ಕನ್ನಡಪ್ರಭ ವಾರ್ತೆ ಕೆ.ಆರ್. ನಗರಇತಿಹಾಸ ಓದಿದವರು ಮಾತ್ರ ಭವಿಷ್ಯವನ್ನು ಅರಿತು ಎಲ್ಲವನ್ನು ಸಾಧಿಸಲು ಸಾಧ್ಯ ಎಂದು ಜನಪ್ರಿಯ ಕಥೆಗಾರ, ಸಾಹಿತಿ ವಸುದೇಂದ್ರ ಹೇಳಿದರು.ಪಟ್ಟಣದ ಅರ್ಕನಾಥ ರಸ್ತೆಯಲ್ಲಿರುವ ನವನಗರ ಅರ್ಬನ್ ಬ್ಯಾಂಕ್ ಪ್ರಧಾನ ಕಚೇರಿಯಲ್ಲಿ ಬ್ಯಾಂಕಿನ ಅಧ್ಯಕ್ಷ ಕೆ.ಎನ್. ಪ್ರಸನ್ನ ಮತ್ತು ಅವರ ಸ್ನೇಹಿತರು ತಮಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಕನ್ನಡದಲ್ಲಿ ಬೇರೆ ದೇಶಗಳ ಇತಿಹಾಸ ಅಧ್ಯಯನ ಮಾಡಿ ಪುಸ್ತಕ ಮತ್ತು ಕಥೆ ಬರೆದ ಉದಾಹರಣೆಗಳಿಲ್ಲ, ಆದರೆ ಆ ಪ್ರಯತ್ನಗಳು ನಡೆದರೆ ಭವಿಷ್ಯದ ಪ್ರಜೆಗಳಿಗೆ ನಾವು ವಿಶ್ವದ ವಿಚಾರ ಮತ್ತು ವಿದ್ಯಮಾನಗಳನ್ನು ತಿಳಿಸಲು ಸಾಧ್ಯವಾಗುತ್ತದೆ ಎಂದರು.ಡಾ.ಬಿ.ಆರ್. ಅಂಬೇಡ್ಕರ್ ಅವರು ಹೇಳಿದಂತೆ ಇತಿಹಾಸ ಓದದವನು ಎಂದಿಗೂ ಇತಿಹಾಸ ಸೃಷ್ಟಿಸಲಾರ ಎಂಬ ಮಾತು ಸಾರ್ವಕಾಲಿಕ ಸತ್ಯವಾಗಿದ್ದು, ಇದನ್ನು ಅರಿತು ನಾವೆಲ್ಲರೂ ಬದುಕು ನಡೆಸಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನುಡಿದರು.ನಾನು 5 ದೇಶಗಳ ಇತಿಹಾಸ ಅಧ್ಯಯನ ಮಾಡಿ ರಚಿಸಿರುವ ರೇಷ್ಮೆ ಬಟ್ಟೆ ಎಂಬ ಕಾದಂಬರಿ ಹಲವು ಕೌತುಕ ಮತ್ತು ಸತ್ಯದ ದರ್ಶನ ಮಾಡಲಿದ್ದು, ಇಂತಹ ಕೆಲಸ ಸಾಹಿತ್ಯ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯಬೇಕೆಂದು ಅಭಿಪ್ರಾಯಪಟ್ಟರು.ಮನುಷ್ಯ ಪರಸ್ಪರ ಬೆಸೆದುಕೊಂಡು ಧರ್ಮ ಪ್ರಸಾರವಾಗಿ ಸಂಸ್ಕೃತಿ ಪಸರಿಸಬೇಕಾದರೆ ಸಂಪರ್ಕ ದಾರಿ ಬಹಳ ಪ್ರಮುಖವಾಗಿದ್ದು, ಇದಕ್ಕಾಗಿ ರಾಜ್ಯ ಮತ್ತು ದೇಶಗಳ ನಡುವೆ ಸಂಪರ್ಕ ಮತ್ತು ಸಂಬಂಧ ಅತ್ಯಂತ ಪ್ರಮುಖವಾಗಿರುವುದರಿಂದ ಈ ಕೆಲಸ ಸುಗಮವಾಗಿ ನಡೆದರೆ ದೇಶದ ಅಭಿವೃದ್ಧಿಯು ನಡೆಯುತ್ತಾ ಸಾಗುತ್ತದೆ ಎಂದವರು ಉದಾಹರಣೆ ಸಹಿತ ಮನವಿ ಮಾಡಿದರು.ಎರಡನೇ ಶತಮಾನದಲ್ಲಿ ಕಾಡಿನಲ್ಲಿ ಹೆಚ್ಚಾಗಿದ್ದ ಜನರು ನಾಡಿಗೆ ಬಂದು ಬದುಕು ಕಟ್ಟಿಕೊಂಡಿದ್ದು, ಈಗ ಕಾಡಿನಲ್ಲಿ ಇರುವವರು ಅಲ್ಪಸಂಖ್ಯಾತರಾಗಿದ್ದು, ಅವರ ಬಗ್ಗೆಯೂ ನಾವು ಗಂಬೀರವಾಗಿ ಚಿಂತನೆ ಮಾಡಬೇಕೆಂದು ಸಲಹೆ ನೀಡಿದರು.ಪ್ರಕಾಶಕ ಸೃಷ್ಟಿ ನಾಗೇಶ್ ಮಾತನಾಡಿ, ನಾಡಿನ ಜನಪ್ರಿಯ ಕಥೆಗಾರರಾಗಿರುವ ವಸುದೇಂದ್ರ ಅವರ ಸಾಹಿತ್ಯ ಕೃಷಿ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಲಿದ್ದು ಇಂತಹ ಸಾಹಿತಿ ನಮ್ಮ ನಡುವೆ ಇರುವುದು ಎಲ್ಲರ ಸುಕೃತ ಎಂದರು.ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪುರಸ್ಕಾರಗಳಿಗೆ ಬಾಜನಾರಾಗಿರುವ ಇವರನ್ನು ಇಂದು ನಾವೆಲ್ಲರೂ ಮಾತನಾಡಿಸಿ ಗೌರವಿಸಿರುವುದು ಅತ್ಯಂತ ಸಂತಸದ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.ಸಾಹಿತಿ ಹೆಗ್ಗಂದೂರು ಪ್ರಭಾಕರ್, ಪುರಸಭೆ ಸದಸ್ಯ ಕೆ.ಪಿ. ಪ್ರಭುಶಂಕರ್, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಜಿಲ್ಲಾ ಕಸಾಪ ಕೋಶಾಧ್ಯಕ್ಷ ಜಿ.ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು, ಪ್ರಕಾಶಕ ಸೃಷ್ಟಿ ನಾಗೇಶ್, ತಂಬಾಕು ಮಂಡಳಿ ನಿವೃತ್ತ ಅಧೀಕ್ಷಕ ಕೆ.ಎನ್. ದಿನೇಶ್, ನಬ ನಗರ ಬ್ಯಾಂಕ್ ನಿರ್ದೇಶಕ ಕೇಶವ್, ವಕೀಲ ಶರತ್ ಅರಸ್, ತಾಲೂಕು ಆರೋಗ್ಯ ನಿರೀಕ್ಷಾಣಾಧಿಕಾರಿ ಕೆ.ವಿ. ರಮೇಶ್, ಮುಖಂಡರಾದ ವೇಣುಗೋಪಾಲ್, ನಾಗೇಶ್, ರಂಗನಾಥ್, ಎಸ್.ಆರ್. ಆನಂದ್, ತಾಲೂಕು ಸರ್ಕಾರಿ ನೌಕರರ ಸಂಘದ ನಿರ್ದೇಶಕ. ಎಸ್.ಎಂ. ಗಂಗಾಧರ್ ಮತ್ತಿತರರು ಇದ್ದರು.