ರಾಂ ಅಜೆಕಾರುಕನ್ನಡಪ್ರಭ ವಾರ್ತೆ ಕಾರ್ಕಳಗ್ರಾಮೀಣಾಭಿವೃದ್ಧಿಯ ರಾಷ್ಟ್ರ ಮಟ್ಟದ ವೇದಿಕೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ಐತಿಹಾಸಿಕ ಸಾಧನೆ ದಾಖಲಿಸಿದೆ. ಕೇಂದ್ರ ಸರ್ಕಾರ ನೀಡುವ ‘ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ–2025’ರ ‘ಬಡತನ ರಹಿತ ಮತ್ತು ವೃದ್ಧಿತ ಜೀವನೋಪಾಯ ಪಂಚಾಯಿತಿ’ ವಿಭಾಗದಲ್ಲಿ ಮುದ್ರಾಡಿ ದೇಶದಲ್ಲೇ ಪ್ರಥಮ ಸ್ಥಾನ ಪಡೆದು ರಾಜ್ಯದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.ಈ ಅಪೂರ್ವ ಸಾಧನೆಗಾಗಿ ಪಂಚಾಯಿತಿಗೆ ಕೇಂದ್ರ ಸರ್ಕಾರದಿಂದ ಒಂದು ಕೋಟಿ ರುಪಾಯಿ ನಗದು ಬಹುಮಾನ ಘೋಷಿಸಲಾಗಿದ್ದು, ಮುದ್ರಾಡಿ ಇಂದು ಭಾರತದ ಮಾದರಿ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ವ್ಯಾಪ್ತಿಗೆ ಬರುವ ಮುದ್ರಾಡಿ ಪಂಚಾಯಿತಿ ಒಟ್ಟು 1,671 ಮನೆಗಳನ್ನು ಹೊಂದಿದ್ದು, ಸುಮಾರು 6,102 ಜನರಿಗೆ ಸಮರ್ಪಕ ಸೇವೆ ಒದಗಿಸುತ್ತಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿರುವ 1,046 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಏಳಿಗೆಗಾಗಿ ವಿಶೇಷ ಆದ್ಯತೆ ನೀಡಲಾಗಿದೆ.ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಕೈಗೊಂಡ ಕ್ರಮಗಳು ಈ ಪ್ರಶಸ್ತಿಗೆ ಪೂರಕವಾಗಿವೆ. ಮುಖ್ಯವಾಗಿ ಕೃಷಿ ಮತ್ತು ತೋಟಗಾರಿಕೆ ಆಧಾರಿತ ಗ್ರಾಮೀಣ ಆರ್ಥಿಕತೆಯನ್ನು ಹೊಂದಿರುವ ಈ ಪಂಚಾಯಿತಿ, ಕಳೆದ ಕೆಲವು ವರ್ಷಗಳಿಂದ ಗ್ರಾಮೀಣ ಜೀವನಮಟ್ಟ ಸುಧಾರಣೆ, ಬಡತನ ನಿರ್ಮೂಲನೆ ಮತ್ತು ಶಾಶ್ವತ ಉದ್ಯೋಗ ಸೃಷ್ಟಿಯತ್ತ ಸಮಗ್ರ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಜಾರಿಗೊಳಿಸಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವ ಮುದ್ರಾಡಿ ಪಂಚಾಯಿತಿ, ಗ್ರಾಮೀಣ ಕುಟುಂಬಗಳಿಗೆ ನಿರಂತರ ಉದ್ಯೋಗ ಭದ್ರತೆ ಒದಗಿಸುವುದರ ಜೊತೆಗೆ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗೂ ಯೋಜನೆಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡಿದೆ. ಸಾಮಾಜಿಕ ಭದ್ರತಾ ಯೋಜನೆಗಳ ಶೇ.100ರಷ್ಟು ವ್ಯಾಪ್ತಿ ಸಾಧಿಸಿರುವುದು ಇಲ್ಲಿನ ಮತ್ತೊಂದು ಮೈಲಿಗಲ್ಲು. ವೃದ್ಧಾಪ್ಯ ವೇತನ, ವಿಧವಾ ವೇತನ ಹಾಗೂ ಅಂಗವಿಕಲರ ನೆರವು ಸೇರಿದಂತೆ ಸರ್ಕಾರದ ಎಲ್ಲಾ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ಪಾರದರ್ಶಕವಾಗಿ ತಲುಪಿಸಲಾಗಿದೆ.
ಪಂಚಾಯತಿಗಳ ಅಭಿವೃದ್ಧಿಯ ದೃಷ್ಟಿಕೋನ, ಸಿಬ್ಬಂದಿಗಳ ಕಾರ್ಯಕ್ಷಮತೆ ಹಾಗೂ ಎಲ್ಲರ ಸಹಕಾರದಿಂದ ಈ ಅಭಿವೃದ್ಧಿ ಸಾಧ್ಯವಾಗಿರುವುದು ಹೆಮ್ಮೆಯ ಸಂಗತಿಯಾಗಿದೆ.-ವಿ ಸುನೀಲ್ ಕುಮಾರ್, ಶಾಸಕರು ಕಾರ್ಕಳಬಡತನ ನಿರ್ಮೂಲನೆ, ಮಹಿಳಾ ಸಬಲೀಕರಣ, ಶಾಶ್ವತ ಉದ್ಯೋಗ ಸೃಷ್ಟಿ ಹಾಗೂ ಸಾಮಾಜಿಕ ಭದ್ರತೆಯನ್ನು ಸಮಗ್ರವಾಗಿ ಜಾರಿಗೊಳಿಸಿದ ಮುದ್ರಾಡಿ ಪಂಚಾಯಿತಿ, ಗ್ರಾಮೀಣಾಭಿವೃದ್ಧಿಯಲ್ಲಿ ದೇಶಕ್ಕೆ ಮಾದರಿಯಾಗಿ ಹೊರಹೊಮ್ಮಿದೆ.-ಸುಭಾಸ್, ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುದ್ರಾಡಿ