ಸಂಡೂರು: ಕೇಂದ್ರದ ಬಿಜೆಪಿ ಸರ್ಕಾರದ ದ್ವೇಷ ರಾಜಕಾರಣ ಹಾಗೂ ತನಿಖಾ ಸಂಸ್ಥೆಗಳ ದುರ್ಬಳಕೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಹಾಗೂ ತಾಲೂಕು ಸಮಿತಿಗಳಿಂದ ಪಟ್ಟಣದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಲಾಯಿತು.ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿ ಗ್ರಾಮೀಣ ಬಡಜನರ ಅನುಕೂಲಕ್ಕಾಗಿ ೨೦೦೪ರಲ್ಲಿ ಮನಮೋಹನ್ ಸಿಂಗ್ ಅವರ ಆಡಳಿತಾವಧಿಯಲ್ಲಿ ನರೇಗಾ ಯೋಜನೆಯನ್ನು ಜಾರಿ ಮಾಡಲಾಗಿತ್ತು. ಇದೀಗ ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ಮತ್ತು ಯೋಜನೆಗೆ ಕೇಂದ್ರದ ವಂತಿಗೆಯನ್ನು ಕಡಿಮೆ ಮಾಡುವ ಮೂಲಕ ನಿಧಾನವಾಗಿ ಈ ಯೋಜನೆಯನ್ನು ಸ್ಥಗಿತಗೊಳಿಸುವ ಯೋಜನೆ ಬಿಜೆಪಿಯದ್ದಾಗಿದೆ ಎಂದು ಎಐಸಿಸಿ ಕಾರ್ಯದರ್ಶಿ ಗೋಪಿನಾಥ್ ಪಳನಿಯಪ್ಪ ಕೇಂದ್ರ ಬಿಜೆಪಿ ಕ್ರಮವನ್ನು ಟೀಕಿಸಿದರು.
ಸಂಸದ ಈ. ತುಕಾರಾಂ ಮಾತನಾಡಿ, ದೇಶವನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸಿದ್ದು ಕಾಂಗ್ರೆಸ್ ಸರ್ಕಾರ. ಅಣೆಕಟ್ಟುಗಳನ್ನು ಕಟ್ಟಿ ನೀರಾವರಿಯನ್ನು ಅಭಿವೃದ್ಧಿ ಪಡಿಸಿದ್ದು, ಕೈಗಾರಿಕೆಗಳನ್ನು ಸ್ಥಾಪಿಸಿ ಜನತೆಗೆ ಉದ್ಯೋಗ ನೀಡಿದ್ದು, ಗರೀಬಿ ಹಠಾವೋ, ೨೦ ಅಂಶಗಳ ಕಾರ್ಯಕ್ರಮ, ಆಹಾರ ಭದ್ರತೆ, ಊಳುವವನೇ ಭೂಒಡೆಯ, ಬ್ಯಾಂಕ್ ರಾಷ್ಟ್ರೀಕರಣ, ಆರ್ಥಿಕ ಸುಧಾರಣೆ, ಮನರೇಗಾ, ಮೀಸಲಾತಿ ವ್ಯವಸ್ಥೆ ಮುಂತಾದ ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೆ ತಂದದ್ದು ಕಾಂಗ್ರೆಸ್ ಸರ್ಕಾರ ಎಂದರು.
ಬಿಜೆಪಿ ಮೀಸಲಾತಿ ವಿರೋಧಿ ಪಕ್ಷ:ಬಿಜೆಪಿ ಮೀಸಲಾತಿ ವಿರೋಧಿ ಪಕ್ಷವಾಗಿದೆ. ೩೭೧ಜೆ ತಿದ್ದುಪಡಿಯನ್ನು ಬಿಜೆಪಿ ಮುಖಂಡರು ವಿರೋಧಿಸಿದ್ದರು. ಇಂದು ಇದರ ಫಲವಾಗಿ ಕಲ್ಯಾಣ ಕರ್ನಾಟಕದ ಭಾಗದ ಹಲವರು ಉದ್ಯೋಗ, ಎಂಜಿನಿಯರಿಂಗ್, ಮೆಡಿಕಲ್ ಮುಂತಾದ ಸೀಟುಗಳನ್ನು ಪಡೆಯಲು ಸಾಧ್ಯವಾಗಿದೆ. ಇದಕ್ಕೆ ಕಾರಣರಾದ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಮುಂತಾದ ಮಹನೀಯರನ್ನು ಸ್ಮರಿಸಬೇಕಿದೆ. ಎಲ್ಲಿದೆ ಬಿಜೆಪಿ ಅಚ್ಛೇ ದಿನ್? ಡೀಸೆಲ್, ಪೆಟ್ರೋಲ್, ಗ್ಯಾಸ್ ದರಗಳು ಏರಿಕೆಯಾಗಿವೆ. ಬಿಜೆಪಿ ಇಡಿ, ಸಿಬಿಐ ಮುಂತಾದ ಸ್ಥಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಇಂತಹ ಬೆದರಿಕೆಗೆ ಹೆದರುವುದಿಲ್ಲ. ಜನತೆ ಮುಂಬರುವ ಚುನಾವಣೆಗಳಲ್ಲಿ ಜನ ವಿರೋಧಿ ಬಿಜೆಪಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು.
ಶಾಸಕಿ ಅನ್ನಪೂರ್ಣ ಈ.ತುಕಾರಾಂ ಮಾತನಾಡಿ, ಗ್ರಾಮೀಣ ಬಡಜನತೆಗೆ ಬಹಳ ಅನುಕೂಲವಾಗಿರುವ ಮನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವುದಲ್ಲದೆ, ಅದನ್ನು ವ್ಯವಸ್ಥಿತವಾಗಿ ತೆಗೆದು ಹಾಕುವ ಷಡ್ಯಂತ್ರವನ್ನು ಬಿಜೆಪಿ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್ ಸ್ವಾಮಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶಿವಯೋಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ್‌ಕುಮಾರ್ ಸ್ವಾಗತಿಸಿದರು. ಜಯಣ್ಣ ಕಾರ್ಯಕ್ರಮ ನಿರೂಪಿಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಧಾಕರ್ ಬಳಿಗಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಎಸ್.ಎಲ್ ಸ್ವಾಮಿ, ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಉಪಾಧ್ಯಕ್ಷ ಎಚ್.ಲಕ್ಷ್ಮಣ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಆಶಾಲತಾ ಸೋಮಪ್ಪ, ತಾಲೂಕು ಅಧ್ಯಕ್ಷ ಈರಮ್ಮ, ತೋರಣಗಲ್ಲು, ಕಂಪ್ಲಿ, ಕುರುಗೋಡು, ಶಿರಗುಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಏಕಾಂಬ್ರಪ್ಪ, ಶ್ರೀನಿವಾಸ್, ಚನ್ನಬಸವನಗೌಡ, ಕರಿಬಸಪ್ಪ, ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ಬಸವರಾಜ, ಪುರಸಭೆ ಮಾಜಿ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ನೂರುದ್ದೀನ್, ಮುಖಂಡರಾದ ಪದ್ಮಾ, ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.