ಪಾವಗಡದದಲ್ಲಿ ಮತ್ತೆ ನಕ್ಸಲ್‌ ಚಟುವಟಿಕೆ?

KannadaprabhaNewsNetwork |  
Published : Sep 11, 2026, 02:00 AM IST
ಜಿಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆ | Kannada Prabha

ಸಾರಾಂಶ

ಆಂಧ್ರ ಹಾಗೂ ಪಾವಗಡ ಗಡಿಭಾಗದಲ್ಲಿ ನಿಷ್ಕ್ರಿಯವಾಗಿದ್ದ ನಕ್ಸಲ್‌ ಚಟುವಟಿಕೆ ಮತ್ತೆ ಕಾರ್ಯಾಚರಣೆ ಆರಂಭಿಸಿರುವ ಶಂಕೆ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಆಂಧ್ರ ಹಾಗೂ ಪಾವಗಡ ಗಡಿಭಾಗದಲ್ಲಿ ನಿಷ್ಕ್ರಿಯವಾಗಿದ್ದ ನಕ್ಸಲ್‌ ಚಟುವಟಿಕೆ ಮತ್ತೆ ಕಾರ್ಯಾಚರಣೆ ಆರಂಭಿಸಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ರಾತ್ರಿ ಗಂಗಸಾಗರದ ರೈತರೊಬ್ಬರಿಗೆ ಪೀಪಲ್ಸ್‌ ವಾರ್‌ ಜನಶಕ್ತಿ ಪಾರ್ಟಿ (ಪಿಡಬ್ಲ್ಯೂಜಿ) ಕಾಮ್ರೇಡ್‌ ದೇವನ್ನ ದಳಂ ಹೆಸರಿನಲ್ಲಿ ₹5 ಲಕ್ಷ ಬೇಡಿಕೆಯಿಟ್ಟ ಪತ್ರವನ್ನು ತೋಟದ ಗೇಟ್‌ಗೆ ಅಂಟಿಸಿ ಪರಾರಿ ಆಗಿದ್ದಾರೆ.

ತೆಲುಗಿನಲ್ಲಿ ಬರೆದ ಪತ್ರದಲ್ಲಿ ಏನಿದೆ?: ಪತ್ರದಲ್ಲಿ ಪೀಪಲ್ಸ್‌ ವಾರ್‌ ಜನಶಕ್ತಿ ಪಾರ್ಟಿ, ದೇವನ್ನ ದಳಂ ಆಂಧ್ರ ಪ್ರದೇಶ್‌ ಎಂಬ ವಿಳಾಸ ಇದೆ. ಈ ಪತ್ರದಲ್ಲಿ ತಾಲೂಕಿನ ‘ಗಂಗಸಾಗರದ ವಾಸಿಯಾದ ಮುತ್ತಕುಂಟ್ಲ ಭೂಷಪ್ಪ ಅವರಿಗೆ ಕಾಮ್ರೇಡ್‌ ದೇವನ್ನ ಮಾಡುವ ನಮಸ್ಕಾರಗಳು. ಸ್ವಚ್ಛ ಸಮಾಜ ಹಾಗೂ ದೌರ್ಜನ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತಿದೆ. ಎಲ್ಲಿ ದೌರ್ಜನ್ಯ, ದಬ್ಬಾಳಿಕೆ ಹಾಗೂ ಬಡವರ ಮೇಲೆ ವಿನಾ ಕಾರಣ ದಾಳಿ ನಡೆಸಿದರೆ, ಅಲ್ಲಿ ಸಂಘಟನೆ ನಮ್ಮದೇ ಅದ ರೀತಿಯಲ್ಲಿ ಕಾರ್ಯನಿರ್ವಹಿಸಿ ಅನ್ಯಾಯ ಮತ್ತು ದೌರ್ಜನ್ಯಕ್ಕೆ ಒಳಗಾದ ಬಡ ಹಾಗೂ ಕಾರ್ಮಿಕರ ಪರ ಕೆಲಸ ಮಾಡಿ ರಕ್ಷಣೆ ಹಾಗೂ ನ್ಯಾಯ ಕಲ್ಪಿಸಲಾಗುತ್ತಿದೆ. ತಾಲೂಕಿನ ಗಂಗಸಾಗರದ ಸಮೀಪ ಪೊನ್ನಸಮುದ್ರ ಗ್ರಾಪಂ ವ್ಯಾಪ್ತಿಯ ಕನಿಕಲಬಂಡೆ ಗ್ರಾಮದಲ್ಲಿ ರಾಜಕೀಯ ಪಿತೂರಿ ಹಾಗೂ ದೌರ್ಜನ್ಯ ಹೆಚ್ಚಾಗುತ್ತಿದ್ದು, ಇದೇ ಗ್ರಾಮದ ಉಪ್ಪಾರ ವೆಂಕಟೇಶ್‌ ಮೇಲೆ ಗುಂಡಾಗಿರಿ ಹಾಗೂ ದೌರ್ಜನ್ಯ ನಡೆಯುತ್ತಿದ್ದು, ಅವರಿಗೆ ಹಿಂಸೆ ಕೊಡುತ್ತಿದ್ದಾರೆ. ಅವರ ನೋವಿಗೆ ಸ್ಪಂದಿಸಿ, ಕಾಮ್ರೇಡ್‌ ದೇವನ್ನ ದಳಂ ಪಾರ್ಟಿ ತಾಲೂಕಿಗೆ ಪ್ರವೇಶ ಮಾಡಿದ್ದು, ಕನಿಕಲಬಂಡೆ ಗ್ರಾಮದಲ್ಲಿ ದೌರ್ಜನ್ಯ ನಡೆಸುತ್ತಿರುವವರ ಮಾಹಿತಿ ಸಂಗ್ರಹಿಸಲಾಗಿದೆ. ಶೀಘ್ರ ಅವರ ದೌರ್ಜನ್ಯ ಮಟ್ಟ ಹಾಕಲಿದ್ದೇವೆ. ಇದೇ ಗ್ರಾಮದ ಉಪ್ಪಾರ ವೆಂಕಟೇಶ್‌ ವಿರುದ್ಧ ಕೇಸುಗಳಿದ್ದು, ಹಣದ ಅಗತ್ಯವಿದೆ. ಪಕ್ಷದ ಬೆಳವಣಿಗೆಗೆ ಸಹಕರಿಸಬೇಕು. ಹೀಗಾಗಿ ಸೆ.16ರೊಳಗೆ ವಕೀಲ ಸುಬ್ಬರಾಯಪ್ಪ ಅವರೊಂದಿಗೆ ₹5 ಲಕ್ಷ ಕಳುಹಿಸಿ ಕೊಡಬೇಕು. ನಿಮಗೆ ತೊಂದರೆ ಆದರೆ ನಿಮ್ಮ ಬೆಂಬಲವಾಗಿರುತ್ತೇವೆ. ಇಲ್ಲವಾದರೆ ಪರಿಣಾಮ ಎದುರಿಸಬೇಕಿದೆ. ಜತೆಗೆ ಈ ವಿಷಯ ಪೊಲೀಸರಿಗಾಗಲಿ ಅಥವಾ ಯಾರಿಗಾದರೂ ಹೇಳಿದರೆ ಅದರ ಮುಂದಿನ ಅನಾಹುತ ಎದುರಿಸಬೇಕಾಗಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ತೋಟದ ಬಳಿ ಹೋಗಿದ್ದ ವೇಳೆ ರೈತ ಮುತ್ತಕುಂಟ್ಲ ಭೂಷಪ್ಪ ಅವರಿಗೆ ಗೇಟ್‌ಗೆ ಅಂಟಿಸಿದ್ದ ಪತ್ರ ಸಿಕ್ಕಿದ್ದು, ನಿಜವಾಗಿಯೂ ಅದೇ ಸಂಘಟನೆಯ ಪತ್ರವೇ ಅಥವಾ ಅವರ ಹೆಸರಿನಲ್ಲಿ ಯಾರಾದರೂ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಪಾವಗಡ ಪೊಲೀಸ್ ಠಾಣೆಗೆ ದೂರು ಸಲ್ಲಿದ್ದಾರೆ. ವಿಷಯ ಹೊರಬೀಳುತ್ತಿದ್ದಂತೆ ಕನಿಕಲಬಂಡೆ, ಗಂಗಸಾಗರ ಪೊನ್ನಸಮುದ್ರ, ಕೆಂಚಗಾನಹಳ್ಳಿ, ಅಚ್ಚಮ್ಮನಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.ಪಾವಗಡದ ರಕ್ತ ಸಿಕ್ತ ಇತಿಹಾಸ:

ಪಾವಗಡ ತಾಲೂಕನ್ನು ಆಂಧ್ರ ರಾಜ್ಯವು ಸುತ್ತುವರಿದಿದೆ. ಅರಣ್ಯ ಹಾಗೂ ಹೊಂಗೆ ಸೀಮೆ ಜಾಲಿಯ ಬೆಟ್ಟಗುಡ್ಡಗಳಿಂದ ಅವೃತ್ತವಾಗಿದ್ದು, 1997-98ರಿಂದ 2005ರವರಿಗೆ ತಾಲೂಕಿನಲ್ಲಿ ನಕ್ಸಲ್‌ ಚಟವಟಿಕೆ ತೀವ್ರವಾಗಿತ್ತು. 2005ರಲ್ಲಿ ಆಂಧ್ರದ ರೊದ್ದಂ ಪೊಲೀಸ್‌ ಠಾಣೆಗೆ ಬಾಂಬ್‌ ಸ್ಪೇೂಟ, 2005ರ ಫೆ.9ರಂದು ಪಾವಗಡದ ತಾಲೂಕಿನ ವೆಂಕಟಮ್ಮನಹಳ್ಳಿ ಸರ್ಕಾರಿ ಶಾಲೆಗೆ ನುಗ್ಗಿ ಒಬ್ಬ ಖಾಸಗಿ ಬಸ್‌ ಕ್ಲಿನರ್‌ ಸೇರಿದಂತೆ 7 ಮಂದಿ ಪೊಲೀಸರನ್ನು ಹತ್ಯೆ ಮಾಡಲಾಗಿತ್ತು. ಆ ಬಳಿಕ ಹೆಚ್ಚಿನ ಕಾರ್ಯಚರಣೆ ನಡೆಸಿ ನಕ್ಸಲರನ್ನು ಮಟ್ಟ ಹಾಕಲಾಗಿತ್ತು.

ಇನ್ನು ಪತ್ರದಲ್ಲಿ ಉಲ್ಲೇಖಿಸಿರುವ ಉಪ್ಪಾರ ವೆಂಕಟೇಶ್‌ ತಾಲೂಕಿನ ಕನಿಕಲಬಂಡೆ ನಿವಾಸಿ. ತನ್ನನ್ನು ತಾನು ನಕ್ಸಲ್‌ ಎಂದು ಕರೆದುಕೊಂಡಿದ್ದ. ಬೆದರಿಸಿ ಹಾಗೂ ರಸ್ತೆಯಲ್ಲಿ ಓಡಾಡುವರಿಂದ ಹಣ ಲೋಟಿ ಮಾಡುತ್ತಿದ್ದ. ಪೊಲೀಸರು ಗ್ರಾಮಕ್ಕೆ ಪ್ರವೇಶಿಸಿದ್ದ ವೇಳೆ ಸಮೀಪದ ಬೆಟ್ಟದ ಮೇಲೆಯೇ ಬಾಂಬ್ ಸ್ಫೋಟಿಸಿ ಪರಾರಿ ಆಗಿದ್ದ. ಆ.29ರಂದು ಕನಿಕಲ ಬಂಡೆ ಗ್ರಾಮದ ಹೊರವಲಯದಲ್ಲಿ ಪಂಪ್‌ ಸೆಟ್‌ಗೆ ನಾಡಬಾಂಬ್‌ ಇಟ್ಟಿದ್ದ. ಅದು ಸ್ಫೋಟಗೊಂಡು ರೈತ ಕರಿಯಣ್ಣ ಪ್ರಾಣಾಪಾಯದಿಂದ ಪಾರಾಗಿದ್ದರು. ಈಗ ಆತನಿಗೆ ತೊಂದರೆ ಆಗಿದ್ದು, ₹5 ಲಕ್ಷ ನೀಡುವಂತೆ ಪತ್ರ ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಕೈಯಲ್ಲಿ ಮೂಡಿ ಬಂದ ಮಣ್ಣಿನ ಗಣೇಶ
ಹನೂರಿನಲ್ಲಿ ರೈತ ಸಂಘದಿಂದ ಬೃಹತ್ ಪ್ರತಿಭಟನೆ: ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ