ಹಾಲು ಕರೆದು ಎನ್‌ಡಿಎ ಕಾರ್ಯಕರ್ತರ ಪ್ರತಿಭಟನೆ

KannadaprabhaNewsNetwork | Published : Jun 30, 2024 12:53 AM

ಸಾರಾಂಶ

ರಾಮನಗರ: ಹಾಲಿನ ದರ ಹೆಚ್ಚಳ ಮಾಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ರೈತಮೋರ್ಚಾ ಹಾಗೂ ಜೆಡಿಎಸ್ ಕಾರ್ಯಕರ್ತರು ಹಸು ಹಾಲು ಕರೆದು ನಗರದಲ್ಲಿ ಶನಿವಾರ ವಿನೂತವಾಗಿ ಪ್ರತಿಭಟನೆ ನಡೆಸಿದರು.

ರಾಮನಗರ: ಹಾಲಿನ ದರ ಹೆಚ್ಚಳ ಮಾಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯಸರ್ಕಾರದ ಕ್ರಮ ಖಂಡಿಸಿ ಬಿಜೆಪಿ ರೈತಮೋರ್ಚಾ ಹಾಗೂ ಜೆಡಿಎಸ್ ಕಾರ್ಯಕರ್ತರು ಹಸು ಹಾಲು ಕರೆದು ನಗರದಲ್ಲಿ ಶನಿವಾರ ವಿನೂತವಾಗಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದೊಳಗೆ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡದ ಕಾರಣ ಉಭಯ ಪಕ್ಷಗಳ ಕಾರ್ಯಕರ್ತರು ಹಸುಗಳೊಂದಿಗೆ ಪ್ರವೇಶ ದ್ವಾರದಲ್ಲಿಯೇ ಬೆಂಗಳೂರು - ಮೈಸೂರು ಹಳೇ ಹೆದ್ದಾರಿಯಲ್ಲಿ ರಾಜ್ಯ ಸರ್ಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಘೋಷಣೆ ಕೂಗುತ್ತಾ ಧರಣಿ ಕುಳಿತರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಗತ್ಯ ವಸ್ತುಗಳ ಬೆಲೆಗಳನ್ನು ಹೆಚ್ಚಳ ಮಾಡಿದೆ. ಅದರಲ್ಲಿಯೂ 50 ಮಿ.ಲೀ. ಹಾಲನ್ನು ಕೊಟ್ಟಂತೆ ಮಾಡಿ ಪ್ರತಿ ಹಾಲಿನ ಪ್ಯಾಕೆಟ್ ಮೇಲೆ 2.10 ರು. ಹೆಚ್ಚಳ ಮಾಡಿರುವುದು ಮನೆ ಮುರುಕು ನಿರ್ಧಾರ ಎಂದು ಟೀಕಿಸಿದರು.

ಸರ್ಕಾರಕ್ಕೆ 50 ಮಿ.ಲೀಟರ್ ಹೆಚ್ಚು ಹಾಲು ಬೇಕೆಂದು ಯಾರು ಕೇಳಿದ್ದರು. ಜನರು ಕೇಳಿದ್ದನ್ನು ಮೊದಲು ಕೊಡಬೇಕು. ಅದನ್ನು ಬಿಟ್ಟು ರಾಜ್ಯಸರ್ಕಾರಕ್ಕೆ ಜ್ವರ ಬಂದರೆ , ರಾಜ್ಯದ ಜನರಿಗೆ ಬರೆ ಹಾಕುತ್ತಿದೆ. ಇದು ಬರೆ ಹಾಕುವ, ಜನ ವಿರೋಧಿ ಸರ್ಕಾರ. ಹಾಲಿನ ಬೆಲೆ ಹೆಚ್ಚಳ ಮಾಡಿದ್ದಕ್ಕೆ ಕಾಫಿ, ಟೀ, ಬೆಲೆಗಳು ಕೂಡ ಹೆಚ್ಚಳ ಆಗುತ್ತಿದೆ. ಇದು ಎಲ್ಲರ ಮೇಲೂ ಪರಿಣಾಮ ಬೀರುತ್ತದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಪೆಟ್ರೋಲ್, ಡೀಸೆಲ್ ದರವನ್ನೂ ಹೆಚ್ಚಳ ಮಾಡಿದ್ದು, ಇದರಿಂದ ಸರಕು ಸಾಗಣೆ ಬೆಲೆ ಹೆಚ್ಚಳವಾಗಿದೆ. ಅಗತ್ಯ ವಸ್ತುಗಳ ದರವೂ ದುಬಾರಿಯಾಗಿದ್ದು, ಸರ್ಕಾರ ಜನರ ಜೀವನದ ಜೊತೆ ಚೆಲ್ಲಾಟ ಆಗುತ್ತಿದೆ. ಬೆಲೆ ನಿಯಂತ್ರಣ ಮಾಡುವುದಾಗಿ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಕೆ ಮಾಡಬೇಕು. ಸರ್ಕಾರಕ್ಕೆ ಮನುಷ್ಯತ್ವ ಇದ್ದರೆ ಬೆಲೆಗಳನ್ನು ಇಳಿಕೆ ಮಾಡಲಿ.

ಹಾಲಿಗೆ ಪ್ರೋತ್ಸಾಹಧನ 5 ರುಪಾಯಿ ಹೆಚ್ಚಿಸಬೇಕು. ಬಿತ್ತನೆ ಬೀಜ ಬೆಲೆ ಏರಿಕೆ ಆಗಿದ್ದು, ಸಬ್ಸಿಡಿಯಲ್ಲಿ ಪೂರೈಕೆ ಮಾಡುವುದು. ಹೈನುಗಾರಿಕೆಯಿಂದ ನಷ್ಟ ಆಗುತ್ತಿರುವ ಕಾರಣ ರೈತರು ಈ ವೃತ್ತಿಯಿಂದ ವಿಮುಖರಾಗುತ್ತಿದ್ದಾರೆ. ಸರ್ಕಾರ ಪ್ರತಿ ಲೀಟರ್ ಹಾಲಿಗೆ 5 ರುಪಾಯಿ ಪ್ರೋತ್ಸಾಹ ಧನ ನೀಡುತ್ತಿತ್ತು. ಆದರೆ, ರಾಜ್ಯದಲ್ಲಿ 2023 ಆಗಸ್ಟ್ ನಿಂದ 2024ರ ಜೂನ್ ವರೆಗೆ 8 ತಿಂಗಳ ಪ್ರೋತ್ಸಾಹಧನ 1,100 ಕೋಟಿ ರು.ಬಾಕಿ ಉಳಿದಿದೆ. ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಜೊತೆಗೆ ಲೀಟರ್ ಹಾಲಿಗೆ 10 ರುಪಾಯಿ ಪ್ರೋತ್ಸಾಹ ಧನ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬಿಜೆಪಿ ರೈತಮೋರ್ಚಾ ರಾಜ್ಯ ಉಪಾಧ್ಯಕ್ಷ ಎಂ.ರುದ್ರೇಶ್, ಗ್ರೇಟರ್ ಬೆಂಗಳೂರು - ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ವರದರಾಜುಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಪ್ರಕಾಶ್ ರವರು ಹಸು ಹಾಲು ಕರೆಯುವ ಮೂಲಕ ರಾಜ್ಯ ಸರ್ಕಾರದ ಹಾಲಿನ ದರ ಹೆಚ್ಚಳದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಅಪರ ಜಿಲ್ಲಾಧಿಕಾರಿ ಶಿವಾನಂದ ಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಮಾಜಿ ಅಧ್ಯಕ್ಷ ಹುಲುವಾಡಿ ದೇವರಾಜು, ಮುಖಂಡರಾದ ಎಸ್.ಆರ್.ನಾಗರಾಜು, ಮುರಳೀಧರ್, ಕೆ.ವಿ.ನಾಗಾನಂದ, ಕಾಳಯ್ಯ, ನಗರ ಘಟಕ ಅಧ್ಯಕ್ಷ ದರ್ಶನ್ ರೆಡ್ಡಿ, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಪುಷ್ಪಲತಾ, ಜೆಡಿಎಸ್ ರಾಜ್ಯ ವಕ್ತಾರ ನರಸಿಂಹಮೂರ್ತಿ, ಮುಖಂಡರಾದ ಪಿ.ಅಶ್ವತ್ಥ್, ಸಬ್ಬಕೆರೆ ಶಿವಲಿಂಗಯ್ಯ, ವಾಸು ನಾಯಕ್, ಜಯಕುಮಾರ್ ಮತ್ತಿತರರು ಭಾಗವಹಿಸಿದ್ದರು.

ಕೋಟ್ .............

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರಿಗೆ ರಾಜ್ಯ ಸರ್ಕಾರ ಶಾಪವಾಗಿ ಪರಿಣಮಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರ ವಿಧಾನಸೌಧವನ್ನೇ ಮಾರುವ ಪರಿಸ್ಥಿತಿ ಉಂಟಾಗಲಿದೆ. ಈ ಕೂಡಲೇ ಸರ್ಕಾರ ಹಾಲಿನ ಪ್ರೋತ್ಸಾಹ ಧನವನ್ನು ಪಾವತಿಸಬೇಕು, ಪೆಟ್ರೋಲ್-ಡೀಸೆಲ್ ದರ ಇಳಿಕೆ ಮಾಡಬೇಕು, ರೈತಪರ ಯೋಜನೆಗಳನ್ನ ಮುಂದುವರಿಸಬೇಕು.

- ಎಂ.ರುದ್ರೇಶ್, ರಾಜ್ಯ ಉಪಾಧ್ಯಕ್ಷರು, ಬಿಜೆಪಿ ರೈತಮೋರ್ಚಾ

ಕೋಟ್ ..............

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದಲೂ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ, ರೈತ ವಿದ್ಯಾನಿಧಿ, ಭೂಸಿರಿ ಕಾಯ್ದೆ, ಗೋಶಾಲೆ, ಕಿಸಾನ್ ಸಮ್ಮಾನ್ ಸೇರಿದಂತೆ ಹಲವು ಯೋಜನೆಗಳನ್ನು ಸ್ಥಗಿತ ಮಾಡುವ ಮೂಲಕ ರೈತರ ಶಕ್ತಿ ಕುಗ್ಗಿಸಲು ಮುಂದಾಗಿದೆ. ಪರಿಶಿಷ್ಟರಿಗೆ ಮೀಸಲಿಟ್ಟಿದ್ದ ಅನುದಾನವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳುವ ಮೂಲಕ ದ್ರೋಹ ಬಗೆದಿದೆ. ಹಾಲಿನ ಪ್ರೋತ್ಸಾಹ ಧನವನ್ನು ಪಶುಪಾಲನಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ಬಳಕೆ ಮಾಡಿಕೊಂಡಿದೆ. ಇದು ರೈತರು, ಕಾರ್ಮಿಕರು, ಜನಸಾಮಾನ್ಯರು ಅಷ್ಟೇ ಅಲ್ಲದೆ ಕನ್ನಡಿಗರ ವಿರೋಧಿ ಸರ್ಕಾರವಾಗಿದೆ.

-ಪ್ರಕಾಶ್, ಜಿಲ್ಲಾಧ್ಯಕ್ಷರು, ಬಿಜೆಪಿ ರೈತಮೋರ್ಚಾ, ರಾಮನಗರ

ಕೋಟ್ .................

ಟ್ರಾನ್ಸ್ ಫಾರ್ಮರ್ ಗಳು 40 ಸಾವಿರಕ್ಕೆ ಸಿಗುತ್ತಿದ್ದವು. ಈಗ 2 ಲಕ್ಷಕ್ಕೆ ಏರಿಸಿದ್ದಾರೆ. ಅದನ್ನು 40 ಸಾವಿರಕ್ಕೆ ಸಿಗುವಂತೆ ಮಾಡಬೇಕು. ಬಿತ್ತನೆ ಬೀಜ, ಗೊಬ್ಬರದ ದರ ಗಗನಕ್ಕೆ ಏರಿದ್ದು, ಹಿಂದಿನ ದರಲ್ಲಿಯೇ ಅವು ಸಿಗುವಂತೆ ನೋಡಿಕೊಳ್ಳಬೇಕು. ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನವನ್ನು ಪುನರಾರಂಭಿಸಬೇಕು. ಈ ಹಿಂದೆ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿರವರ ಸರ್ಕಾರ ಇದ್ದಾಗ ಹಾಲಿಗೆ 2 ರು.ಗಳಿಂದ 5 ರು.ಗೆ ಪ್ರೋತ್ಸಾಹಧನ ಕೊಡಲಾಗುತ್ತಿತ್ತು. ಅದನ್ನು ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ನಿಲ್ಲಿಸಿದ್ದು, ಮತ್ತೆ ಪ್ರಾರಂಭಿಸಬೇಕು.

-ವರದರಾಜುಗೌಡ, ಮಾಜಿ ಅಧ್ಯಕ್ಷರು, ಗ್ರೇಟರ್ ಬೆಂಗಳೂರು ಬಿಡದಿ ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರ.

29ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಬಿಜೆಪಿ ರೈತಮೋರ್ಚಾ ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Share this article