ಕಪ್ಪಗಲ್ ರಸ್ತೆಯ ಬದಿಯಲ್ಲಿ ಚೀಲವೊಂದರಲ್ಲಿ ಅವುಗಳ ತಲೆಗಳನ್ನು ಬಿಸಾಡಿ ಹೋಗಲಾಗಿದೆ.
ಬಳ್ಳಾರಿ: ಇಲ್ಲಿನ ಕಪ್ಪಗಲ್ಲು ರಸ್ತೆಯ ಸರ್ ಎಂವಿ ನಗರದ 9ನೇ ಕ್ರಾಸ್‌ನಲ್ಲಿ ಎರಡು ಹಸುಗಳ ತಲೆ ಕತ್ತರಿಸಿ ರಸ್ತೆಯಲ್ಲಿ ಬಿಸಾಡಿದ್ದನ್ನು ಖಂಡಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶನಿವಾರ ಮಧ್ಯಾಹ್ನ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಅನಿಲಕುಮಾರ್ ಮೋಕಾ, ಗೋವುಗಳನ್ನು ಹತ್ಯೆ ಮಾಡಿ ಕಪ್ಪಗಲ್ ರಸ್ತೆಯ ಬದಿಯಲ್ಲಿ ಚೀಲವೊಂದರಲ್ಲಿ ಅವುಗಳ ತಲೆಗಳನ್ನು ಬಿಸಾಡಿ ಹೋಗಲಾಗಿದೆ. ವಾರ್ಡ್‌ನ ಪಾಲಿಕೆ ಸದಸ್ಯರು, ಸಾರ್ವಜನಿಕರು ಓಡಾಡುತ್ತಿರುವ ವೇಳೆ ಈ ಸನ್ನಿವೇಶವನ್ನು ಕಂಡು ಆತಂಕಗೊಂಡಿದ್ದಾರೆ. ಪ್ರತಿನಿತ್ಯ ಪೂಜೆ ಮಾಡುವ ಗೋವುಗಳನ್ನು ದುಷ್ಕರ್ಮಿಗಳು ಹತ್ಯೆ ಮಾಡಿ ತಲೆಗಳನ್ನು ಕಡಿದು ಚೀಲದಲ್ಲಿ ತುಂಬಿ ಬಿಸಾಡಿರುವುದರಿಂದ ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ. ಕೂಡಲೇ ಆರೋಪಿಗಳನ್ನು ಪೊಲೀಸರು ಪತ್ತೆಹಚ್ಚಿ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಬಳಿಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ಶಾಸಕ ಜನಾರ್ದನ ರೆಡ್ಡಿ ಅವರು ಕೃತ್ಯ ಎಸಗಿದ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದರು.
ವಿಷಯ ತಿಳಿಯುತ್ತಿದ್ದಂತೆ ಗಾಂಧಿ ನಗರ ಪೊಲೀಸ್ ಠಾಣೆಯ ಸಿಪಿಐ ರವಿಚಂದ್ರ, ನಗರ ಡಿವೈಎಸ್‌ಪಿ ಗೋವಿಂದರಾಜು ವಿ. ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಪ್ರತಿಭಟನಾಕಾರರನ್ನು ಶಾಂತಗೊಳಿಸಲು ಯತ್ನಿಸಿದರು. ಇದೇ ವೇಳೆ ಪೊಲೀಸರ ಜೊತೆ ವಾಗ್ವಾದ ನಡೆಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ತಕ್ಷ ಣವೇ ಬಂಧಿಸಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಗಾಂಧಿನಗರ ಠಾಣೆಯ ಪೊಲೀಸರು ಪಂಚನಾಮೆ ನಡೆಸಿದರು.
ಘಟನೆಗೆ ಸಂಬಂಧಿಸಿದಂತೆ ನಗರ ಡಿವೈಎಸ್‌ಪಿ ಜತೆಗೆ ಮಾತುಕತೆ ನಡೆಸಿದ ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿ, ಮುಂದಿನ ದಿನಗಳಲ್ಲಿ ಬಳ್ಳಾರಿ ನಗರದಲ್ಲಿ ಇಂತಹ ಘಟನೆಗಳು ಯಾವುದೇ ಕಾರಣಕ್ಕೂ ಮರುಕಳಿಸಬಾರದು. ಈ ಘಟನೆಗೆ ಕಾರಣರಾದ ದುಷ್ಕರ್ಮಿಗಳ ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು. ಗೋವುಗಳನ್ನು ಹಿಂದೂ ಧರ್ಮದ ಸಂಪ್ರದಾಯದಂತೆ ಸಂಸ್ಕಾರ ಮಾಡಬೇಕು. ಇದರಿಂದ ಊರಿಗೆ ಒಳ್ಳೆಯದಾಗಲಿದೆ ಎಂದು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.ಪ್ರತಿಭಟನೆಯಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಶ್ರೀನಿವಾಸ್ ಮೊತ್ಕರ್, ಪಾಲಿಕೆ ಸದಸ್ಯರಾದ ಕೆ.ಹನುಮಂತ, ಎಂ.ಗೋವಿಂದರಾಜುಲು, ಬಿಜೆಪಿ ಮುಖಂಡ ಗುರುಲಿಂಗ ಗೌಡ ಸೇರಿದಂತೆ ನಾನಾ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸ್ಥಳೀಯ ನಿವಾಸಿಗಳು ಭಾಗವಹಿಸಿದ್ದರು.
ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡವು ಘಟನಾ ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿತು. ಹಸುಗಳ ತಲೆ ಅವಶೇಷಗಳನ್ನು ಪರಿಶೀಲಿಸಿದ ತಂಡವು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯ ಹಾಗೂ ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದೆ. ದುಷ್ಕರ್ಮಿಗಳ ಪತ್ತೆಗಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು. ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.