ಸಿಲ್ಕ್‌ಬೋರ್ಡ್ ಜಂಕ್ಷನ್ ಸಮೀಪಹೊಸ ಗೋಳು ತಡೆಗೆ ರಾಜಕಾಲುವೆ

KannadaprabhaNewsNetwork |  
Published : May 31, 2026, 02:15 AM IST
ಮಹೇಶ್ವರ್‌ ರಾವ್‌  | Kannada Prabha

ಸಾರಾಂಶ

ಸಣ್ಣ ಮಳೆಗೂ ಜಲಾವೃತವಾಗುತ್ತಿರುವ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಹೊಸ ರಾಜ ಕಾಲುವೆ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಣ್ಣ ಮಳೆಗೂ ಜಲಾವೃತವಾಗುತ್ತಿರುವ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಹೊಸ ರಾಜ ಕಾಲುವೆ ನಿರ್ಮಾಣಕ್ಕೆ ಸಮೀಕ್ಷೆ ನಡೆಸಲಾಗುವುದು ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ಮಳೆಯಿಂದ ಜಲಾವೃತವಾಗುತ್ತಿರುವ ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ಉಂಟಾಗುವ ಜಲಾವೃತ ಸಮಸ್ಯೆಯನ್ನು ತಪ್ಪಿಸಲು ಈಗಾಗಲೇ ರಸ್ತೆ ಕೆಳಭಾಗದಲ್ಲಿರುವ ರಾಜಕಾಲುವೆಯ ಎತ್ತರವನ್ನು ಹಾಲಿ 1.5 ಮೀ.ನಿಂದ 3.5 ಮೀ.ಗೆ ಎತ್ತರಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ರಾಜಕಾಲುವೆ ಎತ್ತರಿಸುವ ಮೊದಲ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ನಂತರ ಉಳಿದ 2 ಭಾಗಗಳ ಕಲ್ವರ್ಟ್ ಕಾಮಗಾರಿಯನ್ನು 2ನೇ ಹಂತದಲ್ಲಿ ಕೈಗೆತ್ತಿಕೊಂಡು ಜೂನ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಅಲ್ಲದೇ ಹೊಸ ಕಾಲುವೆ ನಿರ್ಮಾಣಕ್ಕೆ ಸರ್ವೇ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬನ್ನೇರುಘಟ್ಟ ರಸ್ತೆಗೆ ಶಾಶ್ವತ ಪರಿಹಾರ:

ಬನ್ನೇರುಘಟ್ಟ ರಸ್ತೆಯಲ್ಲಿ ಜಲಾವೃತವಾಗುವುದನ್ನು ತಪ್ಪಿಸಲು ಶಾಶ್ವತ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಯೋಜನೆ ರೂಪಿಸುವಂತೆ ಆಯುಕ್ತ ಮಹೇಶ್ವರ ರಾವ್ ಅಧಿಕಾರಿಗಳಿಗೆ ಸೂಚಿಸಿದರು.

ಬನ್ನೇರಘಟ್ಟ ರಸ್ತೆಯ ರೈನ್‌ಬೋ ಮಕ್ಕಳ ಆಸ್ಪತ್ರೆ ಬಳಿ ರಸ್ತೆಗಿಂತ ರಾಜಕಾಲುವೆ ಎತ್ತರದಲ್ಲಿದೆ. ಹೀಗಾಗಿ, ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಾದಾಗ ಸೈಡ್ ಡ್ರೈನ್‌ಗಳಿಂದ ನೀರು ಹಿಮ್ಮುಖವಾಗಿ ಹರಿದು ರಸ್ತೆಯಲ್ಲಿ ಜಲಾವೃತ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಮಳೆ ನೀರುಗಾಲುವೆಯಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಯೋಜನೆ ರೂಪಿಸಬೇಕು. ಜೊತೆಗೆ ರಾಜಕಾಲುವೆಯಲ್ಲಿ ಸಂಪೂರ್ಣವಾಗಿ ಹೂಳೆತ್ತುವಂತೆ ಸೂಚನೆ ನೀಡಿದರು.

ಜಲಮಂಡಳಿ ಕಾಮಗಾರಿ

2 ದಿನಗಳಲ್ಲಿ ಪೂರ್ಣಗೊಳಿಸಿ

ಬನ್ನೇರುಘಟ್ಟ ರಸ್ತೆಯಲ್ಲಿ ಮೊದಲ ಹಂತವಾಗಿ ವೆಗಾಸಿಟಿ ಮಾಲ್‌ನಿಂದ ಅರಕೆರೆ ಸಿಗ್ನಲ್‌ವರೆಗೆ 1.5 ಕಿ.ಮೀ. ಉದ್ದದ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ 900 ಡಯಾಮೀಟರ್ ಪೈಪ್ ಅಳವಡಿಕೆ ಹಾಗೂ ಮುಖ್ಯ ಚರಂಡಿ ಪೈಪ್‌ಗೆ ಮನೆಗಳಿಂದ ಬರುವ ಉಪ-ಪೈಪ್ ಸಂಪರ್ಕ ಜೋಡಣೆಯ ಕಾಮಗಾರಿಯನ್ನು 2 ದಿನಗಳಲ್ಲಿ ಪೂರ್ಣಗೊಳಿಸಬೇಕು. ನಂತರ ಡಾಂಬರೀಕರಣ ಮಾಡುವಂತೆ ಸೂಚನೆ ನೀಡಿದರು. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ, ಎರಡನೇ ಹಂತದಲ್ಲಿ ಅರಕೆರೆ ಸಿಗ್ನಲ್‌ನಿಂದ ಹುಳಿಮಾವು ಮೆಟ್ರೋ ನಿಲ್ದಾಣದವರೆಗೆ 1 ಕಿ.ಮೀ. ರಸ್ತೆಯಲ್ಲಿ ಜಲಮಂಡಳಿ ಕಾಮಗಾರಿ ಆರಂಭಿಸಲು ಮಹೇಶ್ವರ್ ರಾವ್ ಸೂಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಳ್ಳತನ ಕೇಸು ಬೇಧಿಸಿದ ಜಿಲ್ಲಾ ಪೊಲೀಸರು; ₹2.62 ಕೋಟಿ ಮೌಲ್ಯದ ಸ್ವತ್ತು ಮಾಲೀಕರಿಗೆ ಹಸ್ತಾಂತರ
ಗೋವುಗಳ ಹತ್ಯೆ; ಹಿಂದೂ, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ