ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಗ್ರಾಮೀಣ ಜನರ ಉನ್ನತಿಗೆ ಗ್ರಾಮೀಣ ಉದ್ಯಮಶೀಲತೆ ಮತ್ತು ಅದರ ಅಭಿವೃದ್ಧಿ ಪ್ರಸ್ತುತ ಅತ್ಯಗತ್ಯ ಎಂದು ಉಜಿರೆಯ ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಅಭಿಪ್ರಾಯಪಟ್ಟಿದ್ದಾರೆ.ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಶುಕ್ರವಾರ ಅರ್ಥಶಾಸ್ತ್ರ ಹಾಗೂ ಗ್ರಾಮೀಣ ಅಭಿವೃದ್ಧಿ ವಿಭಾಗದ ವತಿಯಿಂದ ಆಯೋಜಿಸಿದ ‘ಪ್ರವರ್ಧಿತ ಆರ್ಥಿಕತೆಯಲ್ಲಿ ಗ್ರಾಮೀಣ ಉದ್ಯಮಶೀಲತೆಯ ಪಾತ್ರ’ ಕುರಿತ ಎರಡು ದಿನಗಳ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಗಾಂಧೀಜಿ ಹೇಳಿದಂತೆ ಹಳ್ಳಿಗಳ ಉದ್ಧಾರದಿಂದ ದೇಶದ ಪ್ರಗತಿ ಸಾಧ್ಯ. ದೇಶದ 60-70 ಪ್ರತಿಶತ ಜನಸಂಖ್ಯೆ ಗ್ರಾಮೀಣ ಪ್ರದೇಶದಲ್ಲಿದೆ. ಆದರೆ ಗ್ರಾಮೀಣರು ಬಡತನ, ನಿರುದ್ಯೋಗ, ಪ್ರತಿಭೆಗಳ ವಲಸೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಉದ್ಯಮಶೀಲತೆ ಉತ್ತಮ ಪರಿಹಾರವಾಗಬಲ್ಲದು ಎಂದರು.ಪ್ರಸ್ತುತ ಗ್ರಾಮೀಣ ಉದ್ಯಮಶೀಲತೆಗೆ ಸವಾಲುಗಳ ಹೊರತಾಗಿಯೂ ಹೇರಳ ಅವಕಾಶವಿದೆ. ನೈಸರ್ಗಿಕ ಸಂಪನ್ಮೂಲ, ಗ್ರಾಮೀಣ ಸಂಪನ್ಮೂಲ, ಸಾಂಸ್ಕೃತಿಕ ಸಂಪನ್ಮೂಲ ಇತ್ಯಾದಿಗಳ ಸಮರ್ಪಕ ಬಳಕೆಯಿಂದ ಗ್ರಾಮೀಣ ಉದ್ಯಮಶೀಲತೆಯನ್ನು ಯಶಸ್ವಿಯಾಗಿಸಬಹುದು ಎಂದರು.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕರ್ನಾಟಕದ ಓಂಬಡ್ಸ್ಮನ್ ಡಾ. ಬಾಲು ಕೆಂಚಪ್ಪ ಮಾತನಾಡಿ, ಗ್ರಾಮೀಣ ಉದ್ಯಮಶೀಲತೆಗೆ ಸುದೃಢ ಅಂತರ್ಜಾಲ ವ್ಯವಸ್ಥೆ ಅಗತ್ಯ. ಮಾರುಕಟ್ಟೆ ಪ್ರವೇಶ, ಹಣಕಾಸು ಕೂಡ ಮುಖ್ಯ ಸವಾಲುಗಳಾಗಿವೆ. ಗ್ರಾಮೀಣ ಉದ್ಯಮಶೀಲತೆಗೆ ಇರುವ ಸರ್ಕಾರದ ಬೆಂಬಲ ಯೋಜನೆಗಳನ್ನು ಜನರಿಗೆ ತಲುಪಿಸಲು ರುಡ್ ಸೆಟ್ ನಂತಹ ಎನ್‌ಜಿಒಗಳು ಕೂಡಾ ಹೆಚ್ಚಬೇಕು ಎಂದರು.ಭಾರತದಲ್ಲಿ ಯುಪಿಐ ವ್ಯವಸ್ಥೆ ಉತ್ತಮವಾಗಿದೆ. ಜಾಗತಿಕ ಡಿಜಿಟಲ್ ವ್ಯವಹಾರದ 50 ಪ್ರತಿಶತ ವ್ಯವಹಾರಗಳು ಭಾರತದಲ್ಲಿ ನಡೆಯುತ್ತಿದೆ. ವಿದೇಶಗಳು ಕೂಡ ಈ ನಿಟ್ಟಿನಲ್ಲಿ ಹಿಂದಿವೆ. ಆದರೆ ಡಿಜಿಟಲ್ ವ್ಯವಹಾರದಲ್ಲಿ ಗ್ರಾಮೀಣರ ಒಳಗೊಳ್ಳುವಿಕೆ ಇನ್ನಷ್ಟು ಸಮರ್ಪಕವಾಗಬೇಕು ಎಂದರು.ಉದ್ಯಮಿ ಶಶಿಧರ ಶೆಟ್ಟಿ ಬರೋಡ ಮಾತನಾದರು.
ಸಂಪನ್ಮೂಲ ವ್ಯಕ್ತಿ, ಆಸ್ಟ್ರೇಲಿಯಾದ ದಿ ಆಸ್ಟ್ರೇಲಿಯನ್ ನ್ಯಾಷನಲ್ ಯುನಿವರ್ಸಿಟಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಕಾಳಿಯಪ್ಪ ಕಾಳಿರಾಜನ್, ಗ್ರಾಮೀಣ ಉದ್ಯಮಶೀಲತೆಯು ಬಡತನ, ಹಸಿವು ನಿವಾರಿಸುತ್ತದೆ. ಗ್ರಾಮೀಣ ಪ್ರದೇಶಕ್ಕೆ ಗ್ರಾಮೀಣ ಉದ್ಯಮಶೀಲತೆ ಅಗತ್ಯ ಎಂದರು.ಪ್ರಾಚಾರ್ಯ ಡಾ. ಬಿ.ಎ. ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ವಿಚಾರ ಸಂಕಿರಣದ ಮುಖ್ಯ ಸಲಹೆಗಾರ, ರಾಜ್ಯ ಯೋಜನಾ ಮಂಡಳಿ ಸದಸ್ಯ, ಮಂಗಳೂರು ವಿವಿ ಅರ್ಥಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಜಿ.ವಿ. ಜೋಷಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ. ಮಹೇಶ್ ಕುಮಾರ್ ಶೆಟ್ಟಿ ಎಚ್. ಸ್ವಾಗತಿಸಿದರು. ಅರ್ಥಶಾಸ್ತ್ರ ಮತ್ತು ಗ್ರಾಮೀಣ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಗಣರಾಜ ಕೆ. ವಂದಿಸಿದರು. ಅಶ್ವಿತ್ ಎಚ್.ಆರ್. ಮತ್ತು ಅಶ್ವಿನಿ ಜೈನ್ ಕಾರ್ಯಕ್ರಮ ನಿರೂಪಿಸಿದರು.
ದೇಶದ ವಿವಿಧೆಡೆಯಿಂದ 300ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಿದ್ದರು.