ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವೈದ್ಯಕೀಯ ಕ್ಷೇತ್ರಕ್ಕೆ ಗಂಭೀರ ಸವಾಲು: ಎಸ್ಸೆಸ್ಸೆಫ್ ಬೆಂಗಳೂರು

KannadaprabhaNewsNetwork |  
Published : May 26, 2026, 01:15 AM IST
ಎಸ್ಸೆಸ್ಸೆಫ್‌ | Kannada Prabha

ಸಾರಾಂಶ

ಇದು ಸಂವಿಧಾನದ ಸಮಾನ ಅವಕಾಶದ ಹಕ್ಕನ್ನೇ ಪ್ರಶ್ನಿಸುವಂತಿದ್ದು, ವಿದ್ಯಾರ್ಥಿಗಳನ್ನು ಪರಿಶ್ರಮದ ಬದಲು ಅಕ್ರಮ ಮಾರ್ಗಗಳತ್ತ ಒಯ್ಯುವ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಬೆಂಗಳೂರು: NEET-UG ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ದೊಡ್ಡ ಅನ್ಯಾಯವಾಗಿದ್ದು, ದೇಶದ ಶಿಕ್ಷಣ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕುಂದಿಸುತ್ತಿವೆ ಎಂದು ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಘಟಕ ಆತಂಕ ವ್ಯಕ್ತಪಡಿಸಿದೆ.ನಗರದ Freedom Park ನಲ್ಲಿ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾದ ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಅಲ್ತಾಫ್ ಅಲಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರವೇಶ ಪಡೆಯಲು ರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುವ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆ ಆಗುತ್ತಿರುವುದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಸಗುವ ಘೋರ ಅನ್ಯಾಯವಾಗಿದೆ. ಇದು ಸಂವಿಧಾನದ ಸಮಾನ ಅವಕಾಶದ ಹಕ್ಕನ್ನೇ ಪ್ರಶ್ನಿಸುವಂತಿದ್ದು, ವಿದ್ಯಾರ್ಥಿಗಳನ್ನು ಪರಿಶ್ರಮದ ಬದಲು ಅಕ್ರಮ ಮಾರ್ಗಗಳತ್ತ ಒಯ್ಯುವ ಅಪಾಯಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಪ್ರತಿಭೆಯಿಲ್ಲದವರು ಹಣಬಲದ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಪ್ರವೇಶ ಪಡೆದರೆ, ಭವಿಷ್ಯದಲ್ಲಿ ಸಮಾಜವೇ ಅದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಿ ಇಂತಹ ಅಕ್ರಮಗಳು ಏಡ್ಸ್ ಮತ್ತು ಕ್ಯಾನ್ಸರ್‌ನಂತಹ ಮಾರಕ ರೋಗಗಳಿಗಿಂತಲೂ ದೊಡ್ಡ ಸವಾಲಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದರು.

ವಿದ್ಯಾರ್ಥಿ ನಾಯಕ ಶಫೀಕ್ ಮಾತನಾಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದರಿಂದ ಪ್ರತಿವರ್ಷವೂ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳು ಮರುಕಳಿಸುತ್ತಿವೆ. ಇದರಿಂದ ಅನೇಕ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದು, ಕೆಲವರು ಆತ್ಮಹತ್ಯೆಯಂತಹ ದುರಂತ ನಿರ್ಧಾರಗಳಿಗೂ ಮುಂದಾಗುತ್ತಿದ್ದಾರೆ. ಸರ್ಕಾರ ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಮುಸ್ಲಿಂ ಜಮಾಅತ್ ಕೋಶಾಧಿಕಾರಿ ಅಬ್ದುಲ್ ರಹ್ಮಾನ್ ಹಾಜಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ತಿಂಗಳುಗಟ್ಟಲೆ ರಾತ್ರಿ-ಹಗಲೆನ್ನದೆ ಶ್ರಮಪಟ್ಟು ಓದುತ್ತಾರೆ. ಆದರೆ ಪರೀಕ್ಷಾ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳು ಅವರ ಪರಿಶ್ರಮವನ್ನೇ ವ್ಯರ್ಥಗೊಳಿಸುತ್ತಿವೆ. ವಿದ್ಯಾರ್ಥಿಗಳ ಸಮಯ ಮತ್ತು ಸಂಪತ್ತನ್ನು ಹಾಳುಮಾಡಿದ ಲೂಟಿಕೋರರ ವಿರುದ್ಧ ಸರ್ಕಾರ ಸೂಕ್ತ ಹಾಗೂ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಯಕ್ರಮದಲ್ಲಿ ಶಬೀಬ್, ಅಡ್ವೋಕೇಟ್ ಬದ್ರುದ್ದೀನ್ ಮೆಜೆಸ್ಟಿಕ್, ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ವಫಿ ಕಾರ್ಯದರ್ಶಿ ಶಂಸು ಗಾಂಜಾಲ್, ಶಾಫಿ ಸಹದಿ ಮೆಜೆಸ್ಟಿಕ್ ಸೇರಿದಂತೆ ಹಲವರು ಮಾತನಾಡಿದರು. ಪರೀಕ್ಷಾ ವ್ಯವಸ್ಥೆಯ ಮೇಲಿನ ವಿದ್ಯಾರ್ಥಿಗಳ ನಂಬಿಕೆಯನ್ನು ಕುಂದಿಸುವ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ವಿವಿಧ ಡಿವಿಷನ್ ಗಳಿಂದ ವಿದ್ಯಾರ್ಥಿಗಳು ಭಾಗವಹಿಸಿ, ವಿದ್ಯಾರ್ಥಿಗಳ ನ್ಯಾಯಕ್ಕಾಗಿ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೋಡಲ್ ಅಧಿಕಾರಿಗಳಿಂದ ಕಾಮಗಾರಿಗಳ ಪರಿಶೀಲನೆ
ಅನುವಾದಕ್ಕೆ ತಂತ್ರಜ್ಞಾನ ಪೂರಕವೇ ಹೊರತು ಪರ್ಯಾಯವಲ್ಲ