ನಿರಂತರ ಮಳೆ, ಗುಡ್ಡ ಕುಸಿತ, ಹೆದ್ದಾರಿಗಳು ಬಂದ್, ಪ್ರಾಕೃತಿಕ ವಿಕೋಪ : ಭಣಗುಡುತ್ತಿರುವ ಪ್ರವಾಸಿ ತಾಣಗಳು

KannadaprabhaNewsNetwork |  
Published : Aug 12, 2024, 01:39 AM ISTUpdated : Aug 12, 2024, 07:55 AM IST
ಕುಸಿದ ಕಾಳಿ ಸೇತುವೆ. ಪ್ರವಾಸಿಗರಲ್ಲಿ ಹೆಚ್ಚಿದ ಭಯ  | Kannada Prabha

ಸಾರಾಂಶ

ನಿರಂತರ ಮಳೆ, ಗುಡ್ಡ ಕುಸಿತದ ಭೀಕರತೆ, ಬಂದ್ ಆದ ಹೆದ್ದಾರಿಗಳು, ಮನೆಗಳ ಕುಸಿತ, ಪ್ರವಾಹ ಹೀಗೆ ಪ್ರಾಕೃತಿಕ ವಿಕೋಪ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿತು.

 ಕಾರವಾರ : ಭಾರಿ ಮಳೆ ಹಾಗೂ ಪ್ರಾಕೃತಿಕ ವಿಕೋಪದಿಂದಾಗಿ ಜಿಲ್ಲೆಗೆ ಬರಲು ಪ್ರವಾಸಿಗರು ಹಿಂದೇಟು ಹಾಕುತ್ತಿದ್ದು, ಕಳೆದ ಬಾರಿಗಿಂತ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಇಳಿತ ಉಂಟಾಗಿದೆ. 

ನಿರಂತರ ಮಳೆ, ಗುಡ್ಡ ಕುಸಿತದ ಭೀಕರತೆ, ಬಂದ್ ಆದ ಹೆದ್ದಾರಿಗಳು, ಮನೆಗಳ ಕುಸಿತ, ಪ್ರವಾಹ ಹೀಗೆ ಪ್ರಾಕೃತಿಕ ವಿಕೋಪ ಇಡೀ ಜಿಲ್ಲೆಯನ್ನು ತಲ್ಲಣಗೊಳಿಸಿತು. ಇದು ನಾಡಿನಾದ್ಯಂತ ಸುದ್ದಿಯಾಗಿ ಜನತೆ ಜಿಲ್ಲೆಗೆ ಬರಲು ಭಯಪಟ್ಟರು. 

ಹೆದ್ದಾರಿಗಳಲ್ಲಿ ಗುಡ್ಡ ಕುಸಿತದಿಂದ ಬಸ್ ಸಂಚಾರದ ಮಾರ್ಗಗಳು ಬದಲಾದವು. ಸುತ್ತು ಬಳಸಿ ಬರಬೇಕಿತ್ತು. ಕಾರಿನಲ್ಲಿ ಬರಬೇಕೆಂದರೂ ಸಾಧ್ಯವಾಗದ ಪರಿಸ್ಥಿತಿ ಉಂಟಾಯಿತು. ತುರ್ತು ಇದ್ದಾಗಲೂ ಹೋಗಲಾಗದೆ ಪ್ರಯಾಣಿಕರು ಪರದಾಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಹೇಗೆ ಬರಬೇಕು. ಅದರಲ್ಲೂ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು 11 ಜನರು ಸಮಾಧಿಯಾದ ಮಾಹಿತಿ ಹರಡುತ್ತಿದ್ದಂತೆ ಹೋಟೆಲ್‌ಗಳನ್ನು ಬುಕ್ ಮಾಡಿದವರೂ ರದ್ದುಗೊಳಿಸಿದರು.

 ಮೊನ್ನೆ ಮೊನ್ನೆ ಕಾಳಿ ಸೇತುವೆಯೂ ಕುಸಿದು ಬಿದ್ದಿದ್ದು ಮತ್ತೆ ಪ್ರವಾಸಿಗರನ್ನು ಬೆಚ್ಚಿಬೀಳಿಸಿದೆ. ಕಡಲತೀರಗಳಲ್ಲಿ ವಿಹಾರಕ್ಕೆ ನಿರ್ಬಂಧ ಹೇರಲಾಯಿತು. ಸಾತೊಡ್ಡಿ, ಮಾಗೋಡ, ವಿಭೂತಿ, ಉಂಚಳ್ಳಿ ಮತ್ತಿತರ ಮಳೆಗಾಲದಲ್ಲಿ ಆಕರ್ಷಣೀಯವಾಗಿದ್ದ ಜಲಪಾತಗಳಿಗೆ ಹೋಗಲು ಸುರಕ್ಷತೆ ಹಿನ್ನೆಲೆಯಲ್ಲಿ ನಿರ್ಬಂಧ ವಿಧಿಸಲಾಯಿತು. 

ಪ್ರವಾಸಿ ತಾಣಗಳು ಬಂದ್ ಆಗಿದ್ದರಿಂದ ಒಂದು ವೇಳೆ ಪ್ರವಾಸಿಗರು ಬಂದರೂ ಹೋಟೆಲ್ ಕೊಠಡಿಯಲ್ಲೇ ಕಾಲ ಕಳೆಯಬೇಕಿತ್ತು. ಇದೂ ಪ್ರವಾಸಿಗರು ಬಾರದೆ ಇರಲು ಕಾರಣವಾಯಿತು.

ಸಾಮಾನ್ಯವಾಗಿ ಜಿಲ್ಲೆಯಲ್ಲಿ ಪ್ರತಿ ಮಳೆಗಾಲದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇರುವುದು ಸಹಜ. ಆದರೆ 2023- 24ನೇ ಸಾಲಿನ ಮಳೆಗಾಲದಲ್ಲಿ ಶೇ. 40ರಷ್ಟು ಪ್ರವಾಸಿಗರು ಆಗಮಿಸಿದ್ದರು. ಏಕೆಂದರೆ ಕಳೆದ ವರ್ಷ ಮಳೆಯೇ ಹೆಚ್ಚು ಇರಲಿಲ್ಲ. ಅದೇ ಈ ಬಾರಿ ಶೇ. 20ರಷ್ಟೂ ಪ್ರವಾಸಿಗರು ಆಗಮಿಸಿಲ್ಲ. ಇನ್ನೂ ಮಳೆ ಮುಂದುವರಿದಿದೆ. 

ಪ್ರವಾಸಿ ತಾಣಗಳು ಭಣಗುಡುತ್ತಿವೆ.

ಇಳಿಮುಖ: ಭಾರಿ ಮಳೆ, ಪ್ರವಾಹ ಇರುವುದರಿಂದ ಸಾಮಾನ್ಯವಾಗಿ ಮಳೆಗಾಲದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ಕೊಡುವುದಿಲ್ಲ. ಜನರ ಸುರಕ್ಷತೆ ನಮಗೆ ಮುಖ್ಯ. ಈ ಬಾರಿ ದೊಡ್ಡ ದುರಂತ ಉಂಟಾಗಿದ್ದರಿಂದ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಯಂತ ಬಿ.ವಿ. ತಿಳಿಸಿದರು.

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ