೇ ತುಮಕೂರಿನಲ್ಲಿ ನ್ಯಾಷನಲ್ ಓಪನ್ ಚಾಂಪಿಯನ್ ಶಿಪ್ ಅಥ್ಲೆಟಿಕ್ ಕ್ರೀಡಾ ಕೂಟ ನಡೆಯಲಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.
ಕನ್ನಡಪ್ರಭ ವಾರ್ತೆ ತುಮಕೂರುಸದ್ಯದಲ್ಲೇ ತುಮಕೂರಿನಲ್ಲಿ ನ್ಯಾಷನಲ್ ಓಪನ್ ಚಾಂಪಿಯನ್ ಶಿಪ್ ಅಥ್ಲೆಟಿಕ್ ಕ್ರೀಡಾ ಕೂಟ ನಡೆಯಲಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.ಭಾನುವಾರ ನಗರದ ಮಹಾತ್ಮ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ತುಮಕೂರು ದಸರಾ ಕ್ರೀಡಾ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರಿನಲ್ಲಿ ನ್ಯಾಷನಲ್ ಓಪನ್ ಚಾಂಪಿಯನ್‌ಶಿಪ್ ಆಯೋಜನೆ ಮಾಡುವ ಬಗ್ಗೆ ದೆಹಲಿ ಫೆಡರೇಶನ್ ಜತೆ ಈಗಾಗಲೇ ಮಾತುಕತೆ ನಡೆಸಿದ್ದು, ಅದಕ್ಕೆ ಸಹಮತ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಬರುವ ದಿನಗಳಲ್ಲಿ ತುಮಕೂರಿನಲ್ಲಿ ನ್ಯಾಷನಲ್ ಚಾಂಪಿಯನ್‌ಶಿಪ್ ನಡೆಯಲಿದೆ ಎಂದರು.ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದ ಅವರು, 60 ಕೋಟಿ ವೆಚ್ಚದಲ್ಲಿ ಆಧುನಿಕ ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣ ನಿರ್ಮಿಸಲಾಗಿದೆ. ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಫ್ಲಡ್ ಲೈಟ್‌ಗಳ ಅಳವಡಿಕೆ ಹಾಗೂ ಒಳಾಂಗಣ ಕ್ರೀಡಾಂಗಣಕ್ಕೆ 2 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಅಳವಡಿಸಲು ಎಚ್.ಎ.ಎಲ್ ಸಂಸ್ಥೆಯವರು ಒಪ್ಪಿಕೊಂಡಿರುವುದಾಗಿ ತಿಳಿಸಿದರು. ತುಮಕೂರಿನಲ್ಲಿ ನಡೆಯುತ್ತಿರುವ ದಸರಾ ಕ್ರೀಡಾ ಉತ್ಸವವು ಕ್ರೀಡಾ ಕ್ಷೇತ್ರಕ್ಕೆ ದಿಕ್ಸೂಚಿಯಾಗಿದೆ. ಆಧುನಿಕ ಸೌಲಭ್ಯಗಳೊಂದಿಗೆ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು.
ಪ್ರಸ್ತಾವಿಕವಗಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪ್ರಭು, ಅಭಿವೃದ್ಧಿ ಹೊಂದಿರುವ ಅಮೆರಿಕಾ, ಚೀನಾ, ಜಪಾನ್ ಮೊದಲಾದ ರಾಷ್ಟ್ರಗಳು ಕ್ರೀಡೆಗಳಲ್ಲಿ ಮುಂದೆ ಇರುವುದೇ ಅವುಗಳ ಬಲವಾಗಿದೆ. ಕ್ರೀಡೆ ಕೇವಲ ಮನರಂಜನೆ ಅಥವಾ ಸ್ಪರ್ಧೆಯಷ್ಟೇ ಅಲ್ಲ ಅದು ದೇಶಪ್ರೇಮ, ಬಾಂಧವ್ಯ, ಮಾನವೀಯತೆ, ಸಂಸ್ಕಾರ ಮತ್ತು ಪ್ರೀತಿಯನ್ನು ಬೆಳೆಸುವ ಶಕ್ತಿಯಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತುಮಕೂರು ಶಾಸಕ ಜಿ.ಬಿ. ಜ್ಯೋತಿಗಣೇಶ್ ಅಧ್ಯಕ್ಷತೆ ವಹಿಸಿದ್ದರು. ಅಥ್ಲೀಟ್‌ಗಳಾದ ಬಿ.ಸಿ.ಸುರೇಶ್, ಸಹನಾ ಕುಮಾರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಉಪಸ್ಥಿತರಿದ್ದರು.ದಸರಾ ಉತ್ಸವದ ಅಂಗವಾಗಿ ಮ್ಯಾರಥಾನ್ ಕ್ರೀಡೆಯಲ್ಲಿ ವಿಜೇತರಾದ ಕ್ರೀಡಾಪಟುಗಳಿಗೆ ಸನ್ಮಾನಿಸಿ ಪ್ರಶಸ್ತಿ ಹಾಗೂ ನಗದು ಬಹುಮಾನ ವಿತರಿಸಲಾಯಿತು.ನಾಡಕುಸ್ತಿಗೆ ಚಾಲನೆ: ಇದೇ ಸಂದರ್ಭದಲ್ಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಿರ್ಮಿಸಲಾಗಿದ್ದ ಸಾಂಪ್ರದಾಯಿಕ ಮಟ್ಟಿಮಣ್ಣಿನ ಅಖಾಡದಲ್ಲಿ ನಾಡಕುಸ್ತಿಗೆ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು. ಪುರುಷರ ವಿಭಾಗದಲ್ಲಿ ವಿಶಾಲ್-ವಿನೀತ್ ಹಾಗೂ ಮಹಿಳೆಯರ ವಿಭಾಗದಲ್ಲಿ ರಕ್ಷಿತಾ-ವೇದಾವತಿ ಸೆಣಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.