ಕನ್ನಡಪ್ರಭ ವಾರ್ತೆ ಹಳಿಯಾಳ
ಕಾರ್ಮೆಲ್ ಶಾಲೆಯಲ್ಲಿ ಗುರುತಿಸಲಾದ ೧೦ ಬ್ಲಾಕ್‌ಗಳಲ್ಲಿ ೨೪೦ ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದರು. ಇದರಲ್ಲಿ ೩ ಬ್ಲಾಕ್‌ಗಳಲ್ಲಿ ತಮಗೆ ಬೇಕಾದ ಕೆಲವು ಮಕ್ಕಳಿಗೆ ಶಿಕ್ಷಕ ನಕಲು ಮಾಡಲು ಅವಕಾಶ ನೀಡಿದ್ದಾನೆಂಬ ದೂರು ಪರೀಕ್ಷೆ ಬರೆದ ವಿದ್ಯಾರ್ಥಿಗಳಿಂದ ಕೇಳಿಬಂದವು. ಅತಿಥಿ ಶಿಕ್ಷಕ ತನ್ನ ಮಗನೂ ಪರೀಕ್ಷೆ ಬರೆಯುತ್ತಿದ್ದುದರಿಂದ ತನ್ನ ಸೇವೆಯ ದುರ್ಬಳಕೆ ಮಾಡಿಕೊಂಡಿರುವುದು ಪಾಲಕರಿಗೂ ಗೊತ್ತಾಗಿ ಗದ್ದಲದ ಸನ್ನಿವೇಶ ನಿರ್ಮಾಣವಾಗಿತ್ತು. ಶಿಕ್ಷಕ ಚರ್ಚಿಲ್ ಸಂತಾನ ದಾಲ್ಮೆತ್ ಪರೀಕ್ಷಾ ಕೇಂದ್ರದ ಮೇಲ್ವಿಚಾರಕರಿಗೆ ರಿಲೀವರ್ ಆಗಿ ಬಂದು ಮಗನ ಪ್ರಶ್ನೆ ಪತ್ರಿಕೆಯನ್ನು ಹೊರಗೆ ತಂದು ಉತ್ತರ ಗುರುತಿಸಿ ನಕಲು ಮಾಡಿದ್ದು, ಇದನ್ನು ಆತ ತಪ್ಪೊಪ್ಪಿಗೆಯಲ್ಲಿ ಒಪ್ಪಿಕೊಂಡಿರುವುದು ಇಡೀ ಪರೀಕ್ಷಾ ವ್ಯವಸ್ಥೆಯನ್ನೇ ಅಣುಕಿಸಿದಂತಾಗಿದೆ. ಈತನ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಪ್ರತಿಭಟನಾನಿರತ ಹಲವು ಪಾಲಕರು ಆಗ್ರಹಿಸಿ ಮುಖ್ಯೋಧ್ಯಾಪಕರಿಗೆ ದೂರು ಸಲ್ಲಿಸಿದರು. ನಕಲು ಮಾಡಿದ ವಿದ್ಯಾರ್ಥಿಯ ಮಾಹಿತಿ ನೀಡಿ ಆತನ ಫಲಿತಾಂಶ ತಡೆಹಿಡಿಯಬೇಕು. ತಪ್ಪು ಮಾಡಿರುವ ಶಿಕ್ಷಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲು ಪಾಲಕರು ಆಗ್ರಹಿಸಿದ್ದಾರೆ. ಈ ಕುರಿತು ಪ್ರತಿಭಟನಾನಿರತ ಹಲವು ಪಾಲಕರು ಮುಖ್ಯೋಧ್ಯಾಪಕರಿಗೆ ದೂರು ಸಲ್ಲಿಸಿದರು.
ನಮ್ಮ ಶಾಲೆಯ ಪರಿಸರದಲ್ಲಿ ಜರುಗಿದ ನವೋದಯ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ನಕಲು ನಡೆಯಲು ತಮ್ಮ ಶಾಲೆಯ ಅತಿಥಿ ಶಿಕ್ಷಕ ಭಾಗಿಯಾಗಿರುವುದು ಅಕ್ಷಮ್ಯವಾಗಿದ್ದು, ತಪ್ಪೊಪ್ಪಿಗೆ ಹೇಳಿಕೆಯಿಂದ ಸಾಬೀತಾಗಿದ್ದು ಘಟನೆಯನ್ನು ನಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯವರ ಗಮನಕ್ಕೆ ತಂದು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಕಾರ್ಮೆಲ್ ಶಾಲೆಯ ಮುಖ್ಯೋಧ್ಯಾಪಕಿ ಸಿಸ್ಟರ್ ಜಾನೆಟ್ ಕಾರ‍್ಮಿನ್ ಮಿನೆಜಸ್ ತಿಳಿಸಿದ್ದಾರೆ.ಪರೀಕ್ಷಾ ನಿಯಮಾವಳಿಯಂತೆ ನೋ ರಿಲೇಷನ್ ಸರ್ಟಿಫಿಕೇಟ್ ಕೊಡುವುದು ಕಡ್ಡಾಯವಿದ್ದು ಅದರಂತೆ ಪಾಲನೆಯಾಗದಿರುವುದು ತಪ್ಪು. ಆದ್ದರಿಂದ ಕ್ರಮ ಜರುಗಿಸಲು ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದ ಮಹಾಲೆ ಹೇಳಿದ್ದಾರೆ.